ಕಾರ್ಯದರ್ಶಿಯಾಗಿ ಮೂರ್ತಿ ನೇಮಕ
ಮಾಗಡಿ: ತಾಲೂಕಿನ ಕುದೂರು ಹೋಬಳಿ ಕಾಗಿಮಡು ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಮೂರ್ತಿ ಅವರು ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಮೂರ್ತಿ ಅವರ ಕಾರ್ಯದಕ್ಷತೆ, ಸಂಘಟನಾ ಚತುರತೆ, ಹೋರಾಟ ಮನೋಭಾವನೆ, ಕ್ರಿಯಾಶೀಲ ಕಾರ್ಯಚಟುವಟಿಕೆಯನ್ನು ಗಮನಿಸಿ ರಾಜ್ಯಾದ್ಯಕ್ಷ ಯಲ್ಲಪ್ಪ ಅವರು, ಮೂರ್ತಿ ಅವರನ್ನು ರಾಜ್ಯ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಮಾಗಡಿ ಭಾಗದ ಸಂಪೂರ್ಣ ಜವಾಬ್ದಾರಿಯನ್ನು ನೀಡಿದ್ದಾರೆ.
ರಾಜ್ಯದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶಿಕ್ಷಕ ಮೂರ್ತಿ ಅವರು ಇದೇ ವೇಳೆ ಮಾತನಾಡಿ ಸಂಘವು ಅನೇಕ ಧ್ಯೇಯೋದ್ಧೇಶಗಳನ್ನು ಗುರಿಯಾಗಿಟ್ಟುಕೊಂಡು ರಚನೆಯಾಗಿದೆ. ಅನೇಕ ವರ್ಷಗಳಿಂದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರೌಢಶಾಲೆಗೆ ಬಡ್ತಿ ಹೊಂದುವ ಶಿಕ್ಷಕರಿಗೆ ಅನ್ವಯವಾಗುವ ಅನೇಕ ಅವೈಜ್ಞಾನಿಕ ಕಾನೂನುಗಳ ವಿರುದ್ಧ ಹೋರಾಟ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಸಮಾಜ ಸೇವಾ ಕೈಂಕರ್ಯಗಳನ್ನು ಹಮ್ಮಿಕೊಳ್ಳುವ ದೃಢ ವಿಶ್ವಾಸ ಹೊಂದಿದ್ದೇನೆ ಎಂದು ತಿಳಿಸಿದರು.
ಅಭಿನಂದನೆ: ರಾಜ್ಯ ಸಹ ಶಿಕ್ಷಕರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಮೂರ್ತಿ ಅವರನ್ನು ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲೂರು ಲೋಕೇಶ್, ಮುಖ್ಯಶಿಕ್ಷಕ ಭೋಗರಾಜು ಇತರರು ಅಭಿನಂದಿಸಿದರು.
ಕೆಎಸ್ಆರ್ಟಿಸಿ ಬಸ್ ಪಲ್ಟಿ: 6 ಮಂದಿಗೆ ಗಾಯ
ಮಾಗಡಿ: ಕೆಎಸ್ಆರ್ಟಿಸಿ ಬಸ್ ಪಲ್ಟಿ ಹೊಡೆದ ಪರಿಣಾಮ 6 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48 ರ ಕೂಡ್ಲೂರು ಗೇಟ್ ಬಳಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳನ್ನು ಸೋಲೂರು, ಕುದೂರು, ನೆಲಮಂಗಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಸನದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದೂರು: ರಾಷ್ಟ್ರೀಯ ಹೆದ್ದಾರಿ 48 ರ ರಸ್ತೆ ಮಾರ್ಗದಲ್ಲಿ ಬಹುತೇಕ ಗ್ರಾಮಗಳಿದ್ದು, ಆಗಾಗ್ಗೆ ರಸ್ತೆ ಅಪಘಾತಗಳು ಹೆಚ್ಚೆಚ್ಚು ನಡೆಯುತ್ತಿರುತ್ತದೆ. ನಾಗರಿಕರು ರಸ್ತೆ ದಾಟಲು ಆಗದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಿಗ್ನಲ್ ಲೈಟ್ಗಳನ್ನು ಅಳವಡಿಸಿಲ್ಲ ಎಂದು ನಾಗರಿಕರು ದೂರಿದ್ದಾರೆ. ಹೆದ್ದಾರಿ ಮಧ್ಯೆ ಸಿಗುವ ಗ್ರಾಮಗಳ ಬಳಿ ಸಿಗ್ನಲ್ ಲೈಟ್ ಅಳವಡಿಸಬೇಕು, ಪಾದಚಾರಿ ಸಂಚಾರಕ್ಕೆ ಅನುಕೂಲಕರವಾದ ಪಟ್ಟೆಗಳನ್ನು ಹಾಕುವ ಮೂಲಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಲೋಕೇಶ್ ಕಾರಿಗೆ ಬೆಂಕಿ
ಆನೇಕಲ್ಲು: ಚುನಾವಣಾ ದಿನ ನಡೆದ ಗಲಾಟೆ ನಡೆದದ್ದನ್ನು ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಮುಖಂಡ ಲೋಕೇಶ್ ಅವರ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಹೆನ್ನಾಗರದಲ್ಲಿ ನಡೆದಿದೆ. ಚುನಾವಣೆ ದಿನ ಬೂತ್ ಬಳಿ ಪೆಂಡಾಲ್ ಹಾಕುವ ಸ್ಥಳಕ್ಕಾಗಿ ನಡೆದ ಕಿತ್ತಾಟದಲ್ಲಿ ಮಂಜುನಾಥ, ರಘುನಾಥ ಹಾಗೂ ಪಂಚಾಯ್ತಿ ಸದಸ್ಯ ಕೃಷ್ಣಾರೆಡ್ಡಿ ತಮ್ಮ ಮೇಲೆ ಹಲ್ಲೆ ನಡೆಸಿದರು. ಇದೇ ಸಂದರ್ಭದಲ್ಲಿ ತಮ್ಮ ತಾಯಿಯವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಲೋಕೇಶ್ ಠಾಣೆಯಲ್ಲಿ ದೂರು ನೀಡಿದ್ದರು.
ಹೆಬ್ಬಗೋಡಿ ಪೊಲೀಸರು ಬಿಜೆಪಿ ಕಾರ್ಯಕರ್ತ ಮಂಜುನಾಥನನ್ನು ಭಾನುವಾರ ರಾತ್ರಿ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಮತ್ತೆ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ಲೋಕೇಶ್ ಮತ್ತೊಂದು ದೂರು ನೀಡಿದ್ದಾರೆ. ಉಳಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಸನಿಹದಲ್ಲೇ ವಶಕ್ಕೆ ಪಡೆಯುವುದಾಗಿ ಹೆಬ್ಬಗೋಡಿ ಪಿಎಸ್ಐ ಹನುಮಂತಪ್ಪ ತಿಳಿಸಿದ್ದಾರೆ.
ಸಿಸಿ ಕ್ಯಾಮೆರಾದಲ್ಲಿ ಸುಳಿವು
ಲೋಕೇಶ್ ಮನೆಯ ಬಳಿ ಇರುವ ಬ್ಯಾಂಕ್ ಹಾಗೂ ಮೆಡಿಕಲ್ ಸ್ಟೋರ್ ಬಳಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ಕಾರಿಗೆ ಬೆಂಕಿ ಹಚ್ಚಿದ ವ್ಯಕ್ತಿಗಳ ಬಗ್ಗೆ ಸ್ವಲ್ಪ ಸುಳಿವು ದೊರೆತಿದೆ. ಇಬ್ಬರು ವ್ಯಕ್ತಿಗಳು ಕಾರಿಗೆ ದ್ರವವನ್ನು ಸುರಿಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಿದ್ದು ಕ್ರಮ ವಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ಗೆ ಬಲಿಯಾದವರು 1164 ಮಂದಿ
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ಗೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದರೂ ಇಲಾಖೆ ಯಾವುದೇ ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಅಶ್ವತ್ಥನಾರಾಯಣ ದೂರಿದ್ದಾರೆ.
ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸೋಮವಾರ ನಡೆಸಿದ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ್, ಎಸ್ಕಾಂಗಳ ಬೇಜವಾಬ್ದಾರಿಯನ್ನು ಆಯೋಗದ ಗಮನಕ್ಕೆ ತಂದರು. ಈ ಬಗ್ಗೆ ಸ್ಪಷ್ಟ ಸೂಚನೆ ನೀಡುವಂತೆ ಆಯೋಗವನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಈವರ್ಷ ಜನವರಿಯಿಂದ ಈತನಕ 64 ಮಂದಿ ಸತ್ತಿದ್ದಾರೆ. ಅದೇರೀತಿ ಕಳೆದ ವರ್ಷದಿಂದೀಚೆಗೆ 1164 ಮಂದಿ ವಿದ್ಯುತ್ಗೆ ಬಲಿಯಾಗಿದ್ದಾರೆ. ಇದಕ್ಕೆ ಇಲಾಖೆ ಅಲಕ್ಷ್ಯ ಹಾಗೂ ಎಸ್ಕಾಂಗಳು ಯಾವುದೇ ಜಾಗರೂಕತೆ ವಹಿಸದಿರುವುದೇ ಕಾರಣ ಎಂದರು.
ವಿದ್ಯುತ್ ಸರಬರಾಜು ಮತ್ತು ಮಾರ್ಗ ಕಾಮಗಾರಿ ಮಾಡುವಾಗ ಎಸ್ಕಾಂಗಳು ಯಾವುದೇ ಜಾಗರೂಕತೆ ವಹಿಸದೆ ಎಷ್ಟೋ ಮಂದಿ ಇಲಾಖೆಯವರೇ ಕಂಬದಲ್ಲೇ ಸತ್ತಿದ್ದಾರೆ. ಆದ್ದರಿಂದ ಮೊದಲು ಅಗತ್ಯ ಕ್ರಮಕೈಗೊಳ್ಳಬೇಕೇ ವಿನಃ ದರ ಏರಿಕೆ ಮಾಡಬಾರದು ಎಂದು ಅಭಿಪ್ರಾಯಪಟ್ಟರು.
ಹೈಕೋರ್ಟ್ ನ್ಯಾ. ಮಹಿಳೆ ಆಯ್ಕೆ ಸಂತಸದ ಸಂಗತಿ
ದೊಡ್ಡಬಳ್ಳಾಪುರ: ದೆಹಲಿಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧಿಕಾರ ಸ್ವೀಕರಿಸಿರುವುದು ದೇಶದ ಹೆಮ್ಮೆ ಎಂದು ಇಲ್ಲಿನ ಮಹಿಳಾ ಸಂಘಟನೆಗಳು ಪ್ರತಿಕ್ರಿಯಿಸಿವೆ. ಜಿ.ರೋಹಿಣಿ ಅವರು ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಕುರಿತು ಹೇಳಿಕೆ ನೀಡಿರುವ ಮಾಜಿ ನಗರಸಭಾಸದಸ್ಯೆ ಪ್ರಮೀಳಾ ಮಹದೇವ್,ಇದು ದೇಶದ ಮಹಿಳೆಯರೆಲ್ಲರಿಗೂ ಸಂದ ಗೌರವ. ಈ ಬಗೆಯ ಉನ್ನತ ಹುದ್ದೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುವಂತಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ.
ಕಲ್ಲಿನಿಂದ ಜಜ್ಜಿ ವ್ಯಕ್ತಿ ಕೊಲೆ
ದೊಡ್ಡಬಳ್ಳಾಪುರ: ಕಲ್ಲಿನಿಂದ ಜಜ್ಜಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ಡಿಕ್ರಾಸ್ ರಸ್ತೆಯಲ್ಲಿರುವ ಎಲ್ಐಸಿ ಭವನದ ಪಕ್ಕದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸಮೀಪ ಭಾನುವಾರ ತಡರಾತ್ರಿ ನಡೆದಿದೆ. ಮೃತನನ್ನು ಕರೇನಹಳ್ಳಿ ಜಯಣ್ಣ (45) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ನೇಕಾರನಾಗಿದ್ದು, ಕುಡಿತದ ಚಟಕ್ಕೊಳಗಾಗಿದ್ದ. ಕೆಲ ವರ್ಷಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದ ಎನ್ನಲಾಗಿದ್ದು, ಘಟನೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗ್ರಾ.ಪಂ. ಅಧ್ಯಕ್ಷರ ಪತಿ ಮೇಲೆ ಹಲ್ಲೆ
ಹೊಸಕೋಟೆ: ತಾಲೂಕಿನ ವಾಗಟ ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷೆ ಸುಷ್ಮಾ ಎಂಬುವರ ಪತಿ ಮಂಜುನಾಥ ಎಂಬುವರ ಮೇಲೆ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಏ.18ರಂದು ರಾತ್ರಿ 10 ಗಂಟೆ ಸಮಯದಲ್ಲಿ ದಿನಸಿ ಅಂಗಡಿಯನ್ನು ಮುಚ್ಚುತ್ತಿದ್ದಾಗ ಅದೇ ಗ್ರಾಮದ ವಿ.ಜಿ. ಸೊಣ್ಣೇಗೌಡ, ವರದರಾಜು, ನಮೀನ್, ಗೋಪಿ, ಅಶೋಕ್ಕುಮಾರ್ ಕಾರಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದರು. ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮದ ಇಸ್ಮಾಯಿಲ್ ಎಂಬುವರ ಮನೆ ಮೇಲೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಸೂಕ್ತ ರಕ್ಷಣೆ ನೀಡಬೇಕು ಎಂದು ಮಂಜುನಾಥ ತಿರುಮಲಶೆಟ್ಟಿಹಳ್ಳಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಎಸ್ಎಂಎಸ್ ಮೂಲಕ ಪಿಂಚಣಿ ಮಾಹಿತಿ
ಬೆಂಗಳೂರು: ರಾಜ್ಯದ ಪ್ರಧಾನ ಮಹಾಲೇಖಪಾಲಕರ ಕಚೇರಿಯು ಹೊಸದಾಗಿ 'ಪಿಂಚಣಿ ಪರಿಶೀಲನಾ ವ್ಯವಸ್ಥೆ'ಯನ್ನು ಪ್ರಾರಂಭಿಸಿದೆ. ಪಿಂಚಣಿದಾರರು ಪಿಂಚಣಿ ಅರ್ಜಿ ತಲುಪಿದ್ದಕ್ಕೆ ಎಸ್ಎಂಎಸ್ ಮೂಲಕ ಅರ್ಜಿ ಸಂಖ್ಯೆ ಪಡೆಯಬಹುದು. ಪಿಂಚಣಿ ಅಧಿಕಾರ ಪತ್ರವನ್ನು ಖಜಾನೆಗೆ ಕಳುಹಿಸಿದ್ದಕ್ಕೆ ಇನ್ನೊಂದು ಎಸ್ಎಂಎಸ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಎಸ್ಎಂಎಸ್ ವ್ಯವಸ್ಥೆಯ ಅಗತ್ಯ ಇದ್ದರೆ ಪಿಂಚಣಿ ಅರ್ಜಿಯಲ್ಲಿ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಮೊಬೈಲ್ ಸಂಖ್ಯೆ 9212357123ಗೆ ಪಿಂಚಣಿ ಅರ್ಜಿ ಸಂಖ್ಯೆಯನ್ನು ಎಸ್ಎಂಎಸ್ ಕಳಿಸುವುದರ ಮೂಲಕ ಪಿಂಚಣಿ ಬಿಡುಗಡೆ ಯಾವ ಹಂತದಲ್ಲಿ ಇದೆ ಎಂಬುದರ ಮಾಹಿತಿ ಪಡೆದುಕೊಳ್ಳಬಹುದು ಎಂದು ಮಹಾಲೇಖಪಾಲರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದೆ.
ಪುಸ್ತಕಗಳ ಉತ್ಸವ ವಸ್ತುಪ್ರದರ್ಶನ
ರಾಮನಗರ: ಕೃಷಿ ಮತ್ತು ಗ್ರಾಹಕರ ಅಭಿವೃದ್ಧಿ ಪ್ರದರ್ಶಕರು, ಕೃಷಿ ಹಾಗೂ ರೇಷ್ಮೆ ಇಲಾಖೆ ಸಹಯೋಗದೊಂದಿಗೆ ಕೃಷಿ, ಗೃಹೋಪಯೋಗಿ ವಾಹನಗಳ ಮತ್ತು ಪುಸ್ತಕಗಳ ಉತ್ಸವ ವಸ್ತುಪ್ರದರ್ಶನವನ್ನು ನಗರದ ಗುರುಭವನದಲ್ಲಿ ಏ.23 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದೆ. ಏ.23ರ ಬೆಳಗ್ಗೆ 11.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ವಸ್ತುಪ್ರದರ್ಶನವನ್ನು ಉದ್ಘಾಟಿಸುವರು. ಜಂಟಿ ಕೃಷಿ ನಿರ್ದೇಶಕ ಅಣ್ಣಯ್ಯ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ.ಕುಮಾರಸ್ವಾಮಿ, ತಾಲೂಕು ಕಸಾ.ಪ ಅಧ್ಯಕ್ಷ ಬಿ.ಟಿ.ದಿನೇಶ್, ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ, ರೇಷ್ಮೆ ಜಿಲ್ಲಾ ಉಪ ನಿರ್ದೇಶಕ ಲಕ್ಷ್ಮೀಪತಿ ರೆಡ್ಡಿ ಮತ್ತಿತರರು ಭಾಗವಹಿಸುವರು.
ಬೇಸಿಗೆ ಉಚಿತ ಶಿಬಿರ
ರಾಮನಗರ: ಜಿಲ್ಲಾ ಬಾಲಭವನ ಸೊಸೈಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏ.28 ರಿಂದ ಮೇ 7 ರವರೆಗೆ ನಗರದ ಶಾಂತಿನಿಕೇತನ ಶಾಲೆಯಲ್ಲಿ 7 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಯೋಗ, ಕರಾಟೆ, ನೃತ್ಯ, ಪ್ರವಾಸ ಮತ್ತು ಜಾದೂ ಇತ್ಯಾದಿ ಕಾರ್ಯಕ್ರಮಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಲಾಗುವುದು. ಆಸಕ್ತಿಯುಳ್ಳ ಮಕ್ಕಳು ರಾಮನಗರದಲ್ಲಿರುವ ಜಿಲ್ಲಾ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿ.ಪಂ. ಭವನ, 2ನೇ ಮಹಡಿ ಇಲ್ಲಿ ಏ.26ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಅಥವಾ ದೂ.080-27273036 ಸಂಪರ್ಕಿಸಬಹುದು.
ಕಾಂಗ್ರೆಸ್ ಗೆಲವು ನಿಶ್ಚಿತ: ಶಾಸಕರ ವಿಶ್ವಾಸ
ದೊಡ್ಡಬಳ್ಳಾಪುರ: ಏ.17ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಎಲ್ಲ ಮತದಾರರು ಮತ್ತು ಕಾರ್ಯಕರ್ತರಿಗೆ ಶಾಸಕ ಟಿ.ವೆಂಕಟರಮಣಯ್ಯ ಕೃತಜ್ಞತೆ ಸಲ್ಲಿಸಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಿರಂತರ ಪರಿಶ್ರಮವಹಿಸಿ ಪಕ್ಷದ ಪರ ಕೆಲಸ ಮಾಡಿದ್ದಾರೆ. ಅದೇ ರೀತಿ ನಾಗರಿಕರು ಕೂಡ ಉತ್ತಮ ಬೆಂಬಲ ನೀಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೀರಪ್ಪ ಮೊಯ್ಲಿ ಅವರಿಗೆ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಮುನ್ನಡೆ ಖಚಿತ.
ಅಲ್ಲದೆ ಚಿಕ್ಕಬಳ್ಳಾಪುರ ಲೋಕಸಭಾಕ್ಷೇತ್ರದ ಎಲ್ಲ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಮೊಯ್ಲಿ ಅವರ ಗೆಲವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರಾದ ಜಿ.ಲಕ್ಷ್ಮೀಪತಿ, ವೆಂಕಟೇಶ್ (ಅಪ್ಪಿ), ಕೆ.ಜಿ.ರಘುರಾಂ ಸೇರಿದಂತೆ ವಿವಿಧ ಘಟಕಗಳ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

