ಬೆಂಗಳೂರು ಗ್ರಾಮಾಂತರ

ಬೆಂ.ಗ್ರಾಮಾಂತರದಲ್ಲಿ ಗೆಲವು ನಮ್ಮದೇ

Published On :

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಪರ ಏಕೆ ಮತ ನೀಡಬೇಕೆನ್ನುವುದನ್ನು ಮನವರಿಕೆ ಮಾಡಿಕೊಟ್ಟು, ಮತದಾರರನ್ನು ಸೆಳೆದಿದ್ದಾರೆ. ಹೀಗಾಗಿ ಗೆಲವು ನಮ್ಮದೇ ಎಂದು ಬಿಜೆಪಿ ಅಭ್ಯರ್ಥಿ ಪಿ.ಮುನಿರಾಜುಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ರೀತಿ ಚುನಾವಣೆಯಲ್ಲಿ ನಾವು ಅಬ್ಬರ ನಡೆಸಲಿಲ್ಲ. ಒಳಗೆಲಸದ ಮೂಲಕ ಮತದಾರರನ್ನು ಮನವೊಲಿಸುವಲ್ಲಿ ಸಫಲರಾಗಿದ್ದೇವೆ. ಕ್ಷೇತ್ರದಲ್ಲಿ ಯಾವುದೇ ತಂತ್ರ, ಕುತಂತ್ರವೂ ಫಲಿಸುವುದಿಲ್ಲ. ನರೇಂದ್ರ ಮೋದಿ ಅಲೆ ವ್ಯಾಪಕವಾಗಿ ಕೆಲಸ ಮಾಡಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರದಲ್ಲಿ ಎರಡು ಅವಧಿ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ವಿರೋಧಿ ಅಲೆ ಜೆಡಿಎಸ್‌ಗೆ ಅನುಕೂಲವಾಗಿಲ್ಲ. ಇದರ ಸಂಪೂರ್ಣ ಲಾಭವನ್ನು ನಾವು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ನಗರದಲ್ಲೇ 4 ಲಕ್ಷ ಮತ: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲೇ ನನಗೆ 4 ಲಕ್ಷ ಮತಗಳು ಲಭಿಸಲಿದ್ದು, ರಾಮನಗರ ಜಿಲ್ಲೆಯ 4 ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದಲ್ಲಿ 1.50 ಲಕ್ಷ ಮತಗಳು ದೊರೆಯಲಿವೆ. ಹೀಗಾಗಿ ನನ್ನ ಗೆಲವನ್ನು ಯಾರಿಂದಲೂ ತಡೆಯಲು ಸಾಧ್ಯವೇ ಇಲ್ಲ ಎಂದು ಮುನಿರಾಜುಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಸೋಲು-ಗೆಲುವು ಏನೇ ಆದರೂ ನಾನು ಕ್ಷೇತ್ರ ಬಿಟ್ಟು ಹೋಗುವವನಲ್ಲ. ಕೇಂದ್ರದಲ್ಲಿ ಈ ಬಾರಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆ ಖಚಿತವಾಗಿದೆ. ಹೀಗಾಗಿ ಕೇಂದ್ರದ ಅನುದಾನ ಮತ್ತು ಯೋಜನೆಗಳನ್ನು ತಂದು ಇಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವೆ ಎಂದು ಅವರು ಹೇಳಿದರು.
ಕ್ಷೇತ್ರವನ್ನು ಪ್ರಮುಖವಾಗಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ನೀರಾವರಿ ಯೋಜನೆ ಜಾರಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಚನ್ನಪಟ್ಟಣ ಮತ್ತು ರಾಮನಗರವನ್ನು ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸುವುದು, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡುವೆ ಎಂದರು.
ಜೆಡಿಎಸ್, ಕಾಂಗ್ರೆಸ್ ದೋಸ್ತಿ: ಕ್ಷೇತ್ರದಲ್ಲಿ ವ್ಯಾಪಕವಾಗಿದ್ದ ನರೇಂದ್ರ ಮೋದಿ ಮತ್ತು ಬಿಜೆಪಿ ಅಲೆಯನ್ನು ಗಮನಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಒಳ ಒಪ್ಪಂದದೊಂದಿಗೆ ಚುನಾವಣೆ ಎದುರಿಸಿವೆ. ಸಾಕಷ್ಟು ಕಡೆ ಜೆಡಿಎಸ್ ವತಿಯಿಂದ ಮತಗಟ್ಟೆ ಏಜೆಂಟರೇ ಇರಲಿಲ್ಲ. ಹಲವೆಡೆ ಆ ಪಕ್ಷದ ಮತಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ವರ್ಗವಾಗಿವೆ ಎಂದು ಮಾಜಿ ಸಂಸದೆ ತೇಜಸ್ವಿನಿಗೌಡ ತಿಳಿಸಿದರು.
ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡಿ, ಸಹಸ್ರಾರು ಕೋಟಿ ರು. ಹಣ ಸಂಪಾದಿಸಿರುವ ಡಿಕೆಎಸ್ ಸಹೋದರರಿಂದ ಅಧಿಕಾರಿಗಳು ಮತ್ತು ಪೊಲೀಸರೇ ಆತಂಕದಿಂದ ಚುನಾವಣೆ ನಡೆಸಿದ್ದಾರೆ. ಇಂತಹ ಬಿಗುವಿನ ಪರಿಸ್ಥಿತಿಯಲ್ಲೂ ಮತಯಾಚಿಸಲು ಒಂದಿಷ್ಟು ಮುಕ್ತ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಅಧಿಕಾರಿಗಳನ್ನು ಅಭಿನಂದಿಸುವೆ ಎಂದು ಅವರು ವ್ಯಂಗ್ಯವಾಡಿದರು.
ಮರು ಚುನಾವಣೆಗೆ ಆಗ್ರಹ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ಆಪ್, ಬಿಎಸ್ಪಿ ಮಾತ್ರವಲ್ಲದೆ ಬಿಜೆಪಿಯಿಂದಲೂ ಮನವಿ ಸಲ್ಲಿಸಲಾಗಿದೆ. ನಮ್ಮ ದೂರಿನ ಮೇರೆಗೆ ಚುನಾವಣಾ ಆಯೋಗ ಕ್ರಮ ಕೈಗೊಂಡರೆ, ಮರು ಚುನಾವಣೆಯಲ್ಲಿ ಬಿಜೆಪಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದು ತೇಜಸ್ವಿನಿಗೌಡ ತಿಳಿಸಿದರು.
ಕಾಂಗ್ರೆಸ್‌ನಿಂದ ಬೆಂಬಲ ಪಡೆದು ಸರ್ಕಾರ ರಚಿಸಿದ್ದ ಅರವಿಂದ ಕೇಜ್ರಿವಾಲ್ ಅವರಿಗೆ ಬಿಜೆಪಿ ಸಹಿತ ಬೇರೆ ಯಾವುದೇ ಪಕ್ಷದವರನ್ನು ಟೀಕಿಸುವ ನೈತಿಕ ಹಕ್ಕಿಲ್ಲ. ಅಧಿಕಾರದ್ದಲ್ಲಿದ್ದಾಗಲೇ ರಸ್ತೆಗಿಳಿದು ಹೋರಾಟ ನಡೆಸುವ ನಾಯಕರಿಂದ ದೇಶೋದ್ಧಾರ ಆಗದು. ಕೇಜ್ರಿವಾಲ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಭ್ರಮನಿರಸನ ಕಟ್ಟಿಟ್ಟಬುತ್ತಿ ಎಂದರು.  
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ನಾಗರಾಜು, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಮುಖಂಡರಾದ ಪದ್ಮನಾಭ, ಜಗದೀಶ್ ಪ್ರಸಾದ್, ಶಿವಮಾದು, ರವಿಕುಮಾರಗೌಡ, ಎಸ್.ಆರ್.ನಾಗರಾಜು, ರುದ್ರದೇವರು, ಚಂದನ್‌ಮೋರೆ, ಗುಲಾಬ್ ಜಾನ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.