ಬೆಂಗಳೂರು ಗ್ರಾಮಾಂತರ

ಹೆಚ್ಚಿನ ಮತದಾನಕ್ಕೆ ಎಲ್ಲರ ಸಹಕಾರ ಕಾರಣ

Published On :

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ಮತದಾನವಾಗಲು ಮತ್ತು ಅಚ್ಚುಕಟ್ಟಾಗಿ ಚುನಾವಣೆ ನಡೆಸಲು ಅಧಿಕಾರಿಗಳೆಲ್ಲ ಒಂದು ತಡವಾಗಿ ಕಾರ್ಯ ನಿರ್ವಹಿಸಿದ್ದೇ ಕಾರಣ. ಇದು ಯಾರೊಬ್ಬರ ಯಶಸ್ಸು ಅಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಹೇಳಿದರು.  
ಈ ಬಾರಿಯ ಚುನಾವಣೆಯಲ್ಲಿ ರಾಮನಗರ ಜಿಲ್ಲೆ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಶತ 75 ರಿಂದ 80ರಷ್ಟು ಮತದಾನ ಆಗಬೇಕೆನ್ನುವ ನಿರೀಕ್ಷೆ ಹುಸಿಯಾಗಲಿಲ್ಲ. ಈ ಜಿಲ್ಲೆಯಲ್ಲಿ ಶೇಕಡ 77.98ರಷ್ಟು ಮತದಾನವಾಗಿರುವುದು ತೃಪ್ತಿತಂದಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.  ಬೆಂಗಳೂರು ನಗರ ಜಿಲ್ಲೆಗೆ ಸೇರಿದ 3 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಬಾರಿ ಮತದಾನ ಪ್ರಮಾಣ ಕಳೆದ ಚುನಾವಣೆಗೆ ಹೋಲಿಸಿದರೆ ಸಾಕಷ್ಟು ಹೆಚ್ಚಳವಾಗಿದೆ. ಕ್ಷೇತ್ರದಲ್ಲಿ 1600 ಸಿಬ್ಬಂದಿ ಇಡಿಸಿ ಮೂಲಕ ಮತ ಚಲಾಯಿಸಿದ್ದಾರೆ. ಅಂಚೆ ಮತದಾನಕ್ಕೆ ಮೇ 14ರವರೆಗೂ ಅವಕಾಶವಿದ್ದು, ಆ ಬಳಿಕವಷ್ಟೇ ನಿರ್ದಿಷ್ಟ ಮಾಹಿತಿ ಲಭ್ಯವಾಗಲಿದೆ ಎಂದರು.   
ಎಪಿಕ್ ಕಾರ್ಡ್ ಬಳಕೆ: ಪ್ರಸಕ್ತ ಚುನಾವಣೆಯಲ್ಲಿ ವಿಶೇಷವೆಂದರೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಶೇಕಡ  64.86 ಮತದಾರರು ಎಪಿಕ್ ಕಾರ್ಡ್ ಬಳಸಿ ಮತದಾನ ಮಾಡಿರುತ್ತಾರೆ. ಅಂತೆಯೇ ಚುನಾವಣಾ ಆಯೋಗವು ಒದಗಿಸಿದ್ದ ವೋಟರ್ಸ್ ಸ್ಲಿಪ್ ಬಳಸಿ ಶೇಕಡ 28.62ರಷ್ಟು ಮತಗಳು ಚಲಾವಣೆಗೊಂಡಿವೆ ಎಂದು ವಿಶ್ವನಾಥ್ ತಿಳಿಸಿದರು.  ಶೇಕಡ 77.98ರಷ್ಟು ಮತದಾನದೊಂದಿಗೆ ಜಿಲ್ಲಾವಾರು ಮತದಾನದಲ್ಲಿ ರಾಮನಗರ ಜಿಲ್ಲೆ 3ನೇ ಸ್ಥಾನ ಪಡೆದಿದೆ. ಕಳೆದ ಲೋಕಸಭಾ ಉಪ ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿ ಜಿಲ್ಲೆಯಲ್ಲಿ ಶೇಕಡ 7.08 ರಷ್ಟು ಮತದಾನ ಹೆಚ್ಚಳವಾಗಿದ್ದರೆ, ಇತರೆ 4 ವಿಧಾನಸಭಾ ಕ್ಷೇತ್ರಗಳಲ್ಲಿ ಶೇಕಡ 18.32ರಷ್ಟು ಮತದಾನ ಹೆಚ್ಚಳ ಕಾಣಲಾಗಿದೆ. ಒಟ್ಟಾರೆ ಹೆಚ್ಚಳ ಶೇಕಡ 14.47 ಎಂದರು.  
ಹಲವರಿಗೆ ನೋಟಿಸ್ : ಚುನಾವಣಾ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಚುನಾವಣಾ ಖರ್ಚು ವೆಚ್ಚ ನಿಗಾ ಸಮಿತಿಯ ಅಧಿಕಾರಿ ಹನುಮಂತರಾಯಪ್ಪ ಅವರನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ. ಕರ್ತವ್ಯಲೋಪ ಎಸಗಿದ ಪ್ರಕರಣಗಳ ಸಂಬಂಧ ವಿವಿಧ ಅಧಿಕಾರಿಗಳು, ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ವಿಶ್ವನಾಥ್ ಹೇಳಿದರು.
ನೊಟೀಸ್‌ಗೆ ಸಂಬಂಧಿಸಿದ ಅಧಿಕಾರಿಗಳು ನೀಡುವ ಉತ್ತರವನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಚುನಾವಣಾ ಕರ್ತವ್ಯದ ವೇಳೆ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಎಲ್ಲೂ ಕಾಡಿಲ್ಲ. ಅತ್ಯಂತ ಯಶಸ್ವಿಯಾಗಿ ಚುನಾವಣೆ ಮುಗಿಸಲು ಅಧಿಕಾರಿಗಳು, ಸಿಬ್ಬಂದಿ ವೃಂದ, ಮಾಧ್ಯಮಗಳ ಸಹಕಾರವೂ ಕಾರಣವಾಯಿತು ಎಂದು ಅವರು ಕೃತಜ್ಞತೆ ಸಲ್ಲಿಸಿದರು.
2 ಪ್ರಕರಣ ದಾಖಲು: ಕಾಸಿಗಾಗಿ ಸುದ್ದಿ ಸಂಬಂಧ ಈ ಲೋಕಸಭಾ ಕ್ಷೇತ್ರದಲ್ಲಿ 2 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಚುನಾವಣಾ ನೋಡಲ್ ಅಧಿಕಾರಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಜಯಮಾಧವ, ಚುನಾವಣಾ ಶಾಖೆ ತಹಸೀಲ್ದಾರ್ ಹೊನ್ನಶ್ಯಾಮೇಗೌಡ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.