ಮರಳು ಅಕ್ರಮಕ್ಕೆ ಬಹುಮಾನದ ಉರುಳು!
ರಾಮನಗರ: ಅಕ್ರಮ ಮರಳುಗಾರಿಕೆ, ಸಾಗಣೆ ವಿರುದ್ಧ ದೂರು ನೀಡುವ ಸಾರ್ವಜನಿಕರಿಗೆ ನಗದು ಬಹುಮಾನ ನೀಡುವ ವಿನೂತನ ಯೋಜನೆ ಜಾರಿ ಸಂಬಂಧ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.
ಸಾರ್ವಜನಿಕರಿಂದ ಮಾಹಿತಿ ಮತ್ತು ಸಹಕಾರ ದೊರೆಯದ ಹೊರತು ಅಕ್ರಮ ಮರಳುಗಾರಿಕೆಗೆ ನಿಯಂತ್ರಣ ಅಸಾಧ್ಯವೆಂದು ಮನಗಂಡಿರುವ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ದೂರುದಾರರಿಗೆ ನಗದು ಬಹುಮಾನ ನೀಡುವ ಯೋಜನೆಯತ್ತ ಒಲವು ತೋರಿದ್ದಾರೆ.
ಅಕ್ರಮವಾಗಿ ದಾಸ್ತಾನು ಮತ್ತು ಸಾಗಣೆ ಮಾಡುವಾಗ ಸಿಕ್ಕಬಿದ್ದ ಮರಳು ಮಾರಾಟದಿಂದ ಬಂದ ಹಣ ಟಾಸ್ಕ್ಫೋರ್ಸ್ ನಿಧಿಯಲ್ಲಿರುತ್ತದೆ.
ಅದರ ಜೊತೆಗೆ, ದೂರುದಾರರಿಗೆ ಬಹುಮಾನ ನೀಡಲು ಅವಕಾಶ ಕಲ್ಪಿಸುವಂತೆ ಪ್ರಸ್ತಾವನೆಯಲ್ಲಿ ಅವರು ಸರ್ಕಾರವನ್ನು ಅಧಿಕೃತವಾಗಿ ಕೋರಿದ್ದಾರೆ.
ಅಸಹಕಾರವೇ ಮೈವೆತ್ತಿದೆ...
ರಾಮನಗರ ಜಿಲ್ಲೆಯ ನದಿ, ತೊರೆ, ಕಂದಾಯ ಜಮೀನುಗಳಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕುವ ಪ್ರಯತ್ನಗಳೆಲ್ಲ ವಿಫಲವಾಗಲು ಸಾರ್ವಜನಿಕರ ಅಸಹಾಕಾರವೇ ಕಾರಣವೆನ್ನುವ ಹತಾಶೆ ಜಿಲ್ಲಾಡಳಿತವನ್ನು ಕಾಡುತ್ತಿದೆ. ದಂಧೆಕೋರರು ನೀಡುತ್ತಿರುವ ಅಲ್ಪ ಮೊತ್ತದ ಹಣದಾಸೆಗೆ ಬಿದ್ದು ಸಾರ್ವಜನಿಕರು ಅಕ್ರಮಗಳಿಗೆ ನೆರವಾಗುತ್ತಿದ್ದಾರೆ. ಅಧಿಕಾರಿಗಳನ್ನು ದಿಕ್ಕುತಪ್ಪಿಸುತ್ತಿರುವವರೂ ಜನರೇ. ದಂಧೆಕೋರರ ವಿರುದ್ಧದ ಪ್ರಕರಣಗಳಲ್ಲಿ ಸಾಕ್ಷ್ಯ ಹೇಳುವವರೂ ಇಲ್ಲದೆ ಅದೆಷ್ಟೋ ದಂಧೆಕೋರರು ಬಚಾವಾಗುತ್ತಿದ್ದಾರೆ. ಮುಂದಿನ ಪೀಳಿಗೆ ಮೇಲೆ ಬೀರುವ ದುಷ್ಪರಿಣಾಮದ ಕುರಿತು ಅದೆಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕರು ತಮಗೇನೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ದಂಧೆಕೋರರಿಗೆ ಸಹಜವಾಗಿಯೇ ವರದಾನವಾಗಿದೆ.
ಡಿಸಿ ಲಗಾಮು ಹಿಡಿಯಲಿ
ಟಾಸ್ಕ್ಫೋರ್ಸ್ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ತಮ್ಮ ಅಧೀನದಲ್ಲಿ ಬರುವ ಅಧಿಕಾರಿಗಳಿಗೆ ಲಗಾಮು ಹಾಕಬೇಕಿದೆ. ಅಕ್ರಮ ಮರಳುಗಾರಿಕೆಗೆ ಸಹಕರಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಇದೆಲ್ಲಕ್ಕಿಂತ ಅಕ್ರಮ ಮರಳು ಮಾಫಿಯಾಕ್ಕೆ ನೆರವಾಗಿರುವುದೇ ರಾಜಕೀಯ ವ್ಯವಸ್ಥೆ. ಜನಪ್ರತಿನಿಧಿಗಳು ಕೆಲವೇ ಹಿಂಬಾಲಕರ ರಕ್ಷಣೆಗೆ ನಿಲ್ಲುವುದನ್ನು ಬಿಟ್ಟು, ತಮ್ಮ ಕ್ಷೇತ್ರ ಮತ್ತು ಜಿಲ್ಲೆಯ ಹಿತಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಅಕ್ರಮಗಳಿಗೆ ತನ್ನಿಂತಾನೇ ಅಂತ್ಯ ಕಾಣಬಹುದಾಗಿದೆ.
ಗ್ರಾಮಗಳಲ್ಲಿ ಚೆಕ್ಪೋಸ್ಟ್
ಅಕ್ರಮ ಮರಳು ದಂಧೆಕೋರರು ಪ್ರತಿ ಲಾರಿ ಲೋಡ್ ಮರಳು ಸಾಗಿಸಲು ದಾರಿ ಬಿಟ್ಟುಕೊಟ್ಟಿರುವ ಜಮೀನು ಮಾಲೀಕರಿಗೆ ರು.200, ರಸ್ತೆಯಲ್ಲಿ ಸಾಗುವಾಗ ಗ್ರಾಮಸ್ಥರೇ ಸ್ಥಾಪಿಸಿಕೊಂಡ ಅಕ್ರಮ ಚೆಕ್ಪೋಸ್ಟ್ಗಳಲ್ಲಿ ರು.200 ಲಂಚ ನೀಡುತ್ತಾರೆ. ಇನ್ನು, ಕಂದಾಯ, ಲೋಕೋಪಯೋಗಿ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ, ಸಾರಿಗೆ ಸಹಿತ ಟಾಸ್ಕ್ಫೋರ್ಸ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ನೀಡುವ ಲಂಚದ ಮೊತ್ತವೂ ಸಾಕಷ್ಟಿರುತ್ತದೆ. ದೂರುದಾರರಿಗೆ ಬಹುಮಾನ ಯೋಜನೆಯಿಂದ ಅಕ್ರಮಕ್ಕೆ ತೆರೆ ಎಳೆಯಲು ಅನುಕೂಲವಾಗಲಿದೆ.
ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

