ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಮಾಡಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಲಾಯಿತು.
ಸರ್ಕಾರವು ಅವೈಜ್ಞಾನಿಕವಾಗಿ ಜಿಲ್ಲಾ ಕೇಂದ್ರ ಸ್ಥಾಪಿಸಲು ಹೊರಟಿರುವುದು ಖಂಡನಾರ್ಹ. ಜಿಲ್ಲಾ ಕೇಂದ್ರ ಕಡ್ಡಾಯವಾಗಿ ದೊಡ್ಡಬಳ್ಳಾಪುರ ಅಥವಾ ಅದರ ಸುತ್ತಮುತ್ತಲ ಪ್ರದೇಶದಲ್ಲೇ ಸ್ಥಾಪನೆಯಾಗಬೇಕು ಎಂದು ಸಮಿತಿ ಆಗ್ರಹಿಸಿದೆ.
ನಂತರ ಮಾತನಾಡಿದ ಮುಖಂಡರು, ಹಲವು ವರ್ಷಗಳ ನ್ಯಾಯಸಮ್ಮತ ಬೇಡಿಕೆ ಈಡೇರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರ, ಪ್ರಜ್ಞಾವಂತಿಕೆ ಮತ್ತು ಇಚ್ಚಾಶಕ್ತಿ ಪ್ರದರ್ಶಿಸದ ಸ್ಥಳೀಯ ರಾಜಕಾರಣಿಗಳು, ಸ್ವಹಿತಾಸಕ್ತಿ ಮೇಲೆ ಸವಾರಿ ಮಾಡುತ್ತಿರುವ ಆಡಳಿತ ಯಂತ್ರದ ಧೋರಣೆ ಖಂಡನೀಯ ಎಂದರು.
ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ನಡುವೆ ಜಿಲ್ಲಾ ಕೇಂದ್ರ ಸ್ಥಾಪನೆ ಅವೈಜ್ಞಾನಿಕ ಕೆಲಸ. ಇದು ಎರಡೂ ನಗರಗಳ ಜನತೆಗೆ ಸರ್ಕಾರ ಬಗೆದಿರುವ ದ್ರೋಹ.
ಈ ಬಗ್ಗೆ ಈಗಾಗಲೇ ಕಂದಾಯ ಇಲಾಖೆಯಲ್ಲಿ ಸಣ್ಣ ಪ್ರಮಾಣದ ಪ್ರಕ್ರಿಯೆಗಳು ಆರಂಭವಾಗಿವೆ. ಇಡೀ ರಾಜ್ಯದಲ್ಲಿ ರಚನೆಗೊಂಡಿರುವ ಎಲ್ಲ ಜಿಲ್ಲೆಗಳ ಕೇಂದ್ರಗಳೂ ಸಂಬಂಧಪಟ್ಟ ಉಪವಿಭಾಗ ಕೇಂದ್ರಗಳೇ ಆಗಿವೆ. ಆದರೆ ದೊಡ್ಡಬಳ್ಳಾಪುರಕ್ಕೆ ವ್ಯವಸ್ಥಿತ ರೀತಿಯಲ್ಲಿ ಜಿಲ್ಲಾ ಕೇಂದ್ರದ ಸ್ಥಾನಮಾನ ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಕೂಡಲೇ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಗಂಭೀರ ಹೋರಾಟ: ಜಿಲ್ಲಾ ಕೇಂದ್ರದ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವ ಅಧಿಕಾರಿಗಳು, ಜಾಣಕುರುಡು ಪ್ರದರ್ಶಿಸುತ್ತಿರುವ ಸರ್ಕಾರದ ವಿರುದ್ಧ ಗಂಭೀರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಾದ ಅನಿವಾರ್ಯತೆ ಇದ್ದು, ಸಮಿತಿ ಅದಕ್ಕೆ ಸಿದ್ಧವಾಗಿದೆ. ಯಾವುದೇ ಕಾರಣಕ್ಕೂ ದೊಡ್ಡಬಳ್ಳಾಪುರದ ಹೊರಗೆ ಜಿಲ್ಲಾ ಕೇಂದ್ರ ಸ್ಥಾಪನೆಯಾಗಲು ಬಿಡುವುದಿಲ್ಲ. ಶಾಸಕರು-ಸ್ಥಳೀಯ ಜನಪ್ರತಿನಿಧಿಗಳೂ ಹೋರಾಟ ಬೆಂಬಲಿಸಿದ್ದಾರೆ ಎಂದರು.
ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿಗಳು, ಸಂಚಾಲಕರು, ಕನ್ನಡಪಕ್ಷ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ಜಾಗೃತ ಪರಿಷತ್ತು, ಮಹಿಳಾ ಸಮಾಜ, ಕನ್ನಡ ಜಾಗೃತಿ ವೇದಿಕೆ, ಸ್ವಾಭಿಮಾನಿ ಕನ್ನಡಿಗರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘ, ತಾಲೂಕು ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘ, ರಾಶಿರಾಪು ಅಭಿಮಾನಿಗಳ ವೇದಿಕೆ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ, ಮಾದಾರ ಚನ್ನಯ್ಯ ಮಹಾಸಭಾ, ಪತ್ರಕರ್ತರ ಟ್ರಸ್ಟ್ ಸೇರಿದಂತೆ ಅನೇಕ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

