ಎತ್ತಿನಹೊಳೆ; ಮೊಯ್ಲಿ, ಸಿದ್ದರಾಮಯ್ಯ ಮೋಸ
ದೇವನಹಳ್ಳಿ: ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಹೆಸರಿನಲ್ಲಿ 13 ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿ ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಗೆ ಮೋಸ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಬಿ.ರಾಜಣ್ಣ ಆರೋಪಿಸಿದರು.
ಮಕ್ಕಳ ಕೈಲಿ ಮೊಬೈಲ್ ಕೊಡಬೇಡಿ ನಿದ್ದೆಹೋಗುವವರನ್ನು ವಿಧಾನಸೌಧಕ್ಕೆ ಕಳುಹಿಸಬೇಡಿ ಎಂದು ಮಾರ್ಮಿಕವಾಗಿ ತಿಳಿಸಿದ ರಾಜಣ್ಣ, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಈ ನೀತಿಗೆಟ್ಟ ಸರ್ಕಾರ ತೊಲಗಬೇಕು. ನುಡಿದಂತೆ ನಡೆಯಲಾಗದ ಸರ್ಕಾರ ನಿರಂತರವಾಗಿ ವಿದ್ಯುತ್ ಕೊಡುವುದಾಗಿ ರೈತರನ್ನು ನಂಬಿಸಿ ಮೋಸಮಾಡಿದ್ದಾರೆ ಎಂದು ತಿಳಿಸಿದರಲ್ಲದೆ ಈ ಭಾಗದ ರೈತರು ಕೊಳವೆ ಬಾವಿಗಳನ್ನು ನಂಬಿಕೊಂಡು ತರಕಾರಿ ಹಣ್ಣು ಹಂಪಲು ಬೆಳೆಯುತ್ತಿದ್ದಾರೆ. ಆದ್ದರಿಂದ ಅವರ ಜೀವನಕ್ಕೆ ಕಲ್ಲುಹಾಕುವಂಥ ಕೆಲಸಮಾಡದೆ ನಿರಂತರವಾಗಿ ವಿದ್ಯುತ್ ಕೊಡಿ ಎಂದರು.
ಧರಣಿ: ದೇವನಹಳ್ಳಿ ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು, ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ಭಾರತೀಯ ಜನತಾ ಪಕ್ಷ ರೈತ ಮೋರ್ಚಾ ಜಿಲ್ಲಾ ಕಾರ್ಯಕರ್ತರು ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಿಂದ ಬೆಸ್ಕಾಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕಚೇರಿಯ ಗೇಟಿನ ಒಳಗೆ ನುಗ್ಗಲೆತ್ನಿಸಿದರು. ಆಗ ಪೊಲೀಸರು ಅವರನ್ನು ತಡೆದರು, ನಂತರ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ಕುಳಿತು ಪ್ರತಿಭಟನಾ ಸಭೆ ನಡೆಸಿದರು.
ಮಾಜಿ ಶಾಸಕ ಜಿ. ಚಂದ್ರಣ್ಣ ಮಾತನಾಡಿ ರೈತರಿಗೆ 24 ಗಂಟೆ ವಿದ್ಯುತ್ ನೀಡುವುದಾಗಿ ತಿಳಿಸಿದ ಸರ್ಕಾರ ನಿಗದಿತವಾಗಿರುವ ಸಮಯದಲ್ಲಿ ವಿದ್ಯುತ್ ನೀಡಲು ವಿಫಲವಾಗಿದೆ. ಅಲ್ಲದೆ ಎಲ್ಲ ಜಲಾಶಯಗಳಲ್ಲೂ ನೀರು ತುಂಬಿದ್ದರೂ ವಿದ್ಯುತ್ ನೀಡದ ಸರ್ಕಾರ ಎಚ್ಚೆತ್ತು ಈಗಲಾದರೂ ಸಮರ್ಪಕವಾಗಿ ವಿದ್ಯುತ್ ನೀಡಲು ವಿಫಲವಾದರೆ ಕೆಲವೇ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ಅನುಷ್ಠಾನಗೊಂಡಿಲ್ಲ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ನಾಗೇಶ್ ಮಾತನಾಡಿ ಅಧಿಕಾರಕ್ಕೆ ಬಂದ ಹೊಸದರಲ್ಲೇ ರೈತರೊಬ್ಬರನ್ನು ಬಲಿತೆಗೆದುಕೊಂಡ ಸರ್ಕಾರ ನೀಡಿರುವ ಭರವಸೆಗಳು ಯೋಜನೆಗಳು ಅನುಷ್ಠಾನಗೊಂಡಿಲ್ಲ. ಆದ್ದರಿಂದ ನಿಮ್ಮ ಆಡಳಿತ ಬೇಕಾಗಿಲ್ಲ. ಮನೆಗೆ ಹೋಗಿ ಎಂದರಲ್ಲದೆ ಈ ಭಾಗದ ಶಾಸಕರು ತನಗೇನು ಸಂಬಂಧವಿಲ್ಲ ಎಂಬಂತೆ ನಿದ್ದೆ ಮಾಡುತ್ತಿದ್ದಾರೆ ಎಂದು ತಿಳಿಸಿ ಹಿಂದಿನ ದಿನಗಳಲ್ಲಿ ಇಲ್ಲಿನ ಬೆಸ್ಕಾಂ ಕಚೇರಿಗೆ ಪ್ರತಿಭಟನಾಕಾರರು ಬೆಂಕಿ ಹಾಕಿದ್ದನ್ನು ಮರೆಯುವಹಾಗಿಲ್ಲ. ಆದ್ದರಿಂದ ನಾವು ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ರಾಷ್ಟ್ರೀಯ ಪರಿಷತ್ ಅಧ್ಯಕ್ಷ ಎ.ಸಿ. ಗುರುಸ್ವಾಮಿ, ರಾಜ್ಯ ಪರಿಷತ್ ಸದಸ್ಯ ದೇ.ಸೂ. ನಾಗರಾಜ್, ಬಿಜೆಪಿ ಅಧ್ಯಕ್ಷ ಎನ್. ರಾಜಗೋಪಾಲ್, ರೈತ ಮೋರ್ಚಾ ಅಧ್ಯಕ್ಷ ನಾಗರಾಜಗೌಡ ಮಾತನಾಡಿದರು.
ಮುಖಂಡರಾದ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ರಾಜ್ಯ ರೈತ ಮೋರ್ಚಾ ಸದಸ್ಯ ಹನುಮಂತರಾಯಪ್ಪ, ನಗರ ಅಧ್ಯಕ್ಷ ಎಸ್. ರಮೇಶ್‌ಕುಮಾರ್, ತಾಲೂಕು ಅಧ್ಯಕ್ಷ ಸೊಣ್ಣೇಗೌಡ ಉಪಸ್ಥಿತರಿದ್ದರು.ಮನವಿ ಸ್ವೀಕರಿಸಿದ ಬೆಸ್ಕಾಂ ಕಚೇರಿಯ ಎಇಇ ನಾರಾಯಣಸ್ವಾಮಿಗೌಡ ಮಾತನಾಡಿ ಪ್ರತಿ ದಿನ 7 ಗಂಟೆ ತ್ರೀ ಫೇಸ್ ಹಾಗೂ 9 ಗಂಟೆಗಳ ಕಾಲ ಸಿಂಗಲ್ ಫೇಸ್ ವಿದ್ಯುತ್ ನೀಡುತ್ತಿದ್ದು 8 ಗಂಟೆಗಳ ಕಾಲ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ ಎಂದರಲ್ಲದೆ ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

