ಮಗ ಇಲ್ಲವೇ ಮರಣ...
ಮತ್ತೀಕೆರೆ ಜಯರಾಮ್
ರಾಮನಗರ: ಮಗ ಇಲ್ಲವೇ ಮರಣ...!
ಈ ಎರಡರ ಪೈಕಿ ನಮಗಿರುವುದು ಒಂದೇ ಆಯ್ಕೆ. ಯಾವುದಾದರೂ ಒಂದನ್ನು ಪಡೆಯದೆ ಈ ಜಾಗ ಬಿಟ್ಟು ಕದಲುವ ಪ್ರಶ್ನೆಯೇ ಇಲ್ಲ.
ಇದು, ಬಿಡದಿಯ ಧ್ಯಾನಪೀಠದೆದುರು ನಿತ್ಯಾನಂದ ಮುಷ್ಟಿಯಿಂದ ತಮ್ಮ ಏಕೈಕ ಪುತ್ರ ಸಂತೊಷ್ನನ್ನು ಬಿಡಿಸಿಕೊಳ್ಳಲು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿರುವ ಶಿವಮೊಗ್ಗದ ಮುನ್ನೂರು ಕೃಷ್ಣಮೂರ್ತಿ ಮತ್ತು ಜಯಂತಿ ದಂಪತಿಯ ಪಣ.
ಅಮೆರಿಕ ಜೈಲು ಸೇರಿರುವ ವಿನಯ್ ಭಾರದ್ವಾಜ್ ನಿತ್ಯಾನಂದನಿಗೆ ನಮ್ಮ ಮಗ ಸಂತೋಷ್ಗಿಂತಲೂ ನಿಕಟವರ್ತಿ ಆಗಿದ್ದ. ಈಗ ಆತನೇ ಜೈಲು ಪಾಲಾಗಿದ್ದಾನೆ. ಮುಂದೆ ನಮ್ಮ ಮಗನಿಗೆ ನಿತ್ಯಾನಂದನಿಂದ ಏನು ಕಾದಿದೆಯೋ ಎನ್ನುವ ಆತಂಕವನ್ನು ದಂಪತಿ ವ್ಯಕ್ತಪಡಿಸುತ್ತಾರೆ.
ನಿತ್ಯಾನಂದ ಜತೆ ಸಂತೋಷ್ 5 ವರ್ಷದಿಂದ ಇದ್ದಾನೆ. ನಮಗಿರುವುದು ಅವನೊಬ್ಬನೇ ಮಗ. ನಾವು ಸತ್ತರೆ ಚಿತೆಗೆ ಕೊಳ್ಳಿ ಇಡುವುದಕ್ಕೆ ಬೇರೆ ಯಾರೂ ಇಲ್ಲ. ಇಳಿ ವಯಸ್ಸಿನಲ್ಲಿ ನಮ್ಮನ್ನು ನೋಡಿಕೊಳ್ಳಬೇಕಾದ ಮಗ ಹೀಗೆ ಮಠ ಸೇರಿದರೆ ಹೇಗೆ ಎಂದು ಪ್ರಶ್ನಿಸುವಾಗ ಅವರ ಕಣ್ಣಾಲಿಗಳು ತುಂಬಿ ಬಂದವು.
ಹೆದರಿಕೆಯೇ ಕಾರಣ: ನಿತ್ಯಾನಂದ ಮತ್ತು ಸಂತೋಷ್ ನಡುವೆ 2 ವರ್ಷದ ಮಟ್ಟಿಗಷ್ಟೇ ಕರಾರು ಆಗಿತ್ತು. ಅದು ಮುಗಿದಾಗಿಂದಲೂ ಮನೆಗೆ ಮರಳುವಂತೆ ಸಂತೋಷ್ನನ್ನು ಕೇಳಿಕೊಳ್ಳುತ್ತಲೇ ಇದ್ದೇವೆ. ನಿತ್ಯಾನಂದ ಅದೆಷ್ಟರ ಮಟ್ಟಿಗೆ ಹೆದರಿಸಿಟ್ಟುಕೊಂಡಿದ್ದಾನೋ ಗೊತ್ತಿಲ್ಲ. ಮಗ ನಮ್ಮೊಂದಿಗೆ ಬರುತ್ತಿಲ್ಲ.
ನಮ್ಮ ಯಾವ ಮನವಿಗೂ ನಿತ್ಯಾನಂದನ ಕಡೆಯಿಂದ ಸ್ಪಂದನೆ ಇಲ್ಲ. 3 ವರ್ಷದ ಹಿಂದೆ ರಾಸಲೀಲೆ ಸಿಡಿ ಹೊರಬಂದಾಗ ಮನೆಗೆ ಬಂದುಬಿಡು ಎಂದು ಸಂತೋಷನನ್ನು ಕೇಳಿಕೊಂಡೆವು. ನಿತ್ಯಾನಂದ ಜೈಲಿನಿಂದ ಬಿಡುಗಡೆ ಆದ ಮೇಲೆ ಬರುತ್ತೇನೆ ಎಂದಿದ್ದ. ಆ ಕಾರಣಕ್ಕೆ ಆಗ ಸಂತೋಷ್ ಜತೆಗಿದ್ದು ನಿತ್ಯಾನಂದ ಬಿಡುಗಡೆಗೆ ನಾವೂ ಹೋರಾಡಿದ್ದೆವೆಂದು ಕೃಷ್ಣಮೂರ್ತಿ ದಂಪತಿ ತಿಳಿಸಿದರು.
ಕಾಲ ದೂಡಿಕೆ: ಅದಾದ ನಂತರ ಆಗಾಗ್ಗೆ ಕರೆ ಮಾಡಿ ನಮ್ಮೊಂದಿಗೆ ಬಂದುಬಿಡು. ನಮಗೆ ಆಸರೆಯಾಗಿ ನಿಲ್ಲು ಎಂದು ಕೋರಿಕೊಂಡಾಗಲೆಲ್ಲ ಸಂತೋಷ್ ಕಾಲ ದೂಡಿಕೊಂಡೇ ಬರುತ್ತಿದ್ದಾನೆ. ಈಗ ನಾವು ಯಾವ ಸಬೂಬು ಕೇಳಲು ಸಿದ್ಧರಿಲ್ಲ. ಅವನಿಲ್ಲದೆ ಮನೆಗೆ ಹೋಗೆವು ಎನ್ನುವ ದೃಢ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.
ಫೋನ್ ಮಾಡಿದಾಗೆಲ್ಲ ನಮ್ಮೊಂದಿಗೆ ಸಂತೋಷ್ ಮಾತನಾಡುತ್ತಾನೆ. ಆದರೆ, ಧ್ಯಾನಪೀಠಕ್ಕೆ ಬಂದರೆ ಮಾತನಾಡುವುದಿರಲಿ ಮುಖ ತೋರಿಸುವ ಗೋಜಿಗೂ ಹೋಗುವುದಿಲ್ಲ. ಹೀಗೇ ಆದರೆ ನಮ್ಮ ಗತಿ ಏನೆಂಬ ಚಿಂತೆ ಕಾಡುತ್ತಿದೆ. ನಮಗೆ ಇನ್ಯಾರು ದಿಕ್ಕು ನೀವೇ ಹೇಳಿ ಎನ್ನುವುದು ಅಸಹಾಯಕ ದಂಪತಿಯ ಪ್ರಶ್ನೆ.
ನಿತ್ಯಾ ಬಿಡಲೊಲ್ಲೆ ಎಂದಿದ್ದರು: ನಿತ್ಯಾನಂದ ಆಶ್ರಮದಲ್ಲಿರುವ ಸಂತೋಷ್ ಅವರನ್ನು ತಮ್ಮ ಜತೆ ಕರೆದೊಯ್ಯುವುದಕ್ಕಾಗಿ ಕೃಷ್ಣಮೂರ್ತಿ ಮತ್ತು ಜಯಂತಿ ದಂಪತಿ ಈಚೆಗೆ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರಾದರೂ ಪ್ರಯೋಜನವಾಗಲಿಲ್ಲ.
ಅದುವರೆಗೆ ಶ್ವೇತ ವಸ್ತ್ರಧಾರಿ ಆಗಿರುತ್ತಿದ್ದ ಸಂತೋಷ್ ಹೈಕೋರ್ಟ್ಗೆ ಖಾವಿ ತೊಟ್ಟು ಬಂದಿದ್ದರು. ಧ್ಯಾನಪೀಠದಲ್ಲಿರಲು ತಮಗೆ ಯಾವ ಒತ್ತಡ, ಬೆದರಿಕೆಯೂ ಇಲ್ಲ ಎಂದಿದ್ದ ಅವರು, ಅಪ್ಪ-ಅಮ್ಮನ ಜತೆ ಹೋಗಲು ನಿರಾಕರಿಸಿದರು. ನಿತ್ಯಾನಂದ ಸೇವೆ ಮಾಡಿಕೊಂಡಿರುವುದಾಗಿ ಸ್ಪಷ್ಟಪಡಿಸಿದ್ದರು.
ಈಗ ನಿತ್ಯ ಶಾಂತಿಮಯಾನಂದ: ಎಂಜಿನಿಯರಿಂಗ್ ಪದವೀಧರ ಸಂತೋಷ್ ನಿತ್ಯಾನಂದ ಪ್ರವಚನಕ್ಕೆ ಮಾರು ಹೋಗಿ ಧ್ಯಾನಪೀಠ ಸೇರಿದ್ದರು. ಮತ್ತೆ ಮನೆಗೆ ಮರಳುವ ಆಸಕ್ತಿ ಅವರಿಗೆ ಇದ್ದಂತಿಲ್ಲ. ದೀಕ್ಷೆ ಪಡೆದ ಬಳಿಕ ಸಂತೋಷ್ ಹೆಸರನ್ನು ನಿತ್ಯ ಶಾಂತಿಮಯಾನಂದ ಎಂದು ಬದಲಿಸಲಾಗಿದೆ. ಅವರೀಗ ಧ್ಯಾನಪೀಠದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

