ಬೆಂಗಳೂರು ಗ್ರಾಮಾಂತರ

ನಗರಸಭೆ ವ್ಯಾಪ್ತಿಯಲ್ಲಿ ಗುಂಪು ಮನೆ ನಿರ್ಮಾಣ

Published On :

ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸೂರಿಲ್ಲದ ಕಡುಬಡವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ನಗರ ವ್ಯಾಪ್ತಿಯಲ್ಲಿ ಗುಂಪು ಮನೆಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಇಲ್ಲಿನ ನಗರಸಭಾ ಸಭಾಂಗಣದಲ್ಲಿ 2013-14ನೇ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ಮಂಜೂರಾತಿ ಹಾಗೂ ಕಾಮಗಾರಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಕೊತ್ತೀಪುರ ಗ್ರಾಮದ ಬಳಿ ನಗರಸಭೆ ಖರೀದಿಸಿರುವ 7.35 ಎಕರೆ ಜಮೀನಿನಲ್ಲಿ  ಒಟ್ಟು 1490 ಮನೆಗಳನ್ನು ನಿರ್ಮಿಸುವ ಸಂಬಂಧ ಈಗಾಗಲೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ನಗರಸಭೆಯ ವ್ಯಾಪ್ತಿಯಲ್ಲಿ 15 ಎಕರೆ ಖಾಸಗಿ ಜಮೀನನ್ನು ಖರೀದಿಸಿ, 600 ನಿವೇಶನಗಳನ್ನು ಹಂಚುವ ಉದ್ದೇಶವನ್ನು  ಪ್ರಕಟಿಸಿದ ಅವರು, ಈ ಸಂಬಂಧ ಭೂಮಿ ಖರೀದಿಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಫಲಾನುಭವಿಗಳ ಗುರುತು: ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ 125 ಫಲಾನುಭವಿಗಳನ್ನು ಗುರುತಿಸಲಾಗಿದೆ. ಇವರು ಮನೆ ನಿರ್ಮಿಸಿಕೊಳ್ಳಲು ರು.1.20 ಲಕ್ಷ  ಸಹಾಯಧನ ನೀಡಲಾಗುತ್ತದೆ. ಫಲಾನುಭವಿಗಳು ಮನೆ ನಿರ್ಮಿಸುವಾಗ ನಾಲ್ಕು ಹಂತಗಳಲ್ಲಿ ಸಹಾಯಧನ ಪಡೆಯಬಹುದು. ಫಲಾನುಭವಿಗಳು 6 ತಿಂಗಳೊಳಗೆ ಮನೆಗಳನ್ನು ನಗರಸಭೆ ಸೂಚಿಸಿರುವಂತೆ ಮನೆ ನಿರ್ಮಿಸಿಕೊಂಡಲ್ಲಿ ಸಹಾಯಧನವು ಅವರ ಬ್ಯಾಂಕ್ ಖಾತೆಗಳಿಗೆ ಜಮಾವಣೆ ಆಗಲಿದೆ ಎಂದರು.
ಗಿಮಿಕ್ಗೆ ಮರುಳಾಗದಿರಿ : ಸಂಸದ ಡಿ.ಕೆ.ಸುರೇಶ್ ಅವರು ನಗರದ ವಿವಿಧ ವಾರ್ಡ್ಗಳಲ್ಲಿ ನಡೆಸಿದ ಜನಸಂಪರ್ಕ ಸಭೆ ಕುರಿತು ಪರೋಕ್ಷವಾಗಿ ಟೀಕಿಸಿದ ಕುಮಾರಸ್ವಾಮಿ ಜನರು ಇಂತಹ ಕಾರ್ಯಕ್ರಮಗಳಿಗೆ ಮರಳಾಗಬೇಡಿ ಎಂದರು. ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಹೀಗೆ ಜನರ ಸಂಪರ್ಕ ಸಭೆಯನ್ನು ನಡೆಸಿ, ಜನರ ಮುಂದೆ ಅಧಿಕಾರಿಗಳನ್ನು ನಿಂದಿಸಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಈ ಸೂಕ್ಷ್ಮವನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಾಜಪೇಯಿ ನಗರ ವಸತಿ ಯೋಜನೆಯಡಿಯ 125 ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರವನ್ನು ವಿತರಿಸಲಾಯಿತು. ನಗರಸಭೆಯ 22.75, 7.25 ಮತ್ತು 3 ಯೋಜನೆಯಡಿ ಸುಮಾರು ರು.3.25 ಲಕ್ಷ  ಸಹಾಯಧನ ಚೆಕ್ಕುಗಳನ್ನು ಕುಮಾರಸ್ವಾಮಿ ಫಲಾನುಭವಿಗಳಿಗೆ ವಿತರಿಸಿದರು. ಕಿಡ್ನಿ ಸಮಸ್ಯೆಯಿಂದ ಬಳಲತ್ತಿರುವ ವಿದ್ಯಾರ್ಥಿನಿ ಸೌಂದರ್ಯಳ ಚಿಕಿತ್ಸೆಗೆ ನಗರಸಭೆ ವತಿಯಿಂದ ರು.25 ಸಾವಿರ ಚೆಕ್ ವಿತರಿಸಿದರು.
ವಿಧಾನ ಪರಿಷತ್ ಸದಸ್ಯ ಅಪ್ಸರ್ ಆಗಾ, ನಗರಸಭಾ ಸದಸ್ಯರಾದ ರವಿಕುಮಾರ್, ಪರ್ವೇಜ್ ಪಾಷಾ, ರಫೀಕ್, ಎ.ರವಿ, ಆಯುಕ್ತ ಯಶವಂತ್ ಕುಮಾರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.