ಬೆಂಗಳೂರು ಗ್ರಾಮಾಂತರ

ಸ್ವಚ್ಛತೆ ಬಗ್ಗೆ ಗ್ರಾಪಂ ಅಧಿಕಾರಿಗಳು, ಉದಾಸೀನ

Published On :

ರಾಮನಗರ: ನಗರ ಪ್ರದೇಶಗಳಲ್ಲಿ ನಗರಸಭೆ, ಪುರಸಭೆಗಳು ತಮ್ಮ ವ್ಯಾಪ್ತಿಯಲ್ಲಿನ ಬಡಾವಣೆಗಳು, ರಸ್ತೆಗಳು, ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿಯನ್ನು ಹೊಂದಿವೆ. ಗ್ರಾಮಗಳಲ್ಲಿ ಅಲ್ಲಿನ
ಗ್ರಾಮಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆದರೆ ಬಹುತೇಕ ಗ್ರಾಮಗಳಲ್ಲಿ ಸ್ವಚ್ಛತೆಯ ಬಗ್ಗೆ ಗ್ರಾಮಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉದಾಸೀನ ಹೊಂದಿದ್ದಾರೆ.
ರಾಮನಗರ ತಾಲೂಕಿನ ಕೈಲಾಂಚ ಗ್ರಾಮ ಇದಕ್ಕೆ ಹೊರತಾಗಿಲ್ಲ. ಇಡೀ ಗ್ರಾಮದಲ್ಲಿ ಎಲ್ಲಿ ನೋಡಿದರು ಕಸದ ರಾಶಿ ಇದೆ. ಪಾರ್ಥೇನಿಯಂ ಸೇರಿದಂತೆ ಗಿಡಗಂಟೆಗಳು ಯಥೇಚ್ಛವಾಗಿ ಬೆಳೆದಿವೆ. ಚರಂಡಿಗಳಲ್ಲಿ ಮಣ್ಣು, ಕಸ ತುಂಬಿಕೊಂಡು, ನೀರು ಸರಾಗವಾಗಿ ಹರಿಯದೆ ಗಬ್ಬೆದ್ದು ನಾರುತ್ತಿವೆ.   
ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಯ ಕಟ್ಟಡದ ಒಳಗೆ ಕಾಣುವ ಸ್ವಚ್ಛತೆ ಆಸ್ಪತ್ರೆಯ ಕಾಂಪೌಂಡ್ ಹೊರಗಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸ್ಪತ್ರೆಯ ಮುಂಭಾಗವಾದರೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನ ನಡೆಸಬಹುದಿತ್ತು.  
ದುರಾದೃಷ್ಟವೆಂದರೇ ಅನಾರೋಗ್ಯಕರ ಪರಿಸರದ ಮಧ್ಯೆ ಸದ್ಯದಲ್ಲೇ ಶುದ್ಧ ಕುಡಿಯುವ ನೀರಿನ ಘಟಕ ತಲೆ ಎತ್ತಲಿದೆ. ವಾರಕ್ಕೊಮ್ಮೆಯಾದರು ಆಸ್ಪತ್ರೆಯ ಕಾಂಪೌಂಡ್ ಒಳಗೆ ಮತ್ತು ಹೊರಗೆ ಪಾರ್ಥೇನಿಯಂ ಮತ್ತು ಬೇಡದ ಗಿಡಗಂಟೆಗಳನ್ನು ಮತ್ತು ಕಸವನ್ನು ತೆಗೆಸಬೇಕಿದೆ.



ತ್ಯಾಜ್ಯ ವಿಲೇವಾರಿ: ಪರಿಸರ ಮಾಲೀನ್ಯ
ಚನ್ನಪಟ್ಟಣ ತಾಲೂಕಿನ ತಟ್ಟೇಕೆರೆ ಗ್ರಾಮದ ಬಳಿ ರಸ್ತೆ ಬದಿಯಲ್ಲೇ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು ಇದರಿಂದಾಗಿ ಈ ಭಾಗದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ನಗರಸಭೆ ಗಮನ ಹರಿಸಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ನಗರಸಭೆ ವತಿಯಿಂದ ತ್ಯಾಜ್ಯ ವಿಲೇವಾರಿಗೆಂದು ಕಣ್ವ ಬಳಿ ಜಾಗ ಖರೀದಿಸಲಾಗಿದೆಯಾದರೂ ಅಲ್ಲಿಯವರೆಗೆ ಹೋಗಿ ಕಸ ವಿಲೇವಾರಿ ಬರಲು ಅಲಸ್ಯ ತೋರುವ ನಗರಸಭಾ ಸಿಬ್ಬಂದಿ ಪಟ್ಟಣದ ಹೊರ ವಲಯದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದಾಗಿ ಪಟ್ಟಣದ ಹೊರ ವಲಯದಲ್ಲಿರುವ ಸಾರ್ವಜನಿಕರು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ. ಕಸ ವಿಲೇವಾರಿ ಮಾಡುವ ನಗರಸಭಾ ಸಿಬ್ಬಂದಿ ಈ ಕಸಗಳಿಗೆ ಆಗಾಗ್ಗೆ ಬೆಂಕಿ ಹಚ್ಚುತ್ತಿದ್ದು, ಇದರಿಂದಾಗಿ ಈ ಭಾಗದಲ್ಲಿ ಹೊಗೆ ಎದ್ದು ಈ ಮಾರ್ಗವಾಗಿ  ಸಂಚರಿಸುವ ಸಾರ್ವಜನಿಕರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹಲವಾರು ಬಾರಿ ನಗರಸಭೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಇಲ್ಲವಾಗಿದೆ. ನಗರಸಭೆ ತ್ಯಾಜ್ಯ ವಿಲೇವಾರಿಗೆಂದೇ ಲಕ್ಷಾಂತರ ರುಪಾಯಿ ಹಣ ಸುರಿದು ಹಲವಾರು ವಾಹನಗಳನ್ನು ಖರೀದಿ ಮಾಡಿದ್ದು ಈ ವಾಹನಗಳ ಸಹಾಯದಿಂದ ಪಟ್ಟಣ ಪ್ರದೇಶದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸೂಕ್ತ  ಸ್ಥಳಗಳಲ್ಲಿ ವಿಲೇ ಮಾಡುವ ಮೂಲಕ ಎಲ್ಲೆಂದರಲ್ಲಿ ಕಸ ಬಿಸಾಡಿ ಪರಿಸರ ನಾಶ ಮಡುವ ಪ್ರವೃತ್ತಿಯನ್ನು ತಪ್ಪಿಸ ಬೇಕಿದೆ.



ತ್ಯಾಜ್ಯದ ರಾಶಿ ತುಂಬಿ ರಸ್ತೆಯುದ್ದಕ್ಕೂ ಗಬ್ಬು ನಾಥ
ಮಾಗಡಿ: ತಾಲೂಕಿನ ಸೋಲೂರು ಹೋಬಳಿಯ ಮೋಟಗಾನಹಳ್ಳಿ ಪಂಚಾಯ್ತಿ ಪಕ್ಕದಲ್ಲಿಯೇ ಇರುವ ರಸ್ತೆ ಬದಿ ದನದ ಕಸ ಹಾಗೂ ಇತರೆ ತ್ಯಾಜ್ಯದ ರಾಶಿ ತುಂಬಿದ್ದು, ರಸ್ತೆಯುದ್ದಕ್ಕೂ ಗಬ್ಬು ನಾರುತ್ತಿದೆ.
ರಸ್ತೆ ಬದಿ ಕಸದ ರಾಶಿ, ಮತ್ತೊಂದು ಕಡೆ ದೊಡ್ಡ ಮೋರಿಯಿದೆ. ಅಕ್ಕಪಕ್ಕದಲ್ಲಿಯೇ ವಾಸದ ಮನೆಗಳಿವೆ. ಪಾದಚಾರಿಗಳು, ವಾಹನ ಸವಾರರು ಗಬ್ಬು ನಾರುತ್ತಿರುವ ಈ ರಸ್ತೆಯಲ್ಲಿಯೇ ನಿತ್ಯ ಹಾದು ಹೋಗುತ್ತಾ  ಪಂಚಾಯ್ತಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅಕ್ಕಪಕ್ಕದ ಮನೆಗಳಲ್ಲಿ ಸಾಕಿರುವ ನಾಯಿಗಳು, ಕೋಳಿಗಳು ಮೇವಿಗಾಗಿ ರಸ್ತೆ ಬದಿ ಇರುವ ಕಸದ ರಾಶಿಯನ್ನು ಕೆದರಿ ಹರಡುತ್ತಿವೆ. ಕಸದ ತ್ಯಾಜ್ಯಗಳು ರಸ್ತೆಗೆ ಹರಿದು ಬರುತ್ತಿದ್ದು, ಪಾದಚಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ವಾಹನ ಸವಾರರು ನಾಯಿಗಳನ್ನು ರಕ್ಷಿಸಲು ಹೋಗಿ, ಬಿದ್ದು ಗಾಯಗೊಂಡ ಅನೇಕ ಉದಾರಹಣೆಗಳಿವೆ.  ಇಷ್ಟಾದರೂ ಗ್ರಾ.ಪಂ. ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗದಿರುವುದು ವಿಪರ್ಯಾಸದ ಸಂಗತಿ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕಾದ ಪಂಚಾಯ್ತಿ ಮುಂದೆಯೇ ಇಷ್ಟೊಂದು ಕಸದ ರಾಶಿ ಗಮನಿಸಿದರೆ ಪಿಡಿಒ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಗಬ್ಬು ನಾರುವ ತ್ಯಾಜ್ಯಗಳನ್ನು ಹೀಗೆ ಬಿಟ್ಟರೆ ರೋಗ ಹರಡುವ ಭೀತಿ ಭಯದಲ್ಲಿ ಜನತೆ ವಾಸಿಸುತ್ತಿದ್ದಾರೆ. ಇನ್ನು ಮುಂದಾದರೂ ಸಂಬಂಧಪಟ್ಟ ಪಂಚಾಯ್ತಿ ಅಧಿಕಾರಿಗಳು ಇತ್ತ ಗಮನಹರಿಸಿ, ಕಸದ ರಾಶಿ ತೆಗೆಸಬೇಕಿದೆ.  
ಟಿ ರಂಗಸ್ವಾಮಿ,  ಮೋಟಗಾನಹಳ್ಳಿ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.