ಕಜಾಪ ಅಧ್ಯಕ್ಷರಾಗಿ ಡಿ.ವಿ.ಅಶ್ವತ್ಥಪ್ಪ ಆಯ್ಕೆ
ದೊಡ್ಡಬಳ್ಳಾಪುರ: ಇಲ್ಲಿನ ಪ್ರತಿಷ್ಠಿತ ಕನ್ನಡಪರ ಸಂಸ್ಥೆ ಕನ್ನಡ ಜಾಗೃತ ಪರಿಷತ್ತಿಗೆ ನೂತನ ಅಧ್ಯಕ್ಷರಾಗಿ ಡಿ.ವಿ.ಅಶ್ವತ್ಥಪ್ಪ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಹೋರಾಟಗಾರ ಟಿ.ಎನ್.ಪ್ರಭುದೇವ್ ಮುಂದುವರೆದಿದ್ದಾರೆ. ಡಾ.ಎನ್.ವೆಂಕಟರೆಡ್ಡಿ ಅವರ ನಿಧನದಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು.
ಕನ್ನಡ ಜಾಗೃತ ಪರಿಷತ್ತಿಗೆ ಕಳೆದ ಸರ್ವಸದಸ್ಯರ ಸಭೆ ತೀರ್ಮಾನಕ್ಕೆ ಬದ್ಧವಾಗಿ ಮುಂದಿನ ಒಂದೂವರೆ ವರ್ಷಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಉಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ವಿಚಾರವನ್ನು ಸಭೆ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿವೇಚನೆಗೆ ಬಿಟ್ಟು ತೀರ್ಮಾನ ಪ್ರಕಟಿಸಲಾಯಿತು.
ಸಭೆ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಜಾಪ ಕಾರ್ಯದರ್ಶಿ ಪ್ರಭುದೇವ್, ರಾಜ್ಯದ ಚಳವಳಿ ಇತಿಹಾಸದಲ್ಲಿ ಕಜಾಪ ಹೊಂದಿರುವ ಪ್ರತಿಷ್ಠಿತ ಸ್ಥಾನಮಾನದ ಕುರಿತು ಪ್ರಸ್ತಾಪಿಸಿ ಇತ್ತೀಚಿನ ದಿನಗಳಲ್ಲಿ ಪರಿಷತ್ತಿನ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಗೊಳಪಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು. ಡಿ.ವಿ.ಅಶ್ವತ್ಥಪ್ಪ ಕಳೆದ ಸಾಲಿನ ಲೆಕ್ಕಪತ್ರಗಳನ್ನು ಮಂಡನೆ ಮಾಡಿ ಅನುಮೋದನೆ ಪಡೆದರು.
ಮಾಜಿ ಅಧ್ಯಕ್ಷ ಮೇಜರ್ ಮಹಾಬಲೇಶ್ವರ್ ಮಾತನಾಡಿ, ಪರಿಷತ್ತು ಯಾರೊಬ್ಬರ ಸ್ವತ್ತೂ ಅಲ್ಲ. ಎಲ್ಲರ ಪರಿಶ್ರಮ ಇದರ ಬೆಳವಣಿಗೆಯ ಹಿಂದಿದೆ. ಆರೋಪ ಮಾಡುವ ಮೊದಲು ಚಿಂತಿಸಿ, ವಾಸ್ತವ ಅರಿತು ಮಾತನಾಡಬೇಕು. ಕೆಲ ಸಣ್ಣ ತಪ್ಪುಗಳನ್ನೇ ವೈಭವೀಕರಿಸಿ ವ್ಯವಸ್ಥೆಯನ್ನು ದೂರುವುದು ಪ್ರಜ್ಞಾವಂತಿಕೆಯಲ್ಲ. ಪರಿಷತ್ತು ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕವಾಗಿ ಸಮಾಜಕ್ಕೆ ಮಹತ್ವದ ಕೊಡುಗೆ ಕೊಟ್ಟಿದೆ. ಹಲವು ಜನರಿಗೆ ಉದ್ಯೋಗಾವಕಾಶಗಳನ್ನು ವಿವಿಧ ಸ್ತರಗಳಲ್ಲಿ ಒದಗಿಸಲು ನೆರವಾಗಿದೆ. ಭಿನ್ನಾಭಿಪ್ರಾಯಗಳ ಚರ್ಚೆಗೆ ಮುಕ್ತ ಆಹ್ವಾನವಿದೆ ಎಂದರು.
ಕಜಾಪ ಕಟ್ಟಡ ಸಮಿತಿ ಸದಸ್ಯ ರುಮಾಲೆ ನಾಗರಾಜ್ ಮಾತನಾಡಿ, ಪರಿಷತ್ತನ್ನು ಕಟ್ಟುವಲ್ಲಿ ಕೆಲವರು ಪ್ರತ್ಯಕ್ಷವಾಗಿ ಸಹಕರಿಸಿದ್ದಾರೆ. ನೆರವು ಪಡೆಯುವಲ್ಲಿ ಪರಿಶ್ರಮ ವಹಿಸಿದ ಮತ್ತು ಅದನ್ನು ಸಾರ್ಥಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಹಕಾರ ಕೊಟ್ಟ ಹಲವರನ್ನು ಸ್ಮರಿಸಬೇಕಿದೆ. ಇಲ್ಲಿ ಯಾವ ಪ್ರತಿಷ್ಠೆಯಾಗಲೀ, ವೈಭವೀಕರಣವಾಗಲಿ ಇಲ್ಲ. ನಿರಾಧಾರ ಆರೋಪಗಳಿಂದ ಪ್ರಯೋಜನವಿಲ್ಲ ಎಂದರು.
ರಾಜೇಂದ್ರಕುಮಾರ್, ಸಂಜೀವನಾಯಕ್, ಡಿ.ಪಿ.ಆಂಜನೇಯ, ತೂಬಗೆರೆ ಷರೀಫ್, ಪ್ರಮೀಳಾ ಮಹದೇವ್, ಹ.ರಾಮಕೃಷ್ಣ, ಪರಮೇಶ್, ವೆಂಕಟೇಶ್ ಮತ್ತಿತರರು ಪ್ರಶ್ನೆಗಳನ್ನು ಮುಂದಿಟ್ಟರು. ಕನ್ನಡ ಜಾಗೃತ ಪರಿಷತ್ತಿನ ಟ್ರಸ್ಟಿ ಸುಲೋಚನಮ್ಮ ಡಾ.ವೆಂಕಟರೆಡ್ಡಿ ಸೇರಿದಂತೆ ಕಜಾಪ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

