ಬೆಂಗಳೂರು ಗ್ರಾಮಾಂತರ

ವೈದ್ಯರ ಕೊರತೆ ರಾಜ್ಯದ ಸಮಸ್ಯೆ: ಸಚಿವ ಖಾದರ್

Published On :

ಕ.ಪ್ರ. ವಾರ್ತೆ ,  ಆನೇಕಲ್ಲು ,  ಫೆ.5
ರಾಜ್ಯದ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಪ್ರತಿ ವರ್ಷ ಎಂಬಿಬಿಎಸ್ ಮುಗಿಸಿದ ವೈದ್ಯರಿಗೆ ಕಡ್ಡಾಯ ಸೇವೆ ಬಗ್ಗೆ ನೀತಿ ಜಾರಿ ಮಾಡಿದ್ದರೂ ಈ ಸಮಸ್ಯೆ ಪರಿಹಾರ ಕಾಣುತ್ತಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅಸಹಾಯಕತೆ ವ್ಯಕ್ತ ಪಡಿಸುತ್ತಾರೆ.
ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲ ಆಸ್ಪತ್ರೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕವಾದ ವೈದ್ಯರು ದಂಡವನ್ನಾದರೂ ಕಟ್ಟಿ ಉನ್ನತ ವ್ಯಾಸಂಗ ನೆಪದಲ್ಲಿ ತೆರಳುತ್ತಾರೆ. ಹಿರಿಯ ವೈದ್ಯರು ನಗರ ಪ್ರದೇಶದಲ್ಲಿ ನೆಲೆಸುತ್ತಾರೆ. ಗ್ರಾಮೀಣ ಹಾಗೂ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವೈದ್ಯರನ್ನು ದುರ್ಬೀನು ಹಾಕಿ ಹುಡುಕಬೇಕಾದ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಇತ್ತೀಚೆಗೆ ವೈದ್ಯರ ನೇಮಕಾತಿಗೆ ನಡೆಸಿದ ಸಂದರ್ಶನದಲ್ಲಿ ಅಭ್ಯರ್ಥಿಗಳೇ ಬರಲಿಲ್ಲ. ಈ ಬಗ್ಗೆ ಮುಂದಿನ ದಿನದಲ್ಲಿ ಕ್ರಮ ವಹಿಸುವುದಾಗಿ ತಿಳಿಸಿದರು.
ಖಾಸಗಿ ವೈದ್ಯರ ನೇಮಕ: ಕೆಲ ಆಸ್ಪತ್ರೆಗಳಲ್ಲಿ ಉಪಕರಣಗಳಿದ್ದರೂ ವೈದ್ಯರಿರುವುದಿಲ್ಲ. ವೈದ್ಯರಿದ್ದಲ್ಲಿ ಉಪಕರಣ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಸ್ಥಳೀಯ ಪರಿಣಿತ ಹಾಗೂ ನುರಿತ ವೈದ್ಯರು ನಿರ್ದಿಷ್ಟ ಕಾಯಿಲೆಗೆ ಚಿಕಿತ್ಸೆ ನೀಡಲು ಮುಂದೆ ಬಂದಲ್ಲಿ ಅಂತಹವರಿಗೆ ಸರ್ಕಾರ ನಿಗದಿ ಪಡಿಸಿದ ಫೀ ನೀಡಿ ಸೇವೆ ಪಡೆಯಲು ಬದ್ಧವಾಗಿದೆ.
ಮಹಾರಾಷ್ಟ್ರದ ಮಾದರಿಯಂತೆ ಪಿಯು ನಂತರ 3 ವರ್ಷಗಳ ಡಿಪ್ಲೊಮೋ ತರಬೇತಿ ನೀಡಿ ನಿರ್ದಿಷ್ಟ ವೈದ್ಯಕೀಯ ಉಪಕರಣಗಳ ಬಳಕೆ, ಥೆರಪಿ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಆಯ್ದ ಸೇವೆಗಳ ಬಗ್ಗೆ ಚಿಕಿತ್ಸೆ ನೀಡಲು ತರಬೇತಿ ನೀಡಿ ಸರ್ಕಾರಿ ಆಸ್ಪತ್ರೆಗೆ ನೇರ ನೇಮಕಾತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜನತೆಗೆ ಉಚಿತ ಆರೋಗ್ಯ ಹಾಗೂ ಉಚಿತ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದ್ದು ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.