ಜನವಸತಿ ಪ್ರದೇಶದಲ್ಲಿ ಬಾರ್ ತೆರೆಯಲು ಯತ್ನ
ಕ.ಪ್ರ. ವಾರ್ತೆ , ಸೂಲಿಬೆಲೆ , ಫೆ.6
ಪಟ್ಟಣದ ಜನ ನಿಬಿಡ ಪ್ರದೇಶದ ಬಸ್ ನಿಲ್ದಾಣದ ಬಳಿ ಹೊಸದಾಗಿ ಬಾರೊಂದನ್ನು ತೆರೆಯಲು ಯತ್ನಿಸಿದ್ದು, ಈ ಬಗ್ಗೆ ಸ್ಥಳ ಪರಿಶೀಲನೆಗೆ ಬಂದ ಅಬಕಾರಿ ಜಿಲ್ಲಾಧಿಕಾರಿ ಅವರನ್ನು ಸುತ್ತುವರೆದ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಇಲ್ಲಿ ಬಾರ್ ತೆರೆಯವುದು ಬೇಡ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.
ಹೊಸ ಬಸ್ ನಿಲ್ದಾಣದ ಬಳಿ ಹೊಸದಾಗಿ ನಿರ್ಮಾಣ ಮಾಡಿರುವ ಅಂಗಡಿ ಮಳಿಗೆಗಳಲ್ಲಿ ಎಂಎಸ್ಐಎಲ್ ವತಿಯಿಂದ ಬಾರ್ ತೆರೆಯಲು ವ್ಯಕ್ತಿಯೊಬ್ಬರು ಪ್ರಯತ್ನಿಸಿದ್ದರು. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ, ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲು ಗ್ರಾಮಾಂತರ ಅಬಕಾರಿ ಅಧಿಕಾರಿ ಶೈಲಾಜ ಅವರೊಂದಿಗೆ ಅಧಿಕಾರಿಗಳ ತಂಡ ಸ್ಥಳಪರಿಶೀಲನೆ ಮಾಡುತ್ತಿದ್ದಾಗ ವಿಷಯ ತಿಳಿದ ಗ್ರಾಮಸ್ಥರು, ಸಭ್ಯ ನಾಗರಿಕ ಕುಟುಂಬಗಳ ವಾಸಿಸುವ ಪ್ರದೇಶದಲ್ಲಿ ಬಾರ್ ತೆರೆದು ಜನರ ಜೀವನ ಹಾಳು ಮಾಡಬೇಡಿ. ಉದ್ದೇಶಿತ ಬಾರ್ ಸ್ಥಕ್ಕೆ ಸಮೀಪದಲ್ಲಿಯೇ ಶಾಲೆಯಿದೆ. ಕೂಗಳತೆಯಲ್ಲಿ ಬಸ್ ತಂಗುದಾಣವಿದೆ. ಪ್ರತಿನಿತ್ಯ ಶಾಲಾ, ಕಾಲೇಜಿಗೆ ಹೆಣ್ಣು ಮಕ್ಕಳು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಇಲ್ಲಿ ಬಾರ್ ತೆರೆಯವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದರು.
ಅಧಿಕಾರಿಗೆ ತರಾಟೆ: ಈ ಮಧ್ಯ ಎಂಎಸ್ಐಎಲ್ ಅಧಿಕಾರಿಯೊಬ್ಬರು ಉದ್ದೇಶಿತ ಬಾರ್ ತೆರೆಯವು ವ್ಯಕ್ತಿಪರವಾಗಿ ಮಾತನಾಡುತ್ತಿರುವುದನ್ನು ಅರಿತ ಗ್ರಾಮಸ್ಥರು ಆ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಾರ್ ಸ್ಥಾಪನೆಯ ಸ್ಥಳವನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿದ್ದು, ಈಗ ಜನರ ಶಾಂತಿ, ನೆಮ್ಮದಿಯನ್ನು ಹಾಳು ಮಾಡುವಂತೆ ಕೆಲಸಕ್ಕೆ ಕೈ ಹಾಕಬೇಡಿ ಎಂದು ಚಂದ್ರಶೇಖರ್ ಎಂಬುವರು ಹೇಳುತ್ತಿದ್ದಾಗ ಸಿಟ್ಟಿಗೆದ್ದ ಎಂಎಸ್ಐಎಲ್ ಅಧಿಕಾರಿ, ಇಲ್ಲ ಸಲ್ಲದ ಮಾತುಗಳನ್ನು ಹೇಳ ಬೇಡ. ಒಳಗಡೆ (ಜೈಲಿಗೆ)ಹಾಕಿಸಿಬಿಡ್ತೇನೆ ಎಂದು ಸಾರ್ವಜನಿಕವಾಗಿ ದರ್ಪ ತೋರಿದ್ದು, ಜನರನ್ನು ಕೆರೆಳಿಸಿತು. ಇದರಿಂದ ಕೋಪಗೊಂಡ ಜನರು ಅಧಿಕಾರಿಯ ಮೇಲೆ ಮುಗಿ ಬಿದ್ದರು. ತಕ್ಷಣ ಮಧ್ಯ ಪ್ರವೇಶಿಸಿದ ಅಬಕಾರಿ ಜಿಲ್ಲಾಧಿಕಾರಿಗಳು ಎಂಎಸ್ಐಎಲ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಸಾರ್ವಜನಿಕವಾಗಿ ನಿಮ್ಮ ವರ್ತನೆ ಸರಿಯಲ್ಲ ಎಂದು ಅಧಿಕಾರಿಯ ಬಾಯಿ ಮುಚ್ಚಿಸಿದರು. ಇತ್ತ ಜಿಲ್ಲಾಧಿಕಾರಿ, ಅತ್ತ ಗ್ರಾಮಸ್ಥರಿಂದ ಮಾತಿನ ಪೆಟ್ಟು ತಿಂದ ಎಂಎಸ್ಐಎಲ್ ಅಧಿಕಾರಿ ಅಲ್ಲಿಂದ ಸದ್ದಿಲ್ಲದೇ ನಾಪತ್ತೆಯಾಗಿದ್ದ. ಕೊನೆಗೆ ಅಬಕಾರಿ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ವಿರೋಧವಿರುವ ಕಾರಣ ಇಲ್ಲಿ ಬಾರ್ಗೆ ಅವಕಾಶವಿಲ್ಲ ಎಂದು ಹೇಳಿ ಸಮಸ್ಯೆಗೆ ಮುಕ್ತಿ ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

