ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ ಕೊಡಿ
ಕ.ಪ್ರ. ವಾರ್ತೆ , ದೊಡ್ಡಬಳ್ಳಾಪುರ , ಫೆ.6
ದೊಡ್ಡಬಳ್ಳಾಪುರ ರೈಲು ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ ಕೊಡಬೇಕು ಎಂಬ ಒತ್ತಾಯ ಸೇರಿದಂತೆ ರೈಲು ನಿಲ್ದಾಣದ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಬೇಕು ಎಂದು ಇಲ್ಲಿನ ವಿವಿಧ ಸಂಘಟನೆಗಳು ಆಗ್ರಹಪಡಿಸಿವೆ.
ಗುರುವಾರ ಸಂಜೆ ಇಲ್ಲಿನ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ನೈರುತ್ಯ ರೈಲ್ವೇ ವಲಯ ವ್ಯವಸ್ಥಾಪಕ ಪಿ.ಕೆ. ಸಕ್ಸೇನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮನವಿ ಪತ್ರಗಳನ್ನು ನೀಡಿದ ಹಲವು ಸಂಘಟನೆಗಳು ದೊಡ್ಡಬಳ್ಳಾಪುರದಲ್ಲಿ ಕೈಗಾರಿಕಾ ಪ್ರದೇಶ ಬೃಹತ್ತಾಗಿ ಬೆಳೆದಿದೆ. 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ದೂರದ ಗೌರಿಬಿದನೂರು, ಹಿಂದುಪುರ ಸೇರಿದಂತೆ ಅನೇಕ ಕಡೆಗಳಿಂದ ಬರುತ್ತಾರೆ. ಆದರೆ ದೊಡ್ಡಬಳ್ಳಾಪುರ ಮೂಲಕ ಸಂಚರಿಸುವ ಹಲವು ರೈಲುಗಳಿಗೆ ಇಲ್ಲಿ ನಿಲುಗಡೆ ಇಲ್ಲದೆ ಇರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ರೈಲು ನಿಲ್ದಾಣದಲ್ಲಿ ಸದ್ಯ ಕಾಚಿಗುಡ ಎಕ್ಸ್ಪ್ರೆಸ್, ಉದ್ಯಾನ್ ಎಕ್ಸ್ಪ್ರೆಸ್, ನಾಂದೇಡ್ ಎಕ್ಸ್ಪ್ರೆಸ್ ಸೇರಿದಂತೆ ಕೆಲವೇ ರೈಲುಗಳಿಗೆ ನಿಲುಗಡೆ ಇದೆ. ಆದರೆ ಕಾರ್ಮಿಕರು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸವ ಎಕ್ಸ್ಪ್ರೆಸ್, ಪ್ರಶಾಂತಿ ಎಕ್ಸ್ಪ್ರೆಸ್, ಕರ್ನಾಟಕ ಎಕ್ಸ್ಪ್ರೆಸ್, ಕುರ್ಲಾ ಎಕ್ಸ್ಪ್ರೆಸ್ ಸೇರಿದಂತೆ ಅನೇಕ ರೈಲುಗಳಿಗೆ ನಿಲುಗಡೆ ಕೊಡಬೇಕು ಎಂದು ಹಲವು ದಿನಗಳಿಂದ ಬೇಡಿಕೆ ಸಲ್ಲಿಸಲಾಗುತ್ತಿದ್ದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಕೇಂದ್ರ ರೇಲ್ವೇ ಮಂತ್ರಿಗಳಿಗೂ ಮನವಿ ಮಾಡಲಾಗಿದೆ. ಸಚಿವ ವೀರಪ್ಪ ಮೊಯ್ಲಿ ಅವರು ಕೂಡ ಅನೇಕ ಬಾರಿ ಭರವಸೆ ನೀಡಿದ್ದಾರೆ. ಆದರೆ ಈವರೆಗೆ ಇಲ್ಲಿನ ಜನರ ಬೇಡಿಕೆ ಈಡೇರಿಲ್ಲ.
ಕಳೆದ 3 ವರ್ಷದ ಹಿಂದೆ ಕೇಂದ್ರ ಸರ್ಕಾರದ ರೇಲ್ವೇ ಬಜೆಟ್ನಲ್ಲಿ ದೊಡ್ಡಬಳ್ಳಾಪುರ ನಿಲ್ದಾಣವನ್ನು ಆದರ್ಶ ರೇಲ್ವೇ ನಿಲ್ದಾಣ ಪಟ್ಟಿಗೆ ಸೇರಿಸಲಾಗಿದೆ. ಆದರೆ ಈವರೆಗೆ ಇಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿ ಆಗಿಲ್ಲ. ಯಲಹಂಕ ಮತ್ತು ಗೌರಿಬಿದನೂರಿನಲ್ಲಿ ನಿಲುಗಡೆ ಕೊಡುವ ಕೆಲ ಎಕ್ಸ್ಪ್ರೆಸ್ ರೈಲುಗಳಿಗೆ ದೊಡ್ಡಬಳ್ಳಾಪುರದಲ್ಲಿ ನಿಲುಗಡೆ ಇಲ್ಲ. ಇದು ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ. ಅನಿವಾರ್ಯವಾಗಿ ಇಲ್ಲಿನ ಜನ ಯಲಹಂಕವನ್ನೇ ನೆಚ್ಚಿಕೊಳ್ಳುವ ಅನಿವಾರ್ಯತೆ ಇದೆ. ನಿಲುಗಡೆ ಹೊಂದಿರುವ ರೈಲುಗಳು ಮಧ್ಯರಾತ್ರಿ, ತಡರಾತ್ರಿ ಬಂದು ಹೋಗುವುದರಿಂದ ಯಾರಿಗೂ ಪ್ರಯೋಜನವಾಗುತ್ತಿಲ್ಲ ಎಂದರು.
ಮೂಲಸೌಕರ್ಯ ಕೊಡಿ: ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಸ್ಕೈವಾಕ್ ಈಗ ನಿರ್ಮಾಣ ಹಂತದಲ್ಲಿದೆ. ಶೌಚಾಲಯ, ನೀರಿನ ಸಮಸ್ಯೆ ಬಿಗಡಾಯಿಸಿದೆ. ಸಂಜೆ ವೇಳೆ ಮತ್ತು ಬೆಳಗಿನ ವೇಳೆ ಜನಜಂಗುಳಿ ಹೆಚ್ಚಿರುವ ಕಾರಣ ಭದ್ರತೆ ಹೆಚ್ಚಬೇಕು ಎಂಬುದೂ ಸೇರಿದಂತೆ ಅನೇಕ ಒತ್ತಾಯಗಳನ್ನು ಮುಂದಿಟ್ಟರು.
ಭರವಸೆ: ದೊಡ್ಡಬಳ್ಳಾಪುರ ಜನರ ಬೇಡಿಕೆಗಳಿಗೆ ಸ್ಪಂದಿಸಿ ಮಾತನಾಡಿದ ಸಕ್ಸೇನಾ, ಈ ಎಲ್ಲಾ ಬೇಡಿಕೆಗಳು ಗಮನಕ್ಕೆ ಬಂದಿವೆ. ಇವುಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅವಕಾಶಗಳನ್ನೂ ಬಳಸಿಕೊಂಡು ಅನುಕೂಲ ಕಲ್ಪಿಸಲಾಗುವುದು ಎಂದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ಅನೇಕ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.
ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಮೂಲಕ ಪ್ರತಿದಿನ 18ಕ್ಕೂ ಹೆಚ್ಚು ಎಕ್ಸ್ಪ್ರೆಸ್ ರೈಲುಗಳು, 10ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತವೆ. ಆದರೆ ಇವುಗಳಲ್ಲಿ ಬೆರಳೆಣಿಕೆಯಷ್ಟು ರೈಲುಗಳು ಮಾತ್ರ ನಿಲ್ಲುತ್ತವೆ. ಇಲ್ಲಿನ ಜವಳಿ ವರ್ತಕರು, ವಿದ್ಯಾರ್ಥಿಗಳಿಗೆ ಇದರಿಂದ ಅನಾನುಕೂಲವಾಗಿದೆ. ಮಧ್ಯರಾತ್ರಿ ಸಂಚರಿಸುವ ರೈಲುಗಳ ನಿಲುಗಡೆಯಿಂದ ಪ್ರಯೋಜನವಿಲ್ಲ. ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಹೊರವಲಯದ ದೊಡ್ಡಬಳ್ಳಾಪುರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಆಧುನಿಕ ಮೂಲಸೌಕರ್ಯ ಒದಗಿಸಬೇಕು. ಈ ಬಗ್ಗೆ ರೇಲ್ವೇ ಇಲಾಖೆ ಅಧಿಕಾರಿಗಳು ಗಮನಹರಿಸಿ ಕೂಡಲೇ ಇಲ್ಲಿನ ಜನರ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ.
- ಟಿ.ವೆಂಕಟರಮಣಯ್ಯ, ಶಾಸಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

