ಬೆಂಗಳೂರು ಗ್ರಾಮಾಂತರ

ನಗರದ ಬ್ಯಾಂಕ್ಗಳಿಗೆ ಬೀಗ: ಜನತೆ ಪರದಾಟ

Published On :

ರಾಮನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆರಂಭಿಸಿರುವ 2 ದಿನಗಳ ಪ್ರತಿಭಟನೆಯಿಂದಾಗಿ ನಗರದ ಬ್ಯಾಂಕುಗಳು ಸೋಮವಾರ ಕಾರ್ಯ ನಿರ್ವಹಿಸಲಿಲ್ಲ. ಎಟಿಎಂನಲ್ಲಿ ಹಣ ಖಾಲಿಯಾಗಿದ್ದರಿಂದ ಸಾರ್ವಜನಿಕರು ಹಣಕ್ಕಾಗಿ ಪರದಾಡುವಂತಾಗಿತ್ತು.  ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ನೀಡಿದ್ದ ಪ್ರತಿಭಟನೆಯ ಕರೆಗೆ ನಗರದಲ್ಲಿರುವ ರಾಷ್ಟೀಕೃತ, ಖಾಸಗಿ ಮತ್ತು ವಿದೇಶಿ ಮೂಲದ ಬ್ಯಾಂಕುಗಳು ಮುಚ್ಚಿದ್ದವು. 2012ನೇ ಸಾಲಿಗೆ ಅನ್ವಯಿಸುವಂತೆ ವೇತನ ಶ್ರೇಣಿಯನ್ನು ಹೆಚ್ಚಿಸಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.  

ಇಂದು ಮಾಗಡಿ ಹಬ್ಬ ವಿನೂತನ ಕಾರ್ಯಕ್ರಮ
ಮಾಗಡಿ: ತಾಲೂಕಿನ ತಿಪ್ಪಸಂದ್ರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಪ್ರೌಢಶಾಲೆಗಳ  ಶೈಕ್ಷಣಿಕ ಶಾಲಾ ವಾರ್ಷಿಕೋತ್ಸವ ಸಮಾರಂಭ 2014, ಜಾನಪದ ಸಾಂಸ್ಕೃತಿಕ ಮತ್ತು ವಿಜ್ಞಾನ ಹಾಗೂ ಮಾಗಡಿ ಹಬ್ಬ ಎಂಬ ವಿನೂತನ ಕಾರ್ಯಕ್ರಮವನ್ನು ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ  ಫೆ.11 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ತಿಪ್ಪಸಂದ್ರ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿರುವುದಾಗಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಕೆ. ಧನಂಜಯ ತಿಳಿಸಿದ್ದಾರೆ.

ಸಿಲಿಂಡರ್ ಕಳ್ಳ ಬಂಧನ
ದೊಡ್ಡಬಳ್ಳಾಪುರ: ಕಳೆದ 4 ದಿನಗಳ ಹಿಂದೆ ಸಾಸಲು ಹೋಬಳಿ ವ್ಯಾಪ್ತಿಯ ಎರಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 5 ಅಡುಗೆ ಅನಿಲ ಸಿಲಿಂಡರ್ಗಳನ್ನು ಕಳವು ಮಾಡಿದ್ದ ಕಳ್ಳನನ್ನು ಬಂಧಿಸುವಲ್ಲಿ ದೊಡ್ಡಬೆಳವಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ತಾಲೂಕಿನ ಬೋವಿಪಾಳ್ಯದ ಗಿರೀಶ್ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಕಾನೂನು ಬಂಧನಕ್ಕೆ ಒಪ್ಪಿಸಲಾಗಿದೆ. ಬೆಳವಂಗಲ ಪೊಲೀಸ್ ಠಾಣೆಯ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಆರೋಪಿಯಲ್ಲಿ ಮನೆಯಲ್ಲೇ ಬಂಧಿಸಿದ್ದಾರೆ.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ದೊಡ್ಡಬಳ್ಳಾಪುರ: ತಾಲೂಕಿನ ಮಜರಾಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ವಿವೇಕಾನಂದನಗರ, ಚಿಕ್ಕತುಮಕೂರು ಸೇರಿದಂತೆ ವಿವಿಧೆಡೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಸಮಗ್ರ ಅಭಿವೃದ್ಧಿ ಹಿತಾಸಕ್ತಿಯಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ವಿಶೇಷ ಅನುದಾನ ಸೇರಿದಂತೆ ಹಲವು ಇಲಾಖೆಗಳಿಂದ ಸಾಕಷ್ಟು ಅನುದಾನ ತರಲಾಗಿದೆ. ಕಾಮಗಾರಿಗಳು ಎಲ್ಲೆಡೆ ಆರಂಭವಾಗುತ್ತಿದ್ದು, ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸಮಾನ ಪ್ರಮಾಣದ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ಜನತೆಯ ಸಹಕಾರ ಮತ್ತು ಅಧಿಕಾರಿಗಳ ಹೊಣೆಗಾರಿಕೆಯೊಂದಿಗೆ ಯಾವುದೇ ಯೋಜನೆಗಳು ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕಿದೆ ಎಂದರು. ತಾಪಂ ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ತಿ.ರಂಗರಾಜು, ಲಕ್ಷ್ಮೀಪತಿ, ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಪಿಡಿಒ, ಅಧ್ಯಕ್ಷರು, ಸದಸ್ಯರು ಸೇರಿದಂತೆ ಅನೇಕರಿದ್ದರು.

ಕೃಷ್ಣ, ಕನಕರಾಜು ಆಯ್ಕೆ
ಕನಕಪುರ: ಕರ್ನಾಟಕ ಪ್ರದೇಶ ಭೋವಿ ಕ್ಷೇಮಾಭ್ಯುದಯ ಸಂಘದ ಕಾರ್ಯಕಾರಿಣಿ ಸಭೆ ರಾಜ್ಯಾಧ್ಯಕ್ಷ ಚಿನ್ನಸ್ವಾಮಿ ಅಧ್ಯಕ್ಷತೆಯಲ್ಲಿ ಕನಕಪುರದ ಪರಿವೀಕ್ಷಣಾ ಬಂಗಲೆಯಲ್ಲಿ ನಡೆಯಿತು.  ಸಂಘದ ನೇತೃತ್ವ ವಹಿಸಿರುವ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾರ್ಗದರ್ಶನದಂತೆ ರಾಮನಗರ ಜಿಲ್ಲೆಯ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ(ಕಿಟ್ಟಿ) ಹಾಗೂ ಕನಕಪುರ ತಾಲೂಕು ಅಧ್ಯಕ್ಷರಾಗಿ ಕನಕರಾಜು ನೇಮಕಗೊಂಡರು.  ರಾಜ್ಯಾಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಭೋವಿಗಳು ಶ್ರಮಜೀವಿಗಳಾಗಿದ್ದು ಇಂದಿಗೂ ಸೂಕ್ತ ಪ್ರಾತಿನಿಧ್ಯ ಸಿಗದೆ ಬಳಲುತ್ತಿದ್ದಾರೆ. ಸಮುದಾಯದ ಸಂಘಟನೆ, ಜಾಗೃತಿಗಳೇ ಪ್ರಗತಿಗೆ ಮಾರ್ಗವಾಗಿದ್ದು ಎಲ್ಲರೂ ಒಮ್ಮತದಿಂದ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕು. ಸಂಘವನ್ನು ಗ್ರಾಮೀಣ ಪ್ರದೇಶಗಳಿಂದ ಬೇರು ಮಟ್ಟದಲ್ಲಿ ಸಂಘಟಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಲೋಕೇಶ್, ಗ್ರಾಪಂ ಅಧ್ಯಕ್ಷ ಆಂಜನಪ್ಪ, ಉಮೇಶ್, ಮುನಿರಾಜು, ಶ್ರೀನಿವಾಸ್, ನಗರ ಜಿಲ್ಲಾಧ್ಯಕ್ಷ ಪ್ರಕಾಶ್, ಚಿಕ್ಕಪುಟ್ಟಯ್ಯ ಇದ್ದರು.

ಗ್ರಾಮೀಣ ಪ್ರತಿಭೆಗೆ ಉತ್ತಮ ವೇದಿಕೆ ದೊರೆಯಲಿ: ಟಿಜಿಎನ್
ಆನೇಕಲ್ಲು: ನಗರ ಪ್ರದೇಶದ ಉಳ್ಳವರು ಮಾತ್ರ ವಿಜೃಂಭಿಸುತ್ತಿದ್ದ ಭರತ ನಾಟ್ಯ ಕಲಿಕೆ ಹಾಗೂ ರಂಗ ಪ್ರವೇಶ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದತ್ತ ಕಾಲಿಡುತ್ತಿರುವುದು ಶ್ಲಾಘನೀಯ. ಧಾತ್ರಿ ಪ್ರತಿಷ್ಠಾನದಂತಹ ಹತ್ತಾರು ಸಂಘ ಸಂಸ್ಥೆಗಳು ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆಯ ನಿರ್ಮಿಸಿಕೊಡುವ ಮೂಲಕ ಬಾರತೀಯ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ ಹೇಳಿದ್ದಾರೆ. ಅವರು ಆನೇಕಲ್ಲಿನಲ್ಲಿ ನೂಪುರ ಫೈನಾರ್ಟ್ಸ್ ಅಕಾಡೆಮಿ, ಧಾತ್ರಿ ಪ್ರತಿಷ್ಠಾನ ವತಿಯಿಂದ ಆನೇಕಲ್ಲಿನ ರಾಮಕುಟೀರದ ಸುಬ್ಬರಾಯಶಾಸ್ತ್ರಿ ವೇದಿಕೆಯಲ್ಲಿ ಏರ್ಪಡಿಸಿದ್ದ  ನೂಪುರ ನಿನಾದ ಹಾಗೂ ಬಾಲ ಕುಸುಮಗಳ ರಂಗ ಪ್ರವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆನೇಕಲ್ ಶಾಸಕ ಬಿ. ಶಿವಣ್ಣ ಮಾತನಾಡಿ ಸಂಗೀತ, ಲಲಿತ ಕಲೆ, ಗಮಕ ವಾಚನ, ನಾಟ್ಯ ಮುಂತಾದ ಶಾಸ್ತ್ರೀಯ ಕಲಿಕೆಗಳನ್ನು ಪಟ್ಟಣ ಪ್ರದೇಶಗಳಲ್ಲಿ ಆಯೋಜಿಸುವ ಕಾಯಕ ಮೆಚ್ಚುವಂತಹುದು ಎಂದರು. ಗಮಕ ಕಲಾ ಪರಿಷತ್ತಿನ ಸತ್ಯನಾರಾಯಣ, ಕರ್ನಾಟಕ ಜಾನಪದ ಪರಿಷತ್ತಿನ ಸಿ.ಆರ್. ನಾಗಭೂಷಣ್ ಮಾತನಾಡಿದರು. ಕೂಚಿಪೂಡಿ ನೃತ್ಯ ಗುರು ವೇದಾಂತಂ ರಾಮು, ಮೃದಂಗ ವಿದ್ವಾನ್ ಎಲ್. ಕೃಷ್ಣಪ್ಪ, ಗಾಯಕ ಹಾಗೂ ವಾದಕ  ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.