ಬೆಂಗಳೂರು ಗ್ರಾಮಾಂತರ

ಮರಳು ದಂಧೆಗೆ ಅಧಿಕಾರಿಗಳ ನೆರವು!

Published On :

ಮಂಡ್ಯ/ ರಾಮನಗರ: ಶಿಂಷಾ ನದಿ ಪಾತ್ರದ ಆಯ್ದ ಸ್ಥಳಗಳನ್ನು ಮರಳುಗಾರಿಕೆ ವಲಯಗಳನ್ನಾಗಿ ಗುರುತಿಸುವ ಮೂಲಕ ಮರಳು ಮಾಫಿಯಾಕ್ಕೆ ನೆರವಾಗಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹುನ್ನಾರ ನಡೆಸಿರುವುದು ಬಯಲಾಗಿದೆ.
ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ಗಡಿ ಅಂಚಿನಲ್ಲಿ ಈ ಶಿಂಷಾ ನದಿ ಹರಿಯುತ್ತದೆ. ಇಗ್ಗಲೂರು ಜಲಾಶಯ ಒಳಗೊಂಡಂತೆ ಸ್ವಲ್ಪ ಭಾಗ ರಾಮನಗರ ಸರಹದ್ದಿಗೆ ಸೇರಿದ್ದರೆ, ನದಿಯ ಬಹುತೇಕ ಪಾತ್ರ ಮಂಡ್ಯ ಜಿಲ್ಲೆಯಲ್ಲಿರುವುದರಿಂದ ಈ ಜಿಲ್ಲೆಯ ಅಧಿಕಾರಿಗಳೇ ದಂಧೆಗೆ ಪರೋಕ್ಷವಾಗಿ ಸಹಕರಿಸಲು ಮುಂದಾಗಿದ್ದಾರೆ.
ಮಂಡ್ಯ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ನದಿ ಪಾತ್ರದಲ್ಲಿ ಹೇರಳವಾಗಿ ಸಿಗುವ ಕಡೆ ಮರಳುಗಾರಿಕೆ ವಲಯಗಳನ್ನು ಗುರುತಿಸಿ, ಅನುಮತಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಈ ಮೂಲಕ ಮರಳುಗಾರಿಕೆಯನ್ನು ಸಕ್ರಮಗೊಳಿಸುವ ಚಿಂತನೆ ಮಂಡ್ಯ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾಗಿದ್ದಾಗಿದೆ.
ಬದಲಾದ ನದಿ ಪಥ: ಶಿಂಷಾ ವರ್ಷವಿಡೀ ಹರಿಯುವ ಜೀವನದಿಯೇನಲ್ಲ. ಕಾವೇರಿ ಮತ್ತು ಹೇಮಾವತಿ ಅಚ್ಚುಕಟ್ಟು ಪ್ರದೇಶದ ಸೋರಿಕೆ ನೀರಿನಿಂದ ಮಳೆಗಾಲದಲ್ಲಷ್ಟೇ ಹರಿದರೂ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ಆಸುಪಾಸಿನ ಪ್ರದೇಶದಲ್ಲಿ ಅಂತರ್ಜಲಕ್ಕೆ ಮೂಲ ಸೆಲೆ ಮತ್ತು ಜೀವನಾಡಿಯಾಗಿದೆ.
ಇಂತಹ ನದಿಯಲ್ಲಿ ಕಳೆದ ಎರಡು ದಶಕದಿಂದ ಮರಳು ಸಂಪತ್ತಿನ ಲೂಟಿ ಅವ್ಯಾಹತವಾಗಿ ನಡೆಯುತ್ತಿದೆ. 2002ರಲ್ಲಿ ಮದ್ದೂರಿನವರೇ ಆದ ಮಾಜಿ ಸಿಎಂ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಶಿಂಷಾ ನದಿ ಪಾತ್ರದಲ್ಲಿ ಸೆಕ್ಷನ್ 144 ಅನ್ವಯ ಮರಳುಗಾರಿಕೆಗೆ ನಿಷೇಧ ಹೇರಿತ್ತು. ಆದಾಗ್ಯೂ ದಂಧೆ ಮಾತ್ರ ಈಗಲೂ ನಿರಂತವಾಗಿ ನಡೆಯುತ್ತಿರುವುದು ಮುಚ್ಚಿಡುವ ಸಂಗತಿಯೇನಲ್ಲ.
ಮರಳು ಸಂಪತ್ತಿನ ಲೂಟಿಗಾಗಿ ದಂಧೆಕೋರರು ಶಿಂಷಾ ನದಿ ಪಾತ್ರವನ್ನು ಮಿತಿ ಮೀರಿ ಬಗೆದಿಟ್ಟಿದ್ದಾರೆ. ಈ ಪರಿಣಾಮ ನದಿಯ ಪಥವೇ ಬದಲಾಗಿದೆ. ಆಸುಪಾಸಿನ ಪ್ರದೇಶದಲ್ಲಿ ಅಂತರ್ಜಲ ಬರಿದಾಗಿದೆ. ಮತ್ತೇನಾದರೂ ಮರಳುಗಾರಿಕೆಗೆ ಅವಕಾಶ ನೀಡಿದರೆ ಮತ್ತಷ್ಟು ವಿಪತ್ತು ಎದುರಾಗುವುದು ನಿಶ್ಚಿತ.
ಅಪಾಯ ಕಟ್ಟಿಟ್ಟ ಬುತ್ತಿ: ಶಿಂಷಾ ನದಿ ಮಳೆಗಾಲದಲ್ಲಷ್ಟೇ ಹರಿಯುತ್ತದೆ. ಆದರೂ ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ಸಾಕಷ್ಟು ಪ್ರದೇಶಕ್ಕೆ ಅರೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಇದೀಗ 198 ಕೋಟಿ ವೆಚ್ಚದಲ್ಲಿ ಚನ್ನಪಟ್ಟಣ ತಾಲೂಕಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಇಗ್ಗಲೂರಿನ ಎಚ್.ಡಿ. ದೇವೇಗೌಡ ಬ್ಯಾರೇಜ್ ಸಹಿತ ನಾನಾ ಅಣೆಕಟ್ಟುಗಳಿವೆ. ಶಿಂಷಾ ಎಡ ಮತ್ತು ಬಲದಂಡೆ ನಾಲಾ ನೀರಾವರಿ ಯೋಜನೆಗಳು, ಬೃಹತ್ ಸೇತುವೆಗಳಿವೆ. ಈಗೇನಾದರೂ ಆಯ್ದ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶ ಕಲ್ಪಿಸಿದರೆ ಅವೆಲ್ಲಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ.
ಭವಿಷ್ಯದ ದೃಷ್ಟಿಯಿಂದ ಶಿಂಷಾ ನದಿ ಪಾತ್ರದಲ್ಲಿ ಮರಳುಗಾರಿಕೆಗೆ ಕಡಿವಾಣ ಹಾಕಬೇಕೆನ್ನುವ ಕೂಗು ಎದ್ದಿದ್ದು, ಚನ್ನಪಟ್ಟಣದಲ್ಲಿ ಚಳವಳಿ ತೀವ್ರಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಮರಳುಗಾರಿಕೆ ವಲಯಗಳನ್ನು ಗುರುತಿಸುವ ಪ್ರಕ್ರಿಯೆ ಶಾಪವಾಗಲಿದೆ.
ಮರಳು ದಂಧೆಯಲ್ಲಿ ತೊಡಗಿದ ಬೆರಳೆಣಿಕೆ ಮಂದಿಯ ಉದ್ಧಾರಕ್ಕಾಗಿ ಶಿಂಷಾ ನದಿಯಂಚಿನ ಚನ್ನಪಟ್ಟಣ, ಮದ್ದೂರು ಮತ್ತು ಮಳವಳ್ಳಿ ಈ ಮೂರು ತಾಲೂಕುಗಳ ಜನರ ಹಿತ ಬಲಿ ಪಡೆಯುವ ಸಂಚು ನಡೆದಿದೆ. ಇದರ ವಿರುದ್ಧ ಹೋರಾಟ ಭುಗಿಲೇಳುವ ಸಾಧ್ಯತೆ ಇದೆ.
ಸಕ್ರಮಕ್ಕೆ ಚಿಂತನೆ ನಡೆದಿದೆ
ಶಿಂಷಾ ನದಿ ಪಾತ್ರದಲ್ಲಿ ರಾತ್ರಿ ವೇಳೆ ಟ್ರ್ಯಾಕ್ಟರ್ ಮತ್ತು ಎತ್ತಿನಗಾಡಿಗಳಲ್ಲಿ ಸಾಕಷ್ಟು ಅಕ್ರಮ ಮರಳು ತೆಗೆಯುವುದು ಮತ್ತು ಸಾಗಾಣಿಕೆ ಮಾಡುವುದು ನಿರಂತರವಾಗಿ ನಡೆದಿದೆ. ಹೀಗಾಗಿ ನದಿ ಪಾತ್ರದಲ್ಲಿ ಹೇರಳವಾಗಿ ಮರಳು ಸಿಗುವ ಕಡೆ ಭೂ ಗರ್ಭ ಇಲಾಖೆ ಹಾಗೂ ಕಂದಾಯ ಇಲಾಖೆಯ ಮೂಲಕವೇ ಸಕ್ರಮವಾಗಿ ಮರಳು ತೆಗೆದು, ಸಾರ್ವಜನಿಕವಾಗಿ ಹರಾಜು ಹಾಕುವ ಸಂಬಂಧ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ ಕಳಿಸುವ ಬಗ್ಗೆ ಚಿಂತನೆ ನಡೆದಿರುವುದು ನಿಜ.
-ನಾಗಭೂಷಣ್,
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಮಂಡ್ಯ


-- ಕೆ.ಎನ್. ರವಿ/ ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.