ಕಾರ್ಯಕರ್ತರನ್ನು ಸಂಕೋಚ ಬಿಟ್ಟು 'ಕೈ'ಗೆ ಸೆಳೆಯಿರಿ
ರಾಮನಗರ: ಅನ್ಯ ಪಕ್ಷಗಳ ಕಾರ್ಯಕರ್ತರನ್ನು ಸಂಕೋಚ ಬಿಟ್ಟು ಮಾತನಾಡಿಸಿ ಸ್ನೇಹ ಬೆಳೆಸಿ, ಕಾಂಗ್ರೆಸ್‌ಗೆ ಸೆಳೆಯಿರಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ವಪಕ್ಷೀಯ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ನಮಗೆ ಗೆಲವೊಂದೇ ಮಂತ್ರವಾಗಬೇಕು ಎಂದರು. ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿ. ಕಾರ್ಯಕರ್ತರನ್ನು ಗೌರವವಾಗಿ ನಡೆಸಿಕೊಳ್ಳುವುದೇ ಕಾಂಗ್ರೆಸ್ ಸಂಸ್ಕೃತಿ. ಈ ನಿಟ್ಟಿನಲ್ಲಿ ವಿವಿಧ ಕಮಿಟಿಗಳನ್ನು ರಚಿಸಿ, ಕಾರ್ಯಕರ್ತರಿಗೆ ಸ್ಥಾನಮಾನ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚನ್ನಪಟ್ಟಣ ಹೊರತಾಗಿ ಕಾಂಗ್ರೆಸ್ ಪಕ್ಷಕ್ಕೆ ಬೇರೆಲ್ಲೂ ಗೊಂದಲ ಎದುರಾಗಿಲ್ಲ. ಚನ್ನಪಟ್ಟಣದಲ್ಲಿರುವ ಅಲ್ಪಸ್ವಲ್ಪ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಶಿವಕುಮಾರ್ ಹೇಳಿದರು. ರಾಹುಲ್ ಗಾಂಧಿ ಅವರು ಫೆ.16ರಂದು ತುಮಕೂರಿನಲ್ಲಿ ಸಮಾವೇಶ ಮುಗಿಸಿ ಮಂಡ್ಯಕ್ಕೆ ತೆರಳುವರು. ಕುಣಿಗಲ್ ಬಳಿ ರಾಮನಗರ ಜಿಲ್ಲೆಯಿಂದ ಒಂದೂವರೆ ಸಾವಿರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿ, ಮಂಡ್ಯದವರೆಗೆ ಹಿಂಬಾಲಿಸಲಿದ್ದಾರೆ ಎಂದರು. ತುಮಕೂರು ಮಂಡ್ಯ ಸಮಾವೇಶಕ್ಕೆ ಮಹಿಳೆಯರನ್ನು ಕರೆದೊಯ್ಯಲು ಬಸ್ ಏರ್ಪಾಟು ಮಾಡಲಾಗಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುವುದಕ್ಕೆ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಸಯ್ಯದ್ ಜಿಯಾವುಲ್ಲಾ, ಮುಖಂಡರಾದ ಮರಿದೇವರು, ಎ.ಮಂಜುನಾಥ್, ರಮೇಶ್, ವೆಂಕಟೇಶ್, ಆರಿಫ್ ಖುರೇಷಿ, ರವಿಕುಮಾರ್, ಪಾರ್ವತಮ್ಮ, ಕಾಂತರಾಜ್ ಪಟೇಲ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

