ಬೆಂಗಳೂರು ಗ್ರಾಮಾಂತರ

ಬಜೆಟ್: ಈಡೇರದ ದೊಡ್ಡಬಳ್ಳಾಪುರದ ಕನಸು

Published On :

ದೊಡ್ಡಬಳ್ಳಾಪುರ: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಬೆಟ್ಟದಷ್ಟನ್ನು ನಿರೀಕ್ಷಿಸಿದ್ದ ದೊಡ್ಡಬಳ್ಳಾಪುರಕ್ಕೆ ಹಿಡಿಯಷ್ಟೂ ಸಿಗದೆ ನಿರಾಶೆಯಾಗಿದೆ. ನಗರಾಭಿವೃದ್ಧಿ ಯೋಜನೆಗಳು, ನೀರಾವರಿ, ಸ್ಥಳೀಯ ಪ್ರದೇಶಾಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಿರೀಕ್ಷಿಸಲಾಗಿದ್ದ ಅನುದಾನಗಳಾವೂ ದೊರೆತಿಲ್ಲ. ಎಂದಿನಂತೆ ಜನರ ನಿರೀಕ್ಷೆ ಹುಸಿಯಾಗಿ ನಿರಾಶೆಯೇ ಜೊತೆಯಾಗಿದೆ.
ಹುಸಿಯಾದ ನಿರೀಕ್ಷೆ 1:  ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವಾಗಿ ದೊಡ್ಡಬಳ್ಳಾಪುರವನ್ನು ಘೋಷಣೆ ಮಾಡುವ ಕುರಿತು ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾವನೆ ನಿರೀಕ್ಷಿಸಿದ್ದು ಹುಸಿಯಾಗಿದೆ. ಅಲ್ಲದೆ ದೊಡ್ಡಬಳ್ಳಾಪುರದ ಮಟ್ಟಿಗೆ ಬಜೆಟ್ ಎಳ್ಳಷ್ಟೂ ಆಶಾದಾಯಕವಾಗಿಲ್ಲ. ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಎರಡೂ ತಾಲೂಕುಗಳಲ್ಲಿ ಹೋರಾಟ ತೀವ್ರವಾಗಿದೆ. ಜೊತೆಗೆ ಲೋಕಸಭಾ ಚುನಾವಣೆಯೂ ಹತ್ತಿರವಿದೆ. ಈ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳಲ್ಲಿ ಜನರ ವಿಶ್ವಾಸ ಗಳಿಸಿಕೊಳ್ಳುವ ಪ್ರಶ್ನೆ ಮುಂದಿರುವುದು ಬಹುಶಃ ಈ ವಿಚಾರದಲ್ಲಿ ಸರ್ಕಾರದ ತಟಸ್ಥ ಧೋರಣೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.  
ಹುಸಿಯಾದ ನಿರೀಕ್ಷೆ 2: ಕಳೆದ 4 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪಟ್ಟಣದ ರಸ್ತೆಗಳ ಅಗಲೀಕರಣಕ್ಕೆ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ 25 ಕೋಟಿ ರು. ಅನುದಾನ ತರುವ ಭರವಸೆಯನ್ನು ಈ ಹಿಂದಿನ ಶಾಸಕರೂ ನೀಡಿದ್ದರು. ಹಾಲಿ ಶಾಸಕರೂ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಯಾವುದೇ ವಿಶೇಷಾನುದಾನದ ಪ್ರಸ್ತಾವನೆ ಆಗಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕರಿಂದ ವ್ಯವಸ್ಥಿತ ಪ್ರಸ್ತಾವನೆ ಸಲ್ಲಿಕೆಯಾಗಬೇಕಿತ್ತು. ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ವಿಚಾರದಲ್ಲಿ ಸ್ಥಳೀಯ ಆಡಳಿತದ ಹೊಣೆಯಾಧಾರಿತ ವೈಫಲ್ಯ ಕಾರಣ ಎನ್ನಬಹುದು.
ಹುಸಿಯಾದ ನಿರೀಕ್ಷೆ 3: ಅದೇ ರೀತಿ ನಷ್ಟದಲ್ಲಿರುವ ರಾಜ್ಯದ ಏಕೈಕ ಜವಳಿ ಪಾರ್ಕ್ (ದೊಡ್ಡಬಳ್ಳಾಪುರ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ಪಾರ್ಕ್) ದಿವಾಳಿಯಾಗುವುದನ್ನು ತಪ್ಪಿಸಲು 10 ಕೋಟಿ ಸಹಾಯಧನ ನಿರೀಕ್ಷಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಾಗಿ ಅನುಷ್ಠಾನಗೊಂಡಿರುವ ಈ ಟೆಕ್ಸ್‌ಟೈಲ್ ಪಾರ್ಕಿಗೆ ಕೇಂದ್ರ ಮತ್ತು ರಾಜ್ಯದ ಜವಳಿ ಸಚಿವರೂ ಭೇಟಿ ನೀಡಿ ಸಂಕಷ್ಟ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಭರವಸೆ ಬಜೆಟ್‌ನಲ್ಲಿ ಈಡೇರಿಲ್ಲ. ನೇಕಾರರ ಕಲ್ಯಾಣಕ್ಕೆ ವಿಶೇಷ ಯೋಜನೆಗಳಾವೂ ಬಜೆಟ್‌ನಲ್ಲಿ ಸಿಕ್ಕಿಲ್ಲ.
ಹಲವು ನಿರೀಕ್ಷೆ ಹುಸಿ: ಕಳೆದ ಕೆಲ ತಿಂಗಳ ಹಿಂದೆಯೇ ದೊಡ್ಡಬಳ್ಳಾಪುರದಲ್ಲಿ ಹೈಟೆಕ್ ಆಸ್ಪತ್ರೆ, ಹೈಟೆಕ್ ಬಸ್ ನಿಲ್ದಾಣ ಸೇರಿದಂತೆ ಅನೇಕ ಮೂಲಸೌಕರ್ಯಗಳನ್ನು ಒದಗಿಸುವ ಮಹತ್ವದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇದಕ್ಕೆ ಹಣ ಎಲ್ಲಿದೆ ಎಂಬುದು ಇಂದಿಗೂ ಯಕ್ಷ ಪ್ರಶ್ನೆ. ಬಜೆಟ್‌ನಲ್ಲಿ ಈ ಬಗೆಯ ಯಾವುದೇ ಯೋಜನೆಗಳಿಗೆ ಅನುಮೋದನೆ ದೊರೆತಿಲ್ಲ. ಯಲಹಂಕದಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಸೇರುವ ರಾಜ್ಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ ಕಳೆದ ಬಜೆಟ್‌ನಲ್ಲಿ ಅಲ್ಪಮಟ್ಟಿಗಿನ ಹಣ ಒದಗಿತ್ತಾದರೂ ಈ ಬಾರಿ ಅದರ ಪ್ರಸ್ತಾಪವೂ ಆಗಿಲ್ಲ. ಇಲ್ಲಿನ ಸ್ಥಳೀಯ ಬೇಡಿಕೆಗಳು, ಉದ್ದಿಮೆ, ನಗರಾಭಿವೃದ್ದಿ ಸೇರಿದಂತೆ ದೊಡ್ಡಬಳ್ಳಾಪುರ ಅಭಿವೃದ್ಧಿಗೆ ಪೂರಕವಾಗಿ ಯಾವುದೇ ಹೊಸ ಅನುದಾನ-ಯೋಜನೆಗಳ ಪ್ರಸ್ತಾಪ ಬಜೆಟ್‌ನಲ್ಲಿ ಆಗಿಲ್ಲ. ಇದು ಸಹಜವಾಗಿಯೇ ದೊಡ್ಡಬಳ್ಳಾಪುರದ ಜನರ ನಿರಾಶೆಯ ಪ್ರತಿಕ್ರಿಯೆಗೆ ಕಾರಣವಾಗಿದೆ.


-ಕೆ.ಆರ್.ರವಿಕಿರಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.