ಬೆಂಗಳೂರು ಗ್ರಾಮಾಂತರ

ಮರೆಯಾಗುತ್ತಿದೆ ಜಾನಪದ ಕಲೆ, ಸಂಸ್ಕೃತಿ

Published On :

ರಾಮನಗರ: ಪಾಶ್ಚಾತ್ಯ ಸಂಸ್ಕೃತಿ ಮತ್ತು ಆಡಂಬರದ ಜೀವನ ಶೈಲಿಯಿಂದ ಜಾನಪದ ಕಲೆ, ಸಂಸ್ಕೃತಿ ಮರೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಮದುವೆಗಳಲ್ಲಿ ಸೋಬಾನೆ ಪದಗಳು ಮೊಳಗುತ್ತಿದ್ದವು. ಅವು ಈಗಿನ ಆಡಂಬರದ ಮದುವೆಗಳಿಂದ ದೂರವಾಗಿವೆ ಎಂದು ಮಾಜಿ ಸಚಿವೆ ಮತ್ತು ಶಾಸಕಿ ಮೋಟಮ್ಮ ವಿಷಾದಿಸಿದರು.    
ಜಾನಪದ ಲೋಕದಲ್ಲಿ 2 ದಿನ ನಡೆದ ಲೋಕೋತ್ಸವದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದ ಮದುವೆಗಳಲ್ಲಿ ದೇಶೀ ಸಂಸ್ಕೃತಿಯ ಸೊಬಗು ಮೇಳೈಸಿರುತ್ತಿತ್ತು. ಆದರೆ, ಈಗ ಅದು ಒಣ ಆಡಂಬರಕ್ಕೆ ನಲುಗಿ ಹೋಗಿದೆ ಎಂದು ಅವರು ತಿಳಿಸಿದರು. ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ಅತ್ಯುತ್ಕೃಷ್ಟವಾಗಿದೆ. ಇಂದಿನ ಯುವಜನತೆ ದೇಸೀ ಸಂಸ್ಕೃತಿಯನ್ನು ಕಡೆಗಣಿಸಿ, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ತೊಡಗಿದ್ದಾರೆ. ನಶಿಸುತ್ತಿರುವ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಚ್.ಎಲ್.ನಾಗೇಗೌಡ ಸ್ಥಾಪಿಸಿರುವ ಜಾನಪದ ಲೋಕದ ಉದ್ದೇಶವನ್ನು ಸಾರ್ಥಕ ಮಾಡುವಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು ಎಂದರು.
ನಾಗೇಗೌಡರ ಗುಣಗಾನ: ಕನ್ನಡ ನಾಡಿನ ಜನಪದ ಸಾಹಿತ್ಯ ಮತ್ತು ಕಲೆಗಳ ಉಳಿವಿನ ಬಗ್ಗೆ ಜಾನಪದ ಲೋಕ ತನ್ನದೇ ಆದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಜಾನಪದ ಲೋಕವು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬ ಸದುದ್ದೇಶದಿಂದ ತಮ್ಮ ಶಾಸಕರ ನಿಧಿಯಿಂದ ರು.2 ಲಕ್ಷ ಅನುದಾನ ನೀಡುವುದಾಗಿ ಮೋಟಮ್ಮ ಭರವಸೆ ನೀಡಿದರು.
ಜಾನಪದ ಲೋಕದ ಸಂಸ್ಥಾಪಕ ಡಾ.ಎಚ್.ಎಲ್.ನಾಗೇಗೌಡರು ಉನ್ನತ ಅಧಿಕಾರಿಯಾಗಿ, ಸಂಗ್ರಹಕಾರರಾಗಿ, ಸಾಹಿತಿಯಾಗಿ ಕನ್ನಡ ನಾಡಿಗೆ ಅತ್ಯಮೂಲ್ಯವಾದ ಕೊಡುಗೆ ನೀಡಿದ್ದಾರೆ. ಕೆಪಿಎಸ್ಸಿ ಸದಸ್ಯರಾಗಿದ್ದಾಗ ಅವರು ತೋರಿದ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯು ನಿಜಕ್ಕೂ ಅನುಕರಣೀಯ ಎಂದು ಅವರು ಅಭಿಪ್ರಾಯಪಟ್ಟರು.
ನಾಗೇಗೌಡರು ಜಾತಿ ವ್ಯಾಮೋಹ, ಹಣ ಬಲಕ್ಕೆ ಬಲಿಯಾಗದೆ ಅರ್ಹತೆಯನ್ನೇ ಮಾನದಂಡವಾಗಿಸಿದರು. ಪ್ರತಿಭಾವಂತರನ್ನೇ ಆಯ್ಕೆ ಮಾಡಿದರು. ಆದರೆ, ಇಂದು ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಕರ್ಮಕಾಂಡ ಇಡೀ ವ್ಯವಸ್ಥೆಯ ಬಗ್ಗೆ ಅನುಮಾನದಿಂದ ನೋಡುವಂತಾಗಿದೆ. ಅರ್ಹರು ಅವಕಾಶ ವಂಚಿತರಾಗಿ ಪರಿತಪಿಸುತ್ತಿದ್ದಾರೆ ಎಂದು ವಿಷಾದಿಸಿದರು.  
ಚುಂಚಶ್ರೀ ಕರೆ: ಆಧುನೀಕರಣ, ಜಾಗತೀಕರಣದ ಭರಾಟೆಯಲ್ಲಿ ಜನಪದ ಕಲೆಗಳು ನಶಿಸುತ್ತಿವೆ. ಜಾನಪದ ಸಾಹಿತ್ಯದ ಪ್ರೇರಣೆಯಿಂದಲೇ ಹಲವು ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಇಂತಹ ಸೃಜನಶೀಲ ಸಾಹಿತ್ಯ, ಕಲೆಯನ್ನು ಉಳಿಸಿ, ಬೆಳೆಸುವ ಅವಶ್ಯಕತೆಯಿದೆ ಎಂದು ಪ್ರಶಸ್ತಿ ಪ್ರದಾನ ನೆರವೇರಿಸಿದ  ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ಕಲಾ ಪ್ರದರ್ಶನ: ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಜಾನಪದ ಕಲಾವಿದರು ನಡೆಸಿಕೊಟ್ಟ ವೀರಭದ್ರ ಕುಣಿತ, ಸೋಮನ ಕುಣಿತ, ಬೊಳ್ಕಾಟ್, ಕತ್ತಿ ಆಟ, ಕೋಲಾಟ, ಕಿನ್ನರಿ ಜೋಗಿಗಳು, ಗುಮಟೆ ಮತ್ತು ಪಂಚವಾದ್ಯ, ಗೊಂದಲಿಗರ ಮೇಳ, ಗೀತಗಾಯನ, ಜಾನಪದ ನೃತ್ಯ ನೋಡುಗರ ಮನಸ್ಸನ್ನು ಸೂರೆಗೊಂಡವು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ಕೆ.ರಾಜು, ನಿವೃತ್ತ ಐಪಿಸ್ ಅಧಿಕಾರಿ ಕೆ.ವಿ.ಆರ್. ಠಾಗೋರ್, ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ್, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ, ಮೇನೆಜಿಂಗ್ ಟ್ರಸ್ಟಿ ಇಂದಿರಾಬಾಲಕೃಷ್ಣ, ರಾಜ್ಯ ಸಂಚಾಲಕ ಡಾ.ಎಸ್. ಬಾಲಾಜಿ, ಜಾನಪದ ಲೋಕದ ಸಂಯೋಜಕ ಡಾ.ಕುರುವಬಸವರಾಜ್ ಮತ್ತಿತರರು ಭಾಗವಹಿಸಿದ್ದರು.
ಪ್ರಶಸ್ತಿ ಪುರಸ್ಕೃತರು: 2014ನೇ ಸಾಲಿನ ನಾಡೋಜ ಎಚ್.ಎಲ್.ನಾಗೇಗೌಡ ಪ್ರಶಸ್ತಿಯನ್ನು ಹಾಸನ ಜಿಲ್ಲೆಯ ನಂದಿಧ್ವಜ ಕಲಾವಿದ ಎಚ್.ಡಿ.ಸಂಜೀವಯ್ಯ, ನಾಡೋಜ ಜಿ.ನಾರಾಯಣ ಜಾನಪದ ಲೋಕಶ್ರಿ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಜಾನಪದ ವಿದ್ವಾಂಸ ಎನ್.ಆರ್.ನಾಯಕ್, ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿಯನ್ನು ಕೌದಿ ಕಲಾವಿದೆ ಸುಗಲಾಬಾಯಿ ಗೌಡತಿ, ಸಿ.ಪಾಟಿಲ ಅವರಿಗೆ ಪ್ರದಾನ ಮಾಡಲಾಯಿತು.
ಸೋಬಾನೆ ಚಿಕ್ಕಮ್ಮ ಪ್ರಶಸ್ತಿಯನ್ನು ಬಡಗಚ್ಚಿ ದೊಡ್ಡನಿಂಗಮ್ಮ, ದೊಡ್ಡಮನೆ ಪ್ರಶಸ್ತಿಯನ್ನು ರೇವಮ್ಮ, ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿಯನ್ನು ಈಶ್ವರಚಂದ್ರ ಬೆಟಗೇರಿ, ಜಾನಪದ ಲೋಕ ಪ್ರಶಸ್ತಿಯನ್ನು ಕೆಂಪಮ್ಮ, ಗೋಂದಳಿ ರಾಮಣ್ಣ, ಬಿ.ರಾಮಣ್ಣ, ಚಂದಗಾಲು ಬೋರಪ್ಪ, ವಸಂತನಾರಾಯಣ ರನ್ನವರೆ, ನಾಗುತಿಮ್ಮೇಗೌಡ, ಸಿದ್ದಪ್ಪ ಅಮ್ಮಣ್ಣ ತಳೇವಾಡ, ಗಂಗಯ್ಯಪರ್ವ, ಶಿವಣ್ಣ, ದಾವಲ್ ಸಾಹೇಬ ಅತ್ತಾರ, ಡಾ. ವಿಶ್ವನಾಥ್ ಕಾರ್ನಾಡ, ಕೆ.ಎಲ್. ರಂಗಪ್ಪಗೌಡ, ಗಂಗಾಧರಸ್ವಾಮಿ, ಮಹಾದೇವು ಅವರಿಗೆ ನೀಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.