ಸಿಎಂ ಸಿದ್ದು ನಮ್ಮ ನಗರಸಭೆ ಕುರ್ಚಿಯ ವಾರಸುದಾರ...
ನಗರಸಭೆ ಮುಂದೆ ಜೆಡಿಎಸ್ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಫೆ.19
ಇವರು ಸಿಎಂ ಸಿದ್ದರಾಮಯ್ಯ. ಸದ್ಯಕ್ಕೆ ನಮ್ಮ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸೇರಿದಂತೆ ಎಲ್ಲ ಅಧಿಕಾರಸ್ಥ ಹುದ್ದೆಗಳಲ್ಲೂ ಅವರೇ ಆಸೀನರಾಗಿದ್ದಾರೆ. ಒಂದು ರೀತಿಯಲ್ಲಿ ಇವರದ್ದು ಸರ್ವಾಧಿಕಾರ. ಅಧಿಕಾರ ವಿಕೇಂದ್ರೀಕರಣದ ಸಮಾಜವಾದಿ ಮುಖ ಹೊಂದಿರುವ ಸಿದ್ದರಾಮಯ್ಯ್ವರಿಗೆ ಚುನಾಯಿತ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಾಯತ್ತ ಆಡಳಿತ ಜಾರಿಗೆ ತರುವ ಮನಸ್ಸಿಲ್ಲ. ಈ ಹೊಣೆಗೇಡಿ ವರ್ತನೆ ಖಂಡನಾರ್ಹ -ರಾಜ್ಯ ಸರ್ಕಾರಕ್ಕೆ ದೊಡ್ಡಬಳ್ಳಾಪುರ ಜೆಡಿಎಸ್ ಛೀಮಾರಿ ಹಾಕಿದ ಪರಿ ಇದು.
ಇಲ್ಲಿನ ಜೆಡಿಎಸ್ ನೇತೃತ್ವದಲ್ಲಿ ಚುನಾಯಿತ ನಗರಸಭಾ ಸದಸ್ಯರು ನಗರಸಭೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿ 3 ಕುರ್ಚಿಗಳಲ್ಲಿ ಸಿದ್ಧರಾಮಯ್ಯ ಫೋಟೋ ಇಟ್ಟು ಆಡಳಿತ ವ್ಯವಸ್ಥೆಯ ದುಃಸ್ಥಿತಿಯನ್ನು ಅಣಕ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರು, ನಗರಸಭೆ ಮತ್ತು ಪುರಸಭೆಗಳಿಗೆ ಚುನಾವಣೆ ನಡೆದು ವರ್ಷವಾದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡದೇ ಇರುವ ಕಾಂಗ್ರೆಸ್ ಸರ್ಕಾರದ ನೀತಿ ಖಂಡನೀಯ. ನ್ಯಾಯಾಲಯದಲ್ಲಿರುವ ಪ್ರಕರಣ ಜರೂರಾಗಿ ಇತ್ಯರ್ಥಪಡಿಸಿ ಜನಪ್ರತಿನಿಧಿಗಳ ಹಕ್ಕನ್ನು ಉಳಿಸಬೇಕಿದೆ ಎಂದು ಆಗ್ರಹಿಸಿದರು.
ಹದಗೆಟ್ಟ ಆಡಳಿತ: ದೊಡ್ಡಬಳ್ಳಾಪುರ ನಗರಸಭೆ ಆಡಳಿತ ಹದಗೆಟ್ಟಿದೆ. ದಲ್ಲಾಳಿಗಳ ಸ್ವರ್ಗವಾಗಿ ನಗರಸಭೆ ಮಾರ್ಪಟ್ಟಿದೆ. ಖಾತೆ ಮಾಡುವುದರಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ರೀತಿಯಾಗಿ ಭ್ರಷ್ಟಾಚಾರದ ಮಾರ್ಗದಲ್ಲಿ ಆಗಿರುವ ಖಾತೆಗಳನ್ನು ವಜಾಗೊಳಿಸಿ ಅವುಗಳಿಗೆ ಕಾರಣವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮೂಲಸೌಕರ್ಯಕ್ಕೆ ಒತ್ತು ಕೊಡಿ: ಬೇಸಿಗೆ ಪ್ರಾರಂಭವಾಗಿದ್ದು ಹಲವು ಕೊಳವೆ ಬಾವಿಗಳು ಬತ್ತಿವೆ. ನೀರು ಪೂರೈಕೆ ಬಗ್ಗೆ ಕನಿಷ್ಠ ಸಭೆ ಕರೆಯುವ ಸೌಜನ್ಯವೂ ಅಧಿಕಾರಸ್ಥರಿಗೆ ಇಲ್ಲ. 31 ವಾರ್ಡ್ಗಳ ಸ್ವಚ್ಛತೆ ಸಂಪೂರ್ಣ ಹದಗೆಟ್ಟಿದೆ. ಕಾಲರಾ ಮತ್ತು ಡೆಂಘೀ ಜ್ವರ ಹರಡುವುದನ್ನು ತಡೆಗಟ್ಟಲು ಪ್ರತಿದಿನ ಸೊಳ್ಳೆ ನಿರ್ಮೂಲನಾ ಔಷಧ ಸಿಂಪಡಿಸುವುದು ಕಡ್ಡಾಯವಾಗಬೇಕು. ಈಗಾಗಲೇ ತಡವಾಗಿರುವ 2014 ಮತ್ತು 2015ರ ಸಾಲಿನ ಆಯವ್ಯಯವನ್ನು ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳ ಮುಂದೆ ಮಂಡಿಸಬೇಕು. ಗುತ್ತಿಗೆ ಆಧಾರದಲ್ಲಿ ವಾರ್ಡ್ಗಳಲ್ಲಿ ಕೆಲಸ ನಿರ್ವಹಿಸಲು ಟೆಂಡರ್ ಮುಗಿದಿದ್ದು ಕೆಲಸಗಳು ಕುಂಠಿತವಾಗಿದೆ. ಕೂಡಲೇ ಟೆಂಡರ್ ಕರೆದು ಊರಿನ ಸ್ವಚ್ಛತೆಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

