ನಿರ್ಣಾಯಕ ಘಟ್ಟಕ್ಕೆ ಜಿಪಂ ಅಧ್ಯಕ್ಷ ಸ್ಥಾನ
ಮತ್ತೀಕೆರೆ ಜಯರಾಮ್
ರಾಮನಗರ: ಇಲ್ಲಿನ ಜಿಪಂ ಅಧ್ಯಕ್ಷ ಸ್ಥಾನದ ಬದಲಾವಣೆ ಪ್ರಕ್ರಿಯೆ ನಿರ್ಣಾಯಕ ಘಟ್ಟ ತಲುಪಿದೆ. ಜೆಡಿಎಸ್ ವರಿಷ್ಠರು ರೂಪಿಸಿದ್ದ ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರದನ್ವಯ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿರುವ ಹಾಲಿ ಅಧ್ಯಕ್ಷ ಎಚ್.ಸಿ.ರಾಜು ಭವಿಷ್ಯ ಇಂದು (ಫೆ.22) ನಿರ್ಧಾರವಾಗಲಿದೆ.
ರಾಜು ರಾಜಿನಾಮೆ ಸಲ್ಲಿಸಿ ಶನಿವಾರಕ್ಕೆ 15 ದಿನ ತುಂಬಲಿದೆ. ಒಂದೊಮ್ಮೆ ರಾಜಿನಾಮೆ ಹಿಂಪಡೆದಲ್ಲಿ ಅವರು ಅಧಿಕಾರದಲ್ಲಿ ಮುಂದುವರೆಯಬಹುದು. ಆ ಗೋಜಿಗೆ ರಾಜು ಹೋಗದಿದ್ದರೆ ನಿಯಮಾನುಸಾರ ರಾಜಿನಾಮೆ ಅಂಗೀಕಾರಗೊಂಡು, ಸ್ಥಾನ ತೆರವುಗೊಳ್ಳಲಿದೆ.
ಜೆಡಿಎಸ್ ಪಾಳಯದಲ್ಲಿ ರಾಜು ಪರ ಮತ್ತು ವಿರುದ್ಧ ಕಡೆ ಕ್ಷಣದ ಲಾಬಿ ಮುಂದುವರಿದಿದೆ. ಚೆಂಡು ಈಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಂಗಳದಲ್ಲಿದ್ದು, ರಾಜು ಮುಂದುವರಿಕೆ ಅಥವಾ ಪದತ್ಯಾಗದ ಅಂತಿಮ ತೀರ್ಮಾನ ಕುಮಾರಸ್ವಾಮಿ ಅವರನ್ನು ಅವಲಂಬಿಸಿದೆ.
ಬಾಲಕೃಷ್ಣ ಪಟ್ಟು: ರಾಜು ಅವರಿಂದ ರಾಜಿನಾಮೆ ಕೊಡಿಸುವಂತೆ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಅಧ್ಯಕ್ಷ ಸ್ಥಾನಾಕಾಂಕ್ಷಿ ಸುಧಾ ರಾಜು ಸಹಿತ ಕೆಲವರು ತೀವ್ರ ಒತ್ತಡ ಹೇರಿದ್ದರು. ಸ್ವಪಕ್ಷೀಯ ಸದಸ್ಯರು ಮತ್ತು ಸುಧಾ ರಾಜು ಸ್ವಕ್ಷೇತ್ರ ಕೋಡಂಬಳ್ಳಿಗೆ ಸೇರಿದ ಜೆಡಿಎಸ್ ಮುಖಂಡರು ರಾಜು ಪರ ನಿಂತಿದ್ದರು. ಸುಧಾ ರಾಜು ಅವರ ಪಕ್ಷ ನಿಷ್ಠೆ ಮತ್ತು ಕಾರ್ಯ ವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಕೋಡಂಬಳ್ಳಿ ಕ್ಷೇತ್ರದ ಜೆಡಿಎಸ್ ಮುಖಂಡರು ಕುಮಾರಸ್ವಾಮಿ ಬಳಿ ನಿಯೋಗ ತೆರಳಿ, ಸುಧಾ ರಾಜು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಬಿಲ್ಕುಲ್ ಬೇಡ ಎಂದಿದ್ದರು.
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸುಮಾರು ಒಂದು ತಿಂಗಳು ಕಾಲ ದೂಡಿದ್ದರು. ಅಷ್ಟರಲ್ಲಿ ರಾಮನಗರ ತಾಪಂನಲ್ಲಿ ಜೆಡಿಎಸ್ ಮುಖಭಂಗ ಅನುಭವಿಸಿತು. ಇಷ್ಟಾಗಿಯೂ ಶಾಸಕ ಬಾಲಕೃಷ್ಣ ಅವರೇ ಪಟ್ಟು ಹಿಡಿದು ರಾಜು ರಾಜಿನಾಮೆಗೆ ಸೂಚಿಸಿದ್ದರು.
ಅಂತಿಮ ಕಸರತ್ತು: ಜಿಪಂ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ರಾಜು ಪರ ಒಲವು ತೋರಿರುವ ಸದಸ್ಯರು ಮತ್ತು ಪಕ್ಷದ ಮುಖಂಡರು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದು, ಅವರ ರಾಜಿನಾಮೆ ಅಂಗೀಕಾರ ಬೇಡವನ್ನುವ ವಕಾಲತ್ತು ವಹಿಸಿದ್ದಾರೆ. ರಾಜು ಪರ ಬ್ಯಾಟಿಂಗ್ ನಡೆಸುತ್ತಿರುವವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಪರಿಸ್ಥಿತಿ ಮನದಟ್ಟು ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ.
ಜೆಡಿಎಸ್ಗೆ ಸವಾಲು: ವಿವಿಧ ಚುನಾವಣೆಗಳು ಸಮೀಪಿಸಿದಾಗ ಕೆಲ ಸ್ಥಳೀಯ ಸಂಸ್ಥೆಗಳ ಅಧಿಕಾರ ಹಂಚಿಕೆ ಸೂತ್ರ ಜಾರಿಯನ್ನು ಮುಂದೂಡಿದ ನಿದರ್ಶನಗಳು ಜೆಡಿಎಸ್ನಲ್ಲಿ ಸಾಕಷ್ಟಿವೆ. ಆದರೆ, ಈ ಬಾರಿ ಜಿಪಂ ಅಧ್ಯಕ್ಷರ ಬದಲಾವಣೆಗೆ ಅಂತಹ ಯಾವುದೇ ವಿನಾಯ್ತಿ ಇಲ್ಲ.
ಲಾಭಕ್ಕೆ ಹವಣಿಕೆ: ಜಿಪಂ ಅಧ್ಯಕ್ಷ ಸ್ಥಾನದ ಬದಲಾವಣೆಗೆ ಮುಂದಾಗಿರುವ ಜೆಡಿಎಸ್ ಬಿಕ್ಕಟ್ಟನ್ನು ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಹವಣಿಸಿದೆ. ಲೋಕಸಭೆಗೆ ಮೊದಲು ಈ ಚುನಾವಣೆ ನಡೆದರೆ ಜೆಡಿಎಸ್ ತೆಕ್ಕೆಯಿಂದ ಜಿಪಂ ಆಡಳಿತ ಕೈ ವಶಪಡಿಸಿಕೊಂಡು ಕ್ಷೇತ್ರಕ್ಕೆ ಸಂದೇಶ ರವಾನಿಸಲು ಪ್ರಯತ್ನಿಸಬಹುದು.
ತೆರವಾದ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಅವಿರೋಧ ಆಯ್ಕೆಗೆ ಸಹಕರಿಸಿ, ಮುಂದಿನ ಅಧ್ಯಕ್ಷರು ಮತ್ತು ಅವರ ಪರ ಇರುವವರಲ್ಲಿ ಕಾಂಗ್ರೆಸ್ ಬಗ್ಗೆ ಪರೋಕ್ಷ ಒಲವು ಮೂಡಿಸುವ ತಂತ್ರಗಾರಿಕೆಯನ್ನು ಆ ಪಕ್ಷದವರು ಹೆಣೆಯಬಹುದು ಎನ್ನುವ ಮಾತು ಕೇಳಿ ಬರುತ್ತಿವೆ.
ವರಿಷ್ಠರ ತೀರ್ಮಾನಕ್ಕೆ ಬದ್ಧ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ-ಜೆಡಿಎಸ್ನಿಂದ ನನಗೆ ಜಿಪಂ ಅಧ್ಯಕ್ಷ ಹುದ್ದೆ ಸಿಕ್ಕಿದೆ. ವರಿಷ್ಠರ ಸೂಚನೆಯಂತೆ ರಾಜಿನಾಮೆ ಸಲ್ಲಿಸಿದ್ದೇನೆ. ಮುಂದೆಯೂ ಅವರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ.
ಟಿ ಎಚ್.ಸಿ.ರಾಜು, ಅಧ್ಯಕ್ಷರು, ಜಿಪಂ, ರಾಮನಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

