ಬೆಂಗಳೂರು ಗ್ರಾಮಾಂತರ

ರಕ್ತ ಕೊಟ್ಟಿದ್ದೇವೆ ಜಿಲ್ಲಾ ಕೇಂದ್ರ ಕೊಡಿ...

Published On :

ದೊಡ್ಡಬಳ್ಳಾಪುರ:  ರಕ್ತ ಕೊಡುತ್ತಿದ್ದೇವೆ...ನಮಗೆ ಜಿಲ್ಲಾ ಕೇಂದ್ರ ಕೊಡಿ. ನಾವು ಯಾವುದೇ  ತ್ಯಾಗಕ್ಕೂ ಸಿದ್ಧ. ನಮ್ಮ ಸ್ವಾಭಿಮಾನ ಕೆಣಕಬೇಡಿ. ನ್ಯಾಯಯುತವಾಗಿ ನಮ್ಮೂರಿಗೆ ಸಲ್ಲಬೇಕಾದ ಹಕ್ಕನ್ನು ನಮಗೆ ಕೊಡಿ - ಇದು ಕರ್ನಾಟಕ ಯುವ ಕ್ರಾಂತಿ ಪಡೆ ಕಾರ್ಯಕರ್ತರ ಒತ್ತಾಯ.
ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಹೋರಾಟದ ಅಂಗವಾಗಿ ಶುಕ್ರವಾರ ತಾಲೂಕು ಕಚೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಕ್ರಾಂತಿ ಪಡೆ ಕಾರ್ಯಕರ್ತರು, ಎಲ್ಲ ಹಂತಗಳಲ್ಲೂ ಪರಿಪಕ್ವ ಮತ್ತು ವಿಶೇಷ ಅರ್ಹತೆ ಹೊಂದಿರುವ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಬೇಕು. ಇದು ಇಂದು ನಿನ್ನೆಯ ಒತ್ತಾಯವಲ್ಲ. ಸುಮಾರು 7 ವರ್ಷಗಳಿಂದ ನಿರಂತರವಾಗಿ ಸರ್ಕಾರವನ್ನು ಒತ್ತಾಯಿಸುತ್ತಲೇ ಬರುತ್ತಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಬೇಡಿಕೆ ಈಡೇರಿಲ್ಲ. ಈಗ ಹೋರಾಟದ ಹಾದಿ ಗಂಭೀರ ಸ್ವರೂಪ ಪಡೆದಿದೆ. ನಾವೀಗ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ. ಜಿಲ್ಲಾ ಕೇಂದ್ರ ಪಡೆಯುವುದು ನಮ್ಮ ಗುರಿ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಹತ್ತಾರು ಯುವಕ-ಯುವತಿಯರು, ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ತಾಲೂಕು ಕಚೇರಿಯ ಸಭಾಂಗಣದಲ್ಲಿ ರಕ್ತದಾನ ಆಯೋಜಿಸಲಾಗಿತ್ತು.
ಇದಕ್ಕೂ ಮುನ್ನ ಕರ್ನಾಟಕ ಯುವ ಕ್ರಾಂತಿ ಪಡೆ ನೇತೃತ್ವದಲ್ಲಿ ಸಿದ್ಧಲಿಂಗಯ್ಯ ವೃತ್ತದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆ ಮತ್ತು ರಕ್ತದಾನ ಕಾರ್ಯಕ್ರಮಗಳಲ್ಲಿ ಸಂಘಟನೆಯ ಮುಖಂಡರಾದ ಆರ್.ಎನ್.ನಾರಾಯಣ್, ಬಸವರಾಜು, ಶಂಕರ್, ಸತೀಶ್, ಬಾಲರಾಜು, ಚಂದ್ರು, ಮಂಜುನಾಥ್, ಗುರು, ನರೇಂದ್ರ, ವೆಂಕಟೇಶ್, ರಮೇಶ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.