ಸೈನಿಕ ಯೋಗೇಶ್ವರ್ಗೆ ಈಗ ಎಲ್ಲಿಲ್ಲದ ಬೇಡಿಕೆ
ಕ.ಪ್ರ.ವಾರ್ತೆ ಚನ್ನಪಟ್ಟಣ ಫೆ.23
ಪ್ರತಿಷ್ಠಿತ ಕುಟುಂಬಗಳ ರಾಜಕೀಯ ಅಖಾಡವೆನಿಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಹವಣಿಸುತ್ತಿರುವ ರಾಜಕೀಯ ದಿಗ್ಗಜರಿಂದ ಸಮಾಜವಾದಿ ಪಕ್ಷದ ನಾಯಕ, ಶಾಸಕ ಯೋಗೇಶ್ವರ್ಗೆ ಇದೀಗ ಎಲ್ಲಿಲ್ಲದ ಬೇಡಿಕೆ.
ಕಳೆದ ಐದು ವರ್ಷಗಳಲ್ಲಿ 4 ಬಾರಿ ಪಕ್ಷಾಂತರ ಮಾಡುವ ಮೂಲಕ ಕಲರ್ಪುಲ್ ರಾಜಕಾರಣಕ್ಕೆ ಮುನ್ನುಡಿ ಬರೆದ, ವಲಸೆ ಹಕ್ಕಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಎಲ್ಲೂ ಸಲ್ಲದೆ ಅನಿವಾರ್ಯವಾಗಿ ಸಮಾಜವಾದಿ ಪಕ್ಷದ ಬಾಗಿಲು ಬಡಿಯ ಬೇಕಾಗಿತ್ತಾದರೂ ಒಂದು ವರ್ಷದ ಬಳಿಕ ಎಲ್ಲಿಲ್ಲದ ಬೇಡಿಕೆ ಬರಲಾರಂಭಿಸಿದೆ.
ಎಂ.ಪಿ ಅಖಾಡಕ್ಕೆ: ಕಳೆದ ಐದುವರ್ಷಗಳ ಹಿಂದೆಯೇ ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿದು
ಸಂಸತ್ ಪ್ರವೇಶಿಸುವ ಕನಸು ಕಂಡಿದ್ದ ಯೋಗೇಶ್ವರ್ಗೆ ನಿರಾಸೆ ಕಾಯ್ದಿತ್ತು. ರಾಷ್ಟ್ರ ರಾಜಕಾರಣದ ಕನಸ್ಸನ್ನು ಅದುಮಿಟ್ಟುಕೊಂಡೇ ಕಾಯುತ್ತಿರುವ ಯೋಗೇಶ್ವರ್ ಚುನಾವಣಾ ತಯಾರಿ ನಡೆಸುತ್ತಿದ್ದಾರೆ.
ಕಳೆದೊಂದು ವಾರದಿಂದ ತಾಲೂಕಿನಲ್ಲಿ ಎಡೆಬಿಡದೆ ಸುತ್ತಾಡುತ್ತಿರುವ ಯೋಗೇಶ್ವರ್ ಈ ಮೂಲಕ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಜತೆಗೆ, ವಿಪಕ್ಷದವರನ್ನೂ ಒಲೈಸಿಕೊಂಡು ಅಖಾಡಕ್ಕಿಳಿಯಲು ವೇದಿಕೆ ಸಿದ್ಧಪಡಿಸಿ ಕೊಳ್ಳುತ್ತಿದ್ದಾರೆ.
ಯೋಗಿ ಚಿತ್ತ ಎತ್ತ: ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಸೈನಿಕನೊಂದಿಗೆ ಕೈ ಜೋಡಿಸಿ ಲಾಭ ಮಾಡಿಕೊಂಡಿರುವ ಡಿಕೆಎಸ್ ಸಹೋದರರು ಈ ಬಾರಿಯು ಇಂತಹುದೇ ಮೈತ್ರಿ ಮುಂದುವರೆಯಲಿ ಎಂದು ಆಶಿಸುತ್ತಿದ್ದಾರೆ. ಇತ್ತ ಎಐಸಿಸಿ ಧುರೀಣರಾದ ಆಸ್ಕರ್ ಫರ್ನಾಂಡೀಸ್, ದಿಗ್ವಿಜಯ್ ಸಿಂಗ್ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಯೋಗೇಶ್ವರ್ ಜತೆ ಮಾತುಕತೆ ನಡೆಸಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಡಿ.ಕೆ.ಶಿವಕುಮಾರ್ ಯೋಗೇಶ್ವರ್ ನನ್ನ ಗೆಳೆಯ ಎಂದು ಸ್ನೇಹ ಹಸ್ತ ಚಾಚುತ್ತಿದ್ದಾರೆ.
ಆದರೆ ಕಳೆದಬಾರಿ ಮಂತ್ರಿ ಪದವಿ ಬಿಟ್ಟು ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದ ಯೋಗೇಶ್ವರ್ಗೆ ಭರವಸೆ ನೀಡಿದ ಕಾಂಗ್ರೆಸ್ನ ಅತಿರಥ ಮಹಾರಥರು ಬಿ ಪಾರಂ ನೀಡಲಾಗದೆ ಕೈಚೆಲ್ಲಿದ್ದರು. ಇದನ್ನು ಮನಸ್ಸಿನಲ್ಲಿಟ್ಟು ಕೊಂಡಿರುವ ಯೋಗೇಶ್ವರ್ ಕೇಂದ್ರದಲ್ಲಿ ಮೋದಿ ಅಲೆ ತೀವ್ರವಾಗಿರುವ ಸಮಯದಲ್ಲಿ ಕಾಂಗ್ರೆಸ್ಗೆ ಹೋಗುವುದರಿಂದ ಯಾವ ಲಾಭವೂ ಆಗದು. ಇನ್ನು ಡಿ.ಕೆ. ಸುರೇಶ್ ಹೆಸರನ್ನು ಅಖೈರು ಮಾಡಿದ್ದು ಲೋಕಸಭೆಗೆ ಟಿಕೆಟ್ ಸಿಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಅಕ್ಕಿಕಾಯಿ ಕೊಟ್ಟು ಪ್ರಸಾದಕ್ಕೆ ದೇಹಿ ಅನ್ನುವುದೇಕೆ ಎಂಬುದು ಯೋಗೇಶ್ವರ್ ಲೆಕ್ಕಾಚಾರ.
ದೇವೇಗೌಡರ ಖುದ್ದು ಆಹ್ವಾನ: ಜೆಡಿಎಸ್ ವರಿಷ್ಠ ದೇವೇಗೌಡರು ಖುದ್ದು ಆಹ್ವಾನ ನೀಡಿದ್ದು ನಮ್ಮ ಪಕ್ಷದಿಂದಾದರೂ ಸ್ಪರ್ಧಿಸಿ, ಇಲ್ಲ ಎಸ್ಪಿಯಿಂದ ಕಣಕ್ಕಿಳಿದರೆ ನಮ್ಮ ಪಕ್ಷ ಬೆಂಬಲ ನೀಡುತ್ತದೆ ಎಂದು ಆಫರ್ ನೀಡಿದ್ದಾರೆ. ಇತ್ತ ಬಿಜೆಪಿ ಸಹ ಯೋಗೇಶ್ವರ್ಗೆ ಆಹ್ವಾನ ನೀಡಿದ್ದು ಚುನಾವಣೆಯಲ್ಲಿ ನಮ್ಮ ಪಕ್ಷದಿಂದಲೇ ಸ್ಪರ್ಧಿಸಿ ಎಂದಿದೆ. ಯೋಗೇಶ್ವರ್ ಇವೆರಡರಲ್ಲಿ ಯಾವ ಪಕ್ಷ ಆಯ್ಕೆ ಮಾಡಿಕೊಳ್ಳುವುದು ಎಂಬ ಜಿಜ್ಞಾಸೆಯಲ್ಲಿದ್ದಾರೆ.
ದೇವೇಗೌಡರನ್ನು ಇಲ್ಲಿಂದಲ್ಲೇ ಸ್ಪರ್ಧಿಸಿ ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನನ್ನದೆನ್ನುವ ಮೂಲಕ ಯೋಗೇಶ್ವರ್ ಅವರ ಮನಗೆಲ್ಲಲು ಪ್ರಯತ್ನಿಸಿದ್ದು, ಇದರ ಲಾಭ ಪಡೆದು ಕೊಳ್ಳಲು ಅವಿರತ ಶ್ರಮಿಸುತ್ತಿದ್ದಾರೆ. ದೇವೇಗೌಡರು ಸ್ಪರ್ಧಿಸದಿದ್ದರೆ ನನಗಾದರೂ ಬೆಂಬಲಿಸುತ್ತಾರೆ ಎಂಬ ಲೆಕ್ಕಚಾರ ಸೈನಿಕನದ್ದು.
ಮೋದಿ ಮೋಡಿ: ನರೇಂದ್ರ ಮೋದಿ ಮೋಡಿಗೆ ಒಲಿದಿರುವ ಯೋಗೇಶ್ವರ್, ಬೆಂ. ಗ್ರಾಮಾಂತರ ಕ್ಷೇತ್ರಕ್ಕೆ ನಗರಜಿಲ್ಲೆಯ ಮೂರು ಕ್ಷೇತ್ರಗಳು ಸೇರ್ಪಡೆಗೊಳ್ಳಲಿದ್ದು ಇಲ್ಲಿ ಜೆಡಿಎಸ್ ಪ್ರಾಬಲ್ಯ ಕಡಿಮೆ ಇರುವ ಕಾರಣ ಬಿಜೆಪಿಯತ್ತ ಹೋಗುವುದು ಸರಿ ಎಂಬ ಸಲಹೆ ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.
ಸಮಾಜವಾದಿ ಶಾಸಕರಾಗಿರುವ ಯೋಗೇಶ್ವರ್ ಬಿಜೆಪಿಯಿಂದ ಸ್ಪರ್ಧಿಸಲು ಕಾನೂನು ತೊಡಕಿಲ್ಲವಾದರೂ, ನೈತಿಕತೆಯ ಪ್ರಶ್ನೆ ಕಾಡುತ್ತಿದ್ದು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಸಂಸದ ಸ್ಥಾನಕ್ಕೆ ಸ್ಪರ್ಧಿಸುವುದಾ ಇಲ್ಲ ಹಾಗೇ ಸ್ಪರ್ಧಿಸುವುದಾ ಎಂಬ ಜಿಜ್ಞಾಸೆಯಲ್ಲಿ ತೊಡಗಿದ್ದಾರೆ
ಸು.ನಾ.ನಂದಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

