ಮಹಾತ್ಮರನ್ನು ಸ್ಮರಿಸುವುದು ಕರ್ತವ್ಯ
ದೊಡ್ಡಬಳ್ಳಾಪುರ: ಇಲ್ಲಿನ ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆಯ ವಿವಿಧ ಘಟಕಗಳ ಆಶ್ರಯದಲ್ಲಿ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾಲೇಜು ಆವರಣದಲ್ಲಿರುವ ಕೊಂಗಾಡಿಯಪ್ಪ ಪುತ್ಥಳಿ ಮುಂದೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಬಿ.ಎನ್. ತಿಮ್ಮಣ್ಣ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮರನ್ನು ನಾವು ಸ್ಮರಿಸುವಂತೆ ದೊಡ್ಡಬಳ್ಳಾಪುರ ನಗರದ ಅಭಿವೃದ್ಧಿಗೆ ಶ್ರಮಿಸಿದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಪ್ರತಿ ಹಂತದಲ್ಲೂ ಸ್ವಾರ್ಥ ಮನೋಭಾವ ತೊರೆಡು ಸಾಮಾಜಿಕ ಮತ್ತು ನಿಸ್ವಾರ್ಥ ಚಿಂತನೆಗಳನ್ನು ರೂಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮೇಜರ್ ಎಸ್.ಮಹಾಬಲೇಶ್ವರ್ ಮಾತನಾಡಿ, ಕೊಂಗಾಡಿಯಪ್ಪ ಅವರ ಬದುಕಿನ ಅನೇಕ ವಿಚಾರಗಳ ಕುರಿತು ಗಮನ ಸೆಳೆದರು. ಪ್ರಾಥಮಿಕ ಶಾಲಾ ಮಾಸ್ತರರಾಗಿ ವೃತ್ತಿ ಬದುಕನ್ನು ಆರಂಭಿಸಿದ ಕೊಂಗಾಡಿಯಪ್ಪ ಇಡೀ ಊರಿಗೆ ಮಾದರಿ ವ್ಯಕ್ತಿತ್ವವಾಗಿ ಬೆಳೆದರು. ಬಡವರ ಶಿಕ್ಷಣಕ್ಕೆ ಒತ್ತು ನೀಡಿ, ಅನ್ನದಾನಿಯಾಗಿ ಶಿಕ್ಷಣ ದಾನಿಯಾಗಿ ಗುರುತಿಸಿಕೊಂಡರು. ಪರಿಸರಪ್ರೇಮಿಯಾಗಿ, ದಲಿತ-ಹರಿಜನೋದ್ಧಾರದ ಅನೇಕ ಕೆಲಸಗಳನ್ನು ಮಾಡಿದರು. ಕೈಗಾರಿಕೋದ್ಯಮದ ಬೆಳವಣಿಗೆಯಿಂದ ಜನರಿಗೆ ಉದ್ಯೋಗ ದೊರೆಯುತ್ತದೆ ಎಂಬ ಭಾವನೆಯಲ್ಲಿ ವಿದ್ಯುತ್ ಮಗ್ಗಗಳನ್ನು ಪ್ರಚುರಪಡಿಸಿ ಊರಿಗೆ ರೈಲು ಮತ್ತು ವಿದ್ಯುತ್ ಸೇವೆಯನ್ನು ತಂದಿತ್ತ ಕೀರ್ತಿಗೆ ಪಾತ್ರರಾದರು. ಇಂತಹ ಆದರ್ಶ ವ್ಯಕ್ತಿಗಳು ಇಂದಿನವರಿಗೆ ಆದರ್ಶವಾಗಿ ನಿಲ್ಲಬೇಕು ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ವೇದಿಕೆ ಅಧ್ಯಕ್ಷೆ ಎಸ್.ರಾಜಲಕ್ಷ್ಮೀ ಮಾತನಾಡಿ, ಮೈಸೂರು ಮಹಾರಾಜರಿಂದ ಸಾಮಾಜಿಕ ಸೇವೆಗಾಗಿ ವಿಶೇಷ ಪುರಸ್ಕಾರ ಪಡೆದ ಕೊಂಗಾಡಿಯಪ್ಪ ಲೋಕಸೇವಾನಿರತರಾಗಿ ಬಿರುದಾಂಕಿತರಾದರು. ಊರಿನ ಸಮಗ್ರ ಹಿತಾಸಕ್ತಿಯನ್ನು ಮುಖ್ಯವಾಗಿಟ್ಟುಕೊಂಡು ನಿರಂತರ ಪರಿಶ್ರಮ ವಹಿಸಿ ದುಡಿದ ವ್ಯಕ್ತಿತ್ವ ಅವರದು. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಿರಿಯ ವಿದ್ಯಾರ್ಥಿಗಳ ವೇದಿಕೆಯಿಂದ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ಖಜಾಂಚಿ ಡಿ.ಪ್ರಭುದೇವಯ್ಯ, ನಿರ್ದೇಶಕರಾದ ವಿ.ತಿಮ್ಮಶೆಟ್ಟಪ್ಪ, ಎ.ಆರ್.ರಾಜಶೇಖರ್, ಕೊಂಗಾಡಿಯಪ್ಪ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ.ಮಹದೇವ್, ನಿವೃತ್ತ ಉಪನ್ಯಾಸಕ ಎ.ಓ.ಆವಲಮೂರ್ತಿ, ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು ಸೇರಿದಂತೆ ವಿವಿಧ ಸಂಸ್ಥೆಗಳ ಸಿಬ್ಬಂದಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

