ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರದಲ್ಲಿ ಕೇಸರಿ ಕಮಾಲ್...

Published On :

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಬುಧವಾರ ಅಕ್ಷರಶಃ ಕೇಸರಿ ಕಮಾಲ್ ನಡೆದಿತ್ತು. ಎಲ್ಲಿ ನೋಡಿದರೂ ಬಿಜೆಪಿ ಕಾರ್ಯಕರ್ತರು ಬಾವುಟ ಹಿಡಿದು, ಟೋಪಿ ಹಾಕಿಕೊಂಡು ನರೇಂದ್ರ ಮೋದಿಗೆ ಜೈಕಾರ ಹಾಕುತ್ತಾ ಸಾಗುತ್ತಿದ್ದ ದೃಶ್ಯ ಕಂಡು ಬಂತು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಇಲ್ಲಿನ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಏರ್ಪಾಟಾಗಿತ್ತು. ಸಮಾವೇಶದಲ್ಲಿ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಯಲಹಂಕ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರಗಳ 20 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಆದರೆ ವೇದಿಕೆಯ ಮುಂಭಾಗದಲ್ಲಿ ಶಾಮಿಯಾನ ಹಾಕದಿದ್ದ ಕಾರಣ ನೆರೆದಿದ್ದ ಸಾವಿರಾರು ಜನ ಉರಿಬಿಸಿಲಲ್ಲೇ ಆಯೋಜಕರಿಗೆ ಹಿಡಿಶಾಪ ಹಾಕುತ್ತಾ ಗಂಟೆಗಟ್ಟಲೆ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿತ್ತು.
ಬೆಳಗ್ಗೆ 10 ಗಂಟೆಯಿಂದಲೇ ಸಮಾವೇಶಕ್ಕೆ ಜನಸಾಗರ ಹರಿದು ಬರತೊಡಗಿತ್ತು. ನೆರೆಯ ತಾಲೂಕುಗಳಿಂದ ಬಂದಿದ್ದ ಜನರ ವಾಹನಗಳನ್ನು 2 ಕಿ.ಮೀ ದೂರದಲ್ಲೇ ನಿಲ್ಲಿಸುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಜನ ನಡೆದುಕೊಂಡೇ ಕ್ರೀಡಾಂಗಣದತ್ತ ಬಂದರು. ನೆರಳಿನ ಆಶ್ರಯ ಇಲ್ಲದೆ ಬಿಸಿಲಲ್ಲಿ ಬೆಂದು ಬಸವಳಿದರು. ಬರೋಬ್ಬರಿ 3 ಗಂಟೆಗಳ ಕಾಲ ಕಾರ್ಯಕ್ರಮ ನಡೆಯಿತು. ಸ್ಥಳೀಯ ಮುಖಂಡರಿಂದ ಹಿಡಿದು ರಾಜ್ಯ ಮತ್ತು ರಾಷ್ಟ್ರ ನಾಯಕರ ಎಲ್ಲ ಭಾಷಣಗಳನ್ನೂ ಕೇಳಬೇಕಾಯ್ತು. ಕೊನೆಯದಾಗಿ ಯಡಿಯೂರಪ್ಪ ಮತ್ತು ರಾಜನಾಥಸಿಂಗ್ ಮಾತನಾಡುವುದನ್ನೇ ಕಾಯುತ್ತಿದ್ದ ಜನ ಭಾಷಣ ಮುಗಿಯುತ್ತಿದ್ದಂತೆ ಕ್ರೀಡಾಂಗಣದಿಂದ ತಾ ಮುಂದು ನಾ ಮುಂದು ಎಂಬಂತೆ ಹೊರ ನಡೆದು ಮರಗಳನ್ನು ಆಶ್ರಯಿಸಿ ದಣಿವಾರಿಸಿಕೊಂಡರು.
ಊರಿನೆಲ್ಲೆಡೆ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಹಾಕಿ ಗಮನ ಸೆಳೆದಿದ್ದ ಆಯೋಜಕರು ಬರುವ ಕಾರ್ಯಕರ್ತರಿಗೆ ನೆರಳು ನೀಡುವ ವ್ಯವಸ್ಥೆ ಮಾಡದೇ ಹೋದದ್ದು ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಯಿತು. ಸ್ವತಃ ವೇದಿಕೆಯಲ್ಲಿ ಮಾತನಾಡಿದ ಹಲವು ನಾಯಕರೂ ಕೂಡ ಶಾಮಿಯಾನ ವ್ಯವಸ್ಥೆ ಮಾಡಲಾಗದೇ ಹೋದದ್ದಕ್ಕೆ ಬಹಿರಂಗ ವಿಷಾದ ವ್ಯಕ್ತಪಡಿಸಿದ್ದು ಕಾರ್ಯಕರ್ತರ ಕೋಪ ತಣಿಯಲು ಕಾರಣವಾಯಿತು. ಎಲ್ಲೆಡೆಯಿಂದ ಬಂದಿದ್ದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರಿಗೆ ತಿಂಡಿ ಮತ್ತು ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಲಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.