ಕೃಷಿಯತ್ತ ಯುವಶಕ್ತಿ ಚಿತ್ತ ಹರಿಸಲಿ
ರಾಮನಗರ: ಗ್ರಾಮೀಣ ಭಾಗದ ಯುವಜನರು ಆಧುನಿಕ ಜೀವನ ಶೈಲಿಗೆ ಮಾರು ಹೋಗಿ, ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ ದೇಶದಲ್ಲಿ ಆಹಾರದ ಕೊರತೆ ಎದುರಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಹ್ಲಾದಗೌಡ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದಿಂದ ನಗರದ ಗುರುಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೃತ್ತಿ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ಕೃಷಿಯತ್ತ ಒಲವು ಬೆಳೆಸಿಕೊಳ್ಳುವಂತಹ ವಾತಾವರಣ ನಿರ್ಮಿಸಬೇಕು ಎಂದರು.
ಜಾಗತೀಕರಣ, ಕೈಗಾರೀಕರಣ ಹಾಗೂ ಶರವೇಗದಲ್ಲಿ ಬೆಳೆಯುತ್ತಿರುವ ನಗರೀಕರಣದಿಂದ ಕೃಷಿ ಜಮೀನಿನ ಪ್ರಮಾಣ ದಿನೇ ದಿನೇ ಇಳಿಮುಖವಾಗುತ್ತಿದೆ. ಮುಂದೊಂದು ದಿನ ದೇಶದಲ್ಲಿ ಆಹಾರದ ಕೊರತೆ ಎದುರಾಗಿ, ಫಿಜ್ಜಾ ಬರ್ಗರ್ ನಂತಹ ಆಹಾರಗಳಿಗೆ ಹೆಚ್ಚು ಅವಲಂಬಿತರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಮಾರ್ಗದರ್ಶನಕ್ಕೆ ಕರೆ: ಮಾದರಿ ಶಾಲೆಗಳ ನಿರ್ಮಾಣಕ್ಕೆ ವೃತ್ತಿ ಶಿಕ್ಷಣ ಶಿಕ್ಷಕರ ಕೊಡಗೆ ಪ್ರಮುಖವಾದುದು. ವೃತ್ತಿ ಶಿಕ್ಷಣದಲ್ಲಿ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ತೋರಿಸಲು ಉತ್ತಮ ಅವಕಾಶವಿದೆ. ಶಿಕ್ಷಕರು ಇಂಥಹವರನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಪ್ರಹ್ಲಾದಗೌಡ ಕರೆ ನೀಡಿದರು.
ಸ್ವಾವಲಂಬಿ ಬದುಕು ಕಲಿಸಿ: ಶಾಲಾ ಕಾಲೇಜುಗಳಲ್ಲಿ ಇರುವ ಮೈದಾನವನ್ನೇ ಉತ್ತಮ ಕೈತೋಟವನ್ನಾಗಿ ರೂಪಿಸಬೇಕು. ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ಬೆಳೆಸಿ, ಕೃಷಿಯ ಅನುಭವ ನೀಡಬೇಕು. ಇದರೊಂದಿಗೆ ಪಕ್ಷಿ ಸಂಕುಲಕ್ಕೆ ಆಹಾರ ಒದಗಿಸುವ ಕೆಲಸ ಮಾಡಿದಂತೆಯೂ ಆಗುತ್ತದೆ. ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಬದುಕನ್ನು ಕಲಿಸಿದಂತಾಗಲಿದೆ ಎಂದರು.
ಕೌಶಲ್ಯ ಹೆಚ್ಚಿಸಿಕೊಳ್ಳಿ: ವೃತ್ತಿ ಶಿಕ್ಷಣ ಶಿಕ್ಷಕರು ಬದಲಾದ ಕಾಲಮಾನಕ್ಕೆ ತಕ್ಕಂತೆ ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು. 2014-15ನೇ ಶೈಕ್ಷಣಿಕ ವರ್ಷದಿಂದ ವೃತ್ತಿ ಶಿಕ್ಷಣ ಪಠ್ಯಪುಸ್ತಕ ಬರಲಿದ್ದು, ಇದು ವೃತ್ತಿ ಶಿಕ್ಷಣದ ಪರಿಣಾಮಕಾರಿ ಬೋಧನೆಗೆ ಅನುಕೂಲವಾಗಲಿದೆ. ಅಂತೆಯೇ ವೃತ್ತಿ ಶಿಕ್ಷಣಕ್ಕೂ ಮಹತ್ವ ಬರಲಿದೆ ಎಂದು ಉಪನ್ಯಾಸಕ ಶಶಿಧರ್ ಅಭಿಪ್ರಾಯಪಟ್ಟರು.
ಬದುಕು ಕಟ್ಟಿಕೊಡಲಿದೆ: ವಿದ್ಯಾರ್ಥಿಗಳ ಕಲಿಕೆಯಲ್ಲಿ ಉಂಟಾಗುವ ಬೇಸರವನ್ನು ಹೋಗಲಾಡಿಸಲು ವೃತ್ತಿ ಶಿಕ್ಷಣ ಉತ್ತಮವಾದುದು. ಮಧ್ಯದಲ್ಲಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿದ ವಿದ್ಯಾರ್ಥಿಗಳ ಪಾಲಿಗೆ ವೃತ್ತಿ ಶಿಕ್ಷಣದಿಂದ ಕಲಿತ ಪಾಠವೇ ಬದುಕು ಕಟ್ಟಿಕೊಡಲಿದೆ ಎಂದು ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ನರಸಿಂಹರೆಡ್ಡಿ ಹೇಳಿದರು.
ಡಯಟ್ ಪ್ರಾಂಶುಪಾಲೆ ಇಂದ್ರಾಣಿ, ಹಿರಿಯ ಉಪನ್ಯಾಸಕ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಸಿ.ಪಿ.ಶ್ರೀನಿವಾಸ್, ಜಯರಾಮು, ಎಂ.ಆರ್.ಮುನಿಯಪ್ಪ, ಸಿದ್ದರಾಜು, ಬೀಮನಾಯಕ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ಸುಮ, ಶಿಕ್ಷಕರಾದ ಮಣಿಯಮ್ಮ, ಶಾಂತಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

