ಆನೇಕಲ್ಗೆ ಕಾವೇರಿ ನೀರು: ಬಿ.ಶಿವಣ್ಣ
ಕ.ಪ್ರ.ವಾರ್ತೆ ಆನೇಕಲ್ಲು ಜ.3
ಆನೇಕಲ್ ಪಟ್ಟಣ, ಸೂರ್ಯನಗರದ ವಿವಿಧ ಹಂತಗಳಿಗೆ ಕಾವೇರಿ ನೀರನ್ನು ಹರಿಸುವ ಸಂಬಂಧ ಮುಖ್ಯ ಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆದು 15 ಎಂಎಲ್ಡಿ ನೀರನ್ನು ಶೀಘ್ರ ಪೂರೈಸುವ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಶಾಸಕ ಬಿ. ಶಿವಣ್ಣ ತಿಳಿಸಿದ್ದಾರೆ.
ಅವರು ಆನೇಕಲ್ಲಿನ ತಾಲೂಕು ಪಂಚಾಯ್ತಿ ಸಭೆಯಲ್ಲಿ ಪುರಸಭಾ ಸದಸ್ಯರು ಹಾಗೂ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ ತಾವು ಅಧಿಕಾರ ವಹಿಸಕೊಂಡ ಲಾಗಾಯ್ತು ಆನೇಕಲ್ ಮೀಸಲು ಕ್ಷೇತ್ರದ ಶಾಶ್ವತ ಕುಡಿವ ನೀರು ಯೋಜನೆ ಹಾಗೂ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿಗೆ ವಿಶೇಷ ನಿಧಿ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ಬೇಡಿಕೆ ಇಟ್ಟಿದ್ದೆ.
ಅಂದಾಜು ರು. 20 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು ತಾಲೂಕಿನ ಜನತೆ ಪರವಾಗಿ ಸಿ.ಎಂ. ಸಿದ್ದರಾಮಯ್ಯ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕುಡಿಯುವ ನೀರು, ರಾಜ್ಯ ಹೆದ್ದಾರಿ ರಸ್ತೆ, ಬಿದರಗುಪ್ಪೆ ಕೆರೆ ಏರಿ ನಿರ್ಮಾಣ ಕಾಮಗಾರಿಗಳಿಗೆ ರು. 20 ಕೋಟಿ ಬಿಡುಗಡೆಯಾಗಿದ್ದು 15 ದಿನದಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ತಾತಗುಣಿ ಎಸ್ಟೇಟ್ನಿಂದ ಕಾವೇರಿ ನೀರು: ಬೆಂಗಳೂರಿನ ತಾತಗುಣಿ ಎಸ್ಟೇಟ್ ಬಳಿಯಿಂದ ನೀರಿನ ಕೊಳವೆ (ಪೈಪ್) ಮೂಲಕ ಸುಮಾರು 30 ಕಿ.ಮೀ ದೂರದ ಬನ್ನೇರುಘಟ್ಟ, ಜಿಗಣಿ ಕೈಗಾರಿಕಾ ಪ್ರದೇಶ ಹಾಗೂ ಸೂರ್ಯನಗರ 3ನೇ ಹಂತ ಹಾಗೂ ಆನೇಕಲ್ ಪಟ್ಟಣಕ್ಕೆ 15 ಎಂಎಲ್ಡಿ ನೀರು ಪೂರೈಸಲಾಗುವುದು.
ಕಾಲಾವಧಿ 6 ತಿಂಗಳು: ಬೆಳೆಯುತ್ತಿರುವ ನಗರ ಪ್ರದೇಶದ ಜನ ಸಾಂದ್ರತೆ ಕಡಿಮೆ ಮಾಡಲು ಹೊರವಲಯದ ಪಟ್ಟಣ ಪ್ರದೇಶಗಳ ಅಭಿವೃದ್ಧಿ ಅನಿವಾರ್ಯವಾಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಯೋಜನೆ ಸೂರ್ಯ ನಗರ ಬಡಾವಣೆಗಳು ಹಾಗೂ ಆನೇಕಲ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗಾಗಿ
ಸಿದ್ಧಪಡಿಸಿರುವ ಯೋಜನೆಯಲ್ಲಿ ಒಟ್ಟು 30 ಎಂಎಲ್ಡಿ ನೀರು ಹರಿಯಲಿದೆ. 15 ದಿನದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 6 ತಿಂಗಳ ಒಳಗಾಗಿ ಜನತೆಗೆ ನೀರು ಸಮರ್ಪಿಸಬೇಕೆಂದು ಮುಖ್ಯಮಂತ್ರಿ ಅವರು ಜಲ ಮಂಡಳಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದ್ದಾರೆ ಎಂದರು.
ಇಗ್ಗಲೂರು-ಗುಮ್ಮಳಾಪುರ ರಸ್ತೆ: ತಾಲೂಕಿನ ಇಗ್ಗಲೂರು ಹಾಗೂ ತಮಿಳು ನಾಡಿನ ಗುಮ್ಮಳಾಪುರ ರಾಜ್ಯ ಹೆದ್ದಾರಿ ಯೋಜನೆ ಕಾಮಗಾರಿಗೆ ಮರು ಚಾಲನೆ ದೊರೆತಿದೆ. ಚಂದಾಪುರ ರಸ್ತೆಯ 24ನೇ ಕಿ.ಮೀ. ನಿಂದ ಪ್ರಾರಂಭಗೊಂಡು 10 ಕಿ.ಮೀ. ಉದ್ದದ ಶ್ರೇಷ್ಠ ದರ್ಜೆ ರಸ್ತೆ ಕಾಮಗಾರಿಗೆ ರು. 15 ಕೋಟಿ ಮೀಸಲಿದ್ದು ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು.
ಬಿದರಗುಪ್ಪೆ ಕೆರೆ ಬ್ರಿಡ್ಜ್: ತಾಲೂಕಿನ ಅತ್ತಿಬೆಲೆಯಿಂದ ಬಿದರಗುಪ್ಪೆ ರಸ್ತೆ ಕೆರೆ ತಿರುವಿನಿಂದ ಕೂಡಿದ್ದು ಹತ್ತಾರು ಅಪಘಾತಗಳು ನಡೆದಿದ್ದವು. ಶಾಶ್ವತ ಪರಿಹಾರ ನಿಟ್ಟಿನಲ್ಲಿ ರು. 3 ಕೋಟಿ ವೆಚ್ಚದಲ್ಲಿ ಎರಡು ಪ್ರತ್ಯೇಕ ಬ್ರಿಡ್ಜ್ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಹಂತದಲ್ಲಿ ಕಾಮಗಾರಿಗೆ ಸಂಕ್ರಾಂತಿಯಂದ ಚಾಲನೆ ನೀಡಲಾಗುವುದು ಎಂದರು.
ಆನೇಕಲ್ ಪಟ್ಟಣ ರಸ್ತೆ: ಆನೇಕಲ್ ಪಟ್ಟಣಕ್ಕೆ ಸೀಮಿತಗೊಂಡಂತೆ ದೇವರಕೊಂಡಪ್ಪ ರಸ್ತೆಯಿಂದ ಅತ್ತಿಬೆಲೆ ರಸ್ತೆಯನ್ನು ಜೋಡಿ ರಸ್ತೆಯಾಗಿ ಪರಿವರ್ತಿಸಿ ರಸ್ತೆ ವಿಭಜಕ ನಿರ್ಮಿಸಿ ನಡುವಿನಲ್ಲಿ ವಿದ್ಯುತ್ ಕಂಬಗಳ ಅಳವಡಿಕೆಗೆ ರು. 50 ಲಕ್ಷ ಬಿಡುಗಡೆಯಾಗಿದೆ.
ಆನೇಕಲ್ಲಿನ ಶ್ರೀ ರಾಮ ದೇವಾಲಯದಿಂದ ಗುಡ್ಡನಹಳ್ಳಿ ರಸ್ತೆ ಮಾರ್ಗ ಪುರಸಭಾ ವ್ಯಾಪ್ತಿಯಲ್ಲಿ ಜೋಡಿ ರಸ್ತೆ ನಿರ್ಮಾಣ, ರಸ್ತೆ ವಿಭಜಕ ನಿರ್ಮಿಸಿ ವಿದ್ಯುತ್ ಕಂಬಗಳ ಅಳವಡಿಕೆಗೆ ರು. 50 ಲಕ್ಷ ಬಿಡುಗಡೆಯಾಗಿದೆ.
ದೇವರಕೊಂಡಪ್ಪ ವೃತ್ತದಿಂದ ಬನ್ನೇರುಘಟ್ಟ ರಸ್ತೆ ಪುರಸಭಾ ವ್ಯಾಪ್ತಿಯಲ್ಲಿ ಜೋಡಿ ರಸ್ತೆ ನಿರ್ಮಾಣ, ರಸ್ತೆ ವಿಭಜಕ ಹಾಗೂ ವಿದ್ಯುತ ಕಂಭಗಳ ಅಳಡವಡಿಕೆಗೆ ರು. 50 ಲಕ್ಷ ಬಿಡುಗಡೆಯಾಗಿದ್ದು ಒಟ್ಟಾರೆ ರು. 20 ಕೋಟಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಆನೇಕಲ್ ತಾಲೂಕಿನ ಜನತೆಗೆ ಹೊಸವರ್ಷದ ಕೊಡುಗೆಯಾಗಿ ಇನ್ನಷ್ಟು ಕಾಮಗಾರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

