'ಕಳಂಕಿತರನ್ನು ಸಂಪುಟದಿಂದ ಕೈಬಿಡಿ'
ಆನೇಕಲ್ಲು: ಹಲವು ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಡಿ. ಕೆ. ಶಿವಕುಮಾರ್ ಹಾಗೂ ರೋಷನ್ ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಅಸಲೀ ತನವನ್ನು ಪ್ರದರ್ಶಿಸುತ್ತಿದೆ. ರಾಜ್ಯ ಸರ್ಕಾರವೂ ಕೇಂದ್ರಕ್ಕಿಂತ ಭಿನ್ನವಲ್ಲ ಎಂಬ ಸಂದೇಶವನ್ನು ಸಾರುವ ಮೂಲಕ ರಾಜ್ಯದಲ್ಲೂ ಭ್ರಷ್ಟಾಚಾರ ಪೋಷಣೆಗೆ ಕುಮ್ಮಕ್ಕು ನೀಡುವುದನ್ನು ಬಿಜೆಪಿ ಪ್ರತಿಭಟಿಸುತ್ತದೆ ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಅವರು ಆನೇಕಲ್ ತಾಲೂಕು ಬಿಜೆಪಿ ಘಟಕದ ಸದಸ್ಯರು ಏರ್ಪಡಿಸಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಮಾತನಾಡಿ ರಾಜ್ಯ ಸರ್ಕಾರ ಯಾವ ದಿಕ್ಕಿನತ್ತ ಹೋಗುತ್ತಿದೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ. ಕಳಂಕಿತರನ್ನು ಸಂಪುಟಕ್ಕೆ ಸೇರಿಸುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದರು.
ರೈತರ ಒಕ್ಕಲೆಬ್ಬಿಸುವುದು ಬೇಡ: ತಾಲೂಕಿನ ತಮ್ಮನಾಯಕನಹಳ್ಳಿಯ ಗೋಮಾಳ ಜಮೀನಿನಲ್ಲಿ ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಬಂದಿರುವ ಬಡ ರೈತರನ್ನು ಒಕ್ಕಲೆಬ್ಬಿಸುವ ಕಾಯಕವನ್ನು ಕೂಡಲೇ ಕೈ ಬಿಡಬೇಕೆಂದು ಮಾಜಿ ಸಚಿವರು ಆಗ್ರಹಿಸಿದ್ದಾರೆ. ಅರಣ್ಯ ಅಭಿವೃದ್ಧಿ ನೆಪದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನು ಮತ್ತು ಚೂಡಹಳ್ಳಿ ರೈತರನ್ನು ತೆರವು ಮಾಡಿಸುವುದು ಸರಿಯಲ್ಲ. ಪರ್ಯಾಯ ವ್ಯವಸ್ಥೆ ಮಾಡುವ ಇಚ್ಛಾಶಕ್ತಿ ಇದ್ದಲ್ಲಿ ಪ್ರತಿಭಟನೆಗಳು ಇರುವುದಿಲ್ಲ ಎಂದರು.
ಬಗರ್ ಹುಕುಂ ಸಾಗುವಳಿ ಹಾಗೂ ಅಕ್ರಮ ಸಕ್ರಮ ಅಡಿಯಲ್ಲಿ 698 ಅರ್ಜಿಗಳು ಅಧಿಕೃತ ಸಮಿತಿಯಿಂದ ಮನ್ನಣೆಪಡೆದಿದ್ದು ಇದುವರೆವಿಗೂ ಸಾಗುವಳಿ ಚೀಟಿಗಳನ್ನು ನೀಡಿರುವುದಿಲ್ಲ. ಸರ್ಕಾರಕ್ಕೆ ರೈತ ಪರ ಕಾಳಜಿ ಇದ್ದಲ್ಲಿ ಈ ಕೂಡಲೇ ಕ್ರಮ ವಹಿಸಬೇಕೆಂದು ಜಿಪಂ ಸದಸ್ಯ ನಾರಾಯಣಪ್ಪ ಮತ್ತು ಮುಖಂಡ ಜಯಣ್ಣ ಕಿಡಿ ಕಾರಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ಅವರು ಮನವಿ ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ರವಾನಿಸುವುದಾಗಿ ತಿಳಿಸಿದರು. ರಾಜ್ಯ ಉಪಾಧ್ಯಕ್ಷ ಕೆ.ವಿ. ಶಿವಪ್ಪ, ತಾಲೂಕು ಅಧ್ಯಕ್ಷ ಬಿ.ಜಿ. ಆಂಜಿನಪ್ಪ, ಟೌನ್ ಅಧ್ಯಕ್ಷ ಶಿವರಾಂ, ಅತ್ತಿಬೆಲೆ ಬಸವರಾಜು, ರಾಮಕೃಷ್ಮ, ಪುರಸಭಾ ಸದಸ್ಯರಾದ ನರಸಿಂಹರೆಡ್ಡಿ, ರಾಜರತ್ನಂ, ಶಂಕರ್, ತೇಜಸ್ವಿನಿ ನಟರಾಜ್, ರಾಧಾಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

