ಶಾಂತಕುಮಾರ್ ಸಾವು ತಾಲೂಕನ್ನು ಅನಾಥಗೊಳಿಸಿದೆ
ಚನ್ನಪಟ್ಟಣ: ಪತ್ರಕರ್ತರಾಗಿ, ಗಾಯಕರಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರಾಗಿ, ವೃತ್ತಿಶಿಕ್ಷಣ ಶಿಕ್ಷರಾಗಿ ತಾಲೂಕಿನಲ್ಲಿ ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಶಾಂತಕುಮಾರ್ ಸಾವು ಈ ತಾಲೂಕನ್ನು ಅನಾಥ ಗೊಳಿಸಿದೆ ಎಂದು ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಕಂಬನಿ ಮಿಡಿದರು.
ಕೇವಲ ಪತ್ರಕರ್ತನಾಗಿ ಉಳಿದು ಕೊಳ್ಳದೆ ರೈತಪರ ಹೋರಾಟಕ್ಕೆ ದ್ವನಿಯಾಗಿದ್ದ ಇವರು ನಮ್ಮ ಚಳುವಳಿಗಳಲ್ಲಿ ರೈತಪರ ಚಳುವಳಿಗಾರನಾಗಿ ತೊಡಗಿಸಿ ಕೊಳ್ಳುತ್ತಿದ್ದರು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ ಕಂಬನಿ ಮಿಡಿದರು.
ಕಸಾಪ ತಾಲೂಕು ಅಧ್ಯಕ್ಷ ಶಿವಮಾದು ಮಾತನಾಡಿ ಸಾಹಿತ್ಯ ಕ್ಷೇತ್ರಕ್ಕೆ ಶಾಂತಕುಮಾರ್ ಕೊಡುಗೆ ಅಪಾರವಾದುದು ಎಂದರು. ಅಹಮಿಕೆಗೆ ಒಳಗಾಗದೆ ಎಲ್ಲರೂ ನಮ್ಮವರು ಎಂಬ ಭಾವನೆಯನ್ನು ಹೊಂದಿದ್ದ ಶಾಂತಕುಮಾರ್ ಸಾವು ಆಘಾತ ತಂದಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಧರಣೀಶ್ ರಾಂಪುರ ತಿಳಿಸಿದರು.
ಪತ್ರಿಕೆ, ಉದ್ಯೋಗ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಆಸಕ್ತಿಯನ್ನು ಇವರು ತಮ್ಮ ಆರೋಗ್ಯದತ್ತ ನೀಡಿದ್ದರೆ ಇಂತಹ ಸಾವು ಸಂಭವಿಸುತ್ತಿರಲಿಲ್ಲ ಎಂದು ಭೂಹಳ್ಳಿ ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.
ಕವಿತಾರಾವ್ ಮಾತನಾಡಿ, ಎಲ್ಲಾ ಸದಭಿರುಚಿಯ ಕಾರ್ಯಕ್ರಮಗಳಿಗೆ ಮುಂದೆ ನಿಂತು ಪ್ರೋತ್ಸಾಹ ನೀಡುತ್ತಿದ್ದ ಶಾಂತಕುಮಾರ್ ಸಾವು ನೋವುಂಡು ಮಾಡಿದೆ ಎಂದರು.
ತುಂಬಲಾಗದ ನಷ್ಟ
ಮಾಗಡಿ: ಸರಳ ಸಜ್ಜಿನಿಕೆಯ ಸ್ನೇಹಜೀವಿ ಪತ್ರಕರ್ತ ಹಾಗೂ ಜನಪದ ಕಲಾವಿದ ಶಾಂತಕುಮಾರ್ ಅವರ ನಿಧನದಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಶಿಕ್ಷಕ ದೊಡ್ಡಬಾಣಗೆರೆ ಮಾರಣ್ಣ ಗುಣಗಾನ ಮಾಡಿದರು.
ಅವರು ಪಟ್ಟಣದಲ್ಲಿ ಪರ್ತಕರ್ತರು ಏರ್ಪಡಿಸಿದ್ದ ದಿ. ಶಾಂತಕುಮಾರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಂತಕುಮಾರ್ ಅವರು ಕಳೆದ 20 ವರ್ಷಗಳಿಂದ ಪತ್ರಿಕಾ ರಂಗ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಸೇವೆ ಸಲ್ಲಿಸಿದ ಬಹುಮುಖ ವ್ಯಕ್ತಿವವುಳ್ಳವರಾಗಿದ್ದರು. ಜತೆಗೆ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದರು ಎಂದರು.
ಶಾಂತಕುಮಾರ್ ಅವರ ಅಗಲಿಕೆ ಪತ್ರಕರ್ತರಲ್ಲಿ ತುಂಬ ನೋವುಂಟು ಮಾಡಿದೆ ಎಂದು ಹಿರಿಯ ಪತ್ರಕರ್ತ ಐಕ್ಯತೆ ಜಯರಾಂ ತಿಳಿಸಿದರು. ಇದೇ ವೇಳೆ ಶಾಂತಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಗಂ.ದಯಾನಂದ್, ಟಿ.ಎಂ. ಶ್ರೀನಿವಾಸ್, ಸಿದ್ದಲಿಂಗಪ್ಪ, ದೇವರಾಜು, ಸುದೀಂದ್ರ, ಎಂ.ಎಸ್. ಸಿದ್ದಲಿಂಗೇಶ್ವರ್, ದೀಪು, ರಂಗಸ್ವಾಮಿ, ಲೋಕೇಶ್, ಅಶ್ರಫ್, ಚಿದಾನಂದ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

