ಬೆಂಗಳೂರು ಗ್ರಾಮಾಂತರ

ಶಾಸಕರೇ, ವಾರ್ಡ್ ಸಭೆಗಳ ಸಾರ್ಥಕ್ಯವೇನು...?

Published On :

ಕ.ಪ್ರ.ವಾರ್ತೆ ,  ದೊಡ್ಡಬಳ್ಳಾಪುರ ,  ಜ. 7
ನಗರಸಭೆ ಚುನಾವಣೆಯಾಗಿ ಬರೋಬ್ಬರಿ 9 ತಿಂಗಳು ಕಳೆಯುತ್ತಿದೆ. ತರಾತುರಿಯಲ್ಲಿ ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳಿಗೆ ಇನ್ನೂ ಕೆಲಸವಿಲ್ಲದೆ ಮೌಲಿಕ ಸಮಯ ವ್ಯಯವಾಗುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರಸಭಾ ಸದಸ್ಯರು ಹೆಸರಿಗೆ ಮಾತ್ರ ಸದಸ್ಯರಾಗಿದ್ದು, ಇನ್ನೂ ಪ್ರಮಾಣವಚನವೇ ಸ್ವೀಕರಿಸಿಲ್ಲ. ಹೀಗಿರುವಾಗ ಇನ್ನು ಜನರ ಸಮಸ್ಯೆ ಕೇಳೋರ್ಯಾರು ಎಂಬ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳಿಗೆ ಕಳೆದ ಮಾರ್ಚ್ ತಿಂಗಳಲ್ಲಿ ಚುನಾವಣೆ ನಡೆಸಿತ್ತು. ನಂತರ ಬಂದ ವಿಧಾನಸಭಾ ಚುನಾವಣೆಯ ಪರಿಣಾಮ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟಣೆ ವಿಳಂಬವಾಗಿತ್ತು. ನಂತರ ಪ್ರಕಟಗೊಂಡ ಮೀಸಲಾತಿ ಈಗ ಕೋರ್ಟ್ ಮೆಟ್ಟಿಲೇರಿ 5 ತಿಂಗಳಾಗಿದೆ. ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಇಂದು-ನಾಳೆ ಎಂಬಷ್ಟರಲ್ಲೇ 9 ತಿಂಗಳು ಉರುಳುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳ ಕೈಗೆ ಅಧಿಕಾರ ಇನ್ನೂ ದೂರದಬೆಟ್ಟವೇ ಆಗಿರುವುದು ದುರ್ದೈವ. ಇದೆಲ್ಲದರ ಮಧ್ಯೆ ನಗರಸಭೆಯಲ್ಲಿ ಈಗ ಅಧಿಕಾರಿಗಳ ಆಡಳಿತ. ಚುನಾಯಿತ ಸದಸ್ಯರಿದ್ದರೂ ಪ್ರಯೋಜನಕ್ಕೆ ಬಾರದ ಸ್ಥಿತಿ. ಆದರೆ ಅಧಿಕಾರಿಗಳು ಎಷ್ಟು ಜನಮುಖಿಯಾಗಿದ್ದಾರೆ ಎಂಬುದೂ ಪ್ರಶ್ನಾರ್ಹವೇ.
ವಾರ್ಡ್ ಸಭೆ ಫಲವೇನು: ಇತ್ತೀಚೆಗೆ ದೊಡ್ಡಬಳ್ಳಾಪುರ ಶಾಸಕರು, ನಗರಸಭೆ ಪೌರಾಯುಕ್ತರು ಸುಮಾರು 8 ದಿನಗಳ ಕಾಲ ಎಲ್ಲ 31 ವಾರ್ಡುಗಳನ್ನೂ ಸುತ್ತಾಡಿ ಜನರ ಸಮಸ್ಯೆ ಆಲಿಸಿ ಪರಿಹರಿಸುವ ಭರವಸೆಯೊಂದಿಗೆ ವಾರ್ಡ್‌ವಾರು ಜನ ಸಂಪರ್ಕ ಸಭೆಗಳನ್ನು ನಡೆಸಿದರು. ಸಭೆಗಳಾಗಿ 2 ವಾರ ಮುಗಿಯುತ್ತಿದೆ. ಆದರೆ ಸಭೆಗಳಲ್ಲಿ ಬಂದ ದೂರುಗಳ ಬಗ್ಗೆ ಎಷ್ಟರ ಮಟ್ಟಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ, ಕ್ರಮ ಕೈಗೊಂಡಿದ್ದಾರೆ, ಸಮಸ್ಯೆಗೆ ಪರಿಹಾರ ಒದಗಿಸಿದ್ದಾರೆ ಎಂಬುದನ್ನು ಶಾಸಕರೇ ಬಂದು ಗಮನಿಸಬೇಕಿದೆ.
ಸಭೆ ಸಾರ್ಥಕ್ಯವೇನು: ಸಭೆಯಲ್ಲಿ ಜನ ಕೊಟ್ಟ ದೂರುಗಳನ್ನು ಉದ್ದುದ್ದ ಹಾಳೆಗಳಲ್ಲಿ ಬರೆದಿಟ್ಟುಕೊಂಡು ಒಂದಿಷ್ಟು ಮಾತನಾಡಿ ಎಲ್ಲಕ್ಕೂ ಪರಿಹಾರದ ದೊಡ್ಡ ಭರವಸೆಗಳನ್ನು ನೀಡಿ ಹೋದ ಜನ ಮತ್ತೆ ಅತ್ತ ಸುಳಿದೇ ಇಲ್ಲ. ಈಗಲೂ ಹಲವು ಚರಂಡಿಗಳಲ್ಲಿ ನೀರು ಸರಿಯಾಗಿ ಹರಿಯುತ್ತಿಲ್ಲ. ಬೀದಿ ದೀಪಗಳು ಉರಿಯುತ್ತಿಲ್ಲ. ನೈರ್ಮಲ್ಯದ ಸಮಸ್ಯೆ ಸುಧಾರಿಸಿಲ್ಲ. ಜನವಸತಿ ಪ್ರದೇಶದಲ್ಲಿರುವ ಹೆಂಡದಂಗಡಿಗಳ ಮೇಲೆ ಕಿಂಚಿತ್ ಕ್ರಮವೂ ಆಗಿಲ್ಲ. ಟ್ರಾಫಿಕ್ ಸಮಸ್ಯೆ ಹಾಗೇ ಇದೆ. ಪಾರ್ಕಿಂಗ್‌ಗೆ ಜಾಗವೇ ಇಲ್ಲ. ಹಲವು ಬಾರಿ ಮಾಧ್ಯಮಗಳು ಎಚ್ಚರಿಸಿದರೂ ಅತ್ತ ಸುಳಿದೂ ನೋಡದ ನಿರ್ಲಕ್ಷ್ಯ ಹಾಗೇ ಮುಂದುವರೆದಿದೆ. ಹೀಗಿರುವಾಗ ದಿನಗಟ್ಟಲೆ ನಡೆಸಿದ ಸಭೆಗಳ ಸಾರ್ಥಕ್ಯ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಗರಸಭೆಯಲ್ಲಿ ಸಾಮಾನ್ಯ ಜನ ಈಗಲೂ ಸ್ವತಂತ್ರವಾಗಿ ಕೆಲಸ ಮಾಡಿಸಿಕೊಂಡು ಬರುವ ಪರಿಸ್ಥಿತಿ ಇಲ್ಲ. ದಲ್ಲಾಳಿಗಳೇ ಇಲ್ಲಿ ಎಲ್ಲವೂ ಆಗಿದ್ದಾರೆ ಎಂಬ ಆರೋಪ ನಾಗರಿಕರದ್ದು.
16 ಕೋಟಿ ಕೆಲಸ ಯಾವಾಗ: ಕಳೆದ 3 ತಿಂಗಳ ಹಿಂದೆಯೇ ನಗರಾಭಿವೃದ್ಧಿ ಇಲಾಖೆಯ ಮಧ್ಯಮ ಪಟ್ಟಣಗಳ ಅಭಿವೃದ್ಧಿ ನಿಧಿಯಡಿ ದೊಡ್‌ಡಬಳ್ಳಾಪುರಕ್ಕೆ ಮಂಜೂರಾಗಿರುವ 16 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅದ್ಧೂರಿ ಶಂಕುಸ್ಥಾಪನೆ ನೆರವೇರಿತು. ಆದರೆ ಇಲ್ಲಿಯವರೆಗೆ ಕಾಮಗಾರಿ ಆರಂಭದ ಉಳಿವೂ ಇಲ್ಲ, ಸುಳಿವೂ ಇಲ್ಲ. ಜೊತೆಗೆ 16 ಕೋಟಿ ವೆಚ್ಚದಲ್ಲಿ ಯಾವ ಯಾವ ಕಾಮಗಾರಿ ಆರಂಭವಾಗುತ್ತವೆ ಎಂಬುದಕ್ಕೆ ಸ್ಪಷ್ಟ ಮಾಹಿತಿಯೂ ಲಭ್ಯವಿಲ್ಲ. ನಗರದ ರಸ್ತೆಗಳ ಅಗಲೀಕರಣವನ್ನಂತೂ ಮಾಡುವ ಶಕ್ತಿ ಜನಪ್ರತಿನಿಧಿಗಳಿಗಿಲ್ಲ, ಕನಿಷ್ಠ ರಸ್ತೆಗಳಿಗೆ ಡಾಂಬರೀಕರಣವನ್ನಾದರೂ ಮಾಡಿಯಾರೇ ಎಂಬ ನಿರೀಕ್ಷೆ ಇದೆ. ಇನ್ನು ಮತ್ತೊಂದು ಆರ್ಥಿಕ ವರ್ಷ ಎದುರಾಗುತ್ತಿದೆ. ಸ್ಥಿತಿಗತಿ ಗಮನಿಸಿದರೆ ಈ ಬಾರಿ ಅಧಿಕಾರಿಗಳೇ ನಗರಸಭೆ ಬಜೆಟ್‌ಗೆ ಮಂಜೂರಾತಿ ನೀಡಬಹುದು. ಆ ಬಗ್ಗೆ ಜನ ಸಂಪರ್ಕಸಭೆ ನಡೆದಿಲ್ಲ. ಸಂಘಟನೆಗಳು ಒತ್ತಾಯ ಹೇರಿದರೂ ಬಜೆಟ್ ಪೂರ್ವಭಾವಿ ಸಭೆ ನಡೆದಿಲ್ಲ. ಅಧಿಕಾರಿಗಳೇ ಇತ್ತ ಗಮನ ಹರಿಸಿ ಸ್ವಾಮಿ.



-ಕೆ.ಆರ್.ರವಿಕಿರಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.