ಬೆಂಗಳೂರು ಗ್ರಾಮಾಂತರ

ಮಳೆಗಾಲದಲ್ಲಿ ನೀರು ಶೇಖರಣೆ ಅಗತ್ಯ ಕ್ರಮ

Published On :

ಮಾಗಡಿ: ಚೆಕ್  ಡ್ಯಾಂಗಳ ನಿರ್ಮಿಸುವ ಮೂಲಕ ಮಳೆಗಾಲದಲ್ಲಿ ನೀರು ಶೇಖರಣೆ ಅಗತ್ಯ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಿದ್ದೇವೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಮುದ್ದುರಾಜ ಯಾದವ್ ತಿಳಿಸಿದರು. ತಗ್ಗೀಕುಪ್ಪೆ ಗ್ರಾ.ಪಂ.ನಲ್ಲಿ ಸರ್ಕಾರದ ಗೋಮಾಳದಲ್ಲಿ ಹರಿದು ಹೋಗುವ ನೀರನ್ನು ಶೇಖರಣೆ ಮಾಡುವುದರಿಂದ  ಅಕ್ಕಪಕ್ಕದ ರೈತರ ಹೊಲಗದ್ದೆಗಳಿಗೆ ತೇವಾಂಶ ತಡೆಹಿಡಿಯುವಲ್ಲಿ ಚೆಕ್ ಡ್ಯಾಂಗಳು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಸುಮಾರು 5 ಲಕ್ಷ ರು. ವೆಚ್ಚದಲ್ಲಿ ನೂತನ ಚೆಕ್ ಡ್ಯಾಂ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ್ದೇವೆ. ಆದಷ್ಟು ಬೇಗ ಕಾಮಗಾರಿ ಆರಂಭಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದರು.  ತಾ.ಪಂ. ಅಧ್ಯಕ್ಷ ಕೃಷ್ಣ, ಎಂಜಿನಿಯರ್ ಗುರುಶಂಕರ್, ವೆಂಕಟೇಶ್, ರಾಜಣ್ಣ ಇತರರು ಇದ್ದರು.
ಎಸ್. ಸಹನ ರಾಜ್ಯಮಟ್ಟಕ್ಕೆ ಆಯ್ಕೆ
ಮಾಗಡಿ: ಮಾಗಡಿ ಕೆಂಪೇಗೌಡ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್. ಸಹನ ವೈಜ್ಞಾನಿಕ ಪ್ರಗತಿಯಿಂದಾಗಿ ಮಾನವ ಕುಲದ ಮೇಲೆ ಆಗುವ ದುಷ್ಪರಿಣಾಮ ಕುರಿತು ಮಂಡಿಸಿದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಕೆಂಪೇಗೌಡ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್. ಸಹನ ಅವರನ್ನು ಶಾಲಾ ಮುಖ್ಯಶಿಕ್ಷಕ ರಾಮಾಂಜನೇಯ ಮತ್ತು ಶೈಕ್ಷಣಿಕ ಸಮಿತಿ ಅಧ್ಯಕ್ಷ ರೇವಣ್ಣ, ಶಿಕ್ಷಕರು ಅಭಿನಂದಿಸಿದ್ದಾರೆ.
ಈಜಲು ಹೋದ ಇಬ್ಬರು ಬಾಲಕರು ಸಾವು
ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲುವಿನ ಬಿದಲೂರು ಗಂಗಮ್ಮನ ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಮೃತ ಬಾಲಕರನ್ನು ತ್ಯಾಮಗೊಂಡ್ಲು ವೀಣಾ ಮಂದಿರ ಶಾಲೆಯ ವಿದ್ಯಾರ್ಥಿಗಳಾದ ಸುದೀಪ್ (13), ಯೋಗೀಶ್ (12) ಎಂದು ಗುರುತಿಸಲಾಗಿದೆ.  ಈ ಬಗ್ಗೆ ತ್ಯಾಮಗೊಂಡ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೇಶದ ಅಭಿವೃದ್ಧಿಗೆ ಶಿಕ್ಷಣವೊಂದೇ ಮಾನದಂಡ
ಮಾಗಡಿ: ದೇಶದ ಅಭಿವೃದ್ಧಿಗೆ ಶಿಕ್ಷಣವೊಂದೇ ಮಾನದಂಡವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಎಸ್.ಆರ್. ಲೀಲಾ ನುಡಿದರು. ಅವರು ತಿಪ್ಪಗೊಂಡನಹಳ್ಳಿ ಬಳಿ ಇರುವ ಚಿತ್ರಕೂಟದ ವಿದ್ಯಾ ಸಂಸ್ಧೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ ಗ್ರಾಮೀಣ ಮಕ್ಕಳು ಹೆಚ್ಚು ಪ್ರತಿಭಾವಂತರು, ಅವರಿಗೆ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸಮಾಜದ ಎಲ್ಲಾ ರಂಗಗಳಲ್ಲೂ ಮುಂದೆ ಬರಬೇಕು ಎಂದರು.  ಚಿತ್ರನಟ ಅರವಿಂದ್, ಸಿಪಿಐ ಯಲಗಯ್ಯ, ತಾ.ಪಂ. ಸದಸ್ಯರಾದ ನರಸಿಂಹಯ್ಯ, ರಾಮಚಂದ್ರಯ್ಯ, ಜಿ.ಪಂ. ಸದಸ್ಯ ಡಿ.ಹನುಮಂತಯ್ಯ, ಚೋಳನಾಯಕನಹಳ್ಳಿ ಗ್ರಾ.ಪಂ. ಅಧ್ಯಕ್ಷ ಲೀಲಾವತಿ ನಾಗರಾಜು ಮಾತನಾಡಿದರು.   ತಾವರೆಕೆರೆ ಗ್ರಾ.ಪಂ. ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ಗೋಪಾಲಕೃಷ್ಣ, ಬೆಂಗಳೂರು ದಕ್ಷಿಣ ತಾಲೂಕು ತಾ.ಪಂ.ಉಪಾಧ್ಯಕ್ಷ ಡಿ.ವಿ.ರಾಮಚಂದ್ರೇಗೌಡ, ಶೈಲಜಾ  ಚಂದಾವರ್ಕರ್, ಸಾಯಿರಾಮ್, ರಾಮು, ಮೂರ್ತಿ, ಜಯರಾಮು ಇತರರು ಉಪಸ್ಥಿತರಿದ್ದರು. ಇದೇ ವೇಳೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕನ್ನಡ ಭಾಷೆ ಅಭಿವೃದ್ಧಿಗೆ ರಾಜ್ಯೋತ್ಸವ ವೇದಿಕೆಯಾಗಲಿ: ಶಾಸಕ
ನೆಲಮಂಗಲ: ಕನ್ನಡ ಭಾಷೆ ಮತ್ತು ಸಾಹಿತ್ಯದ ಸಮಗ್ರ ಅಭಿವೃದ್ಧಿಗೆ ರಾಜ್ಯೋತ್ಸವವನ್ನು ವೇದಿಕೆಯಾಗಿಸಿಕೊಳ್ಳಬೇಕು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ಅವರು ಬುಧವಾರ ತಾಲೂಕಿನ ಹಸಿರುವಳ್ಳಿಯಲ್ಲಿ ಜಯಕರ್ನಾಟಕ ನೂತನ ಶಾಖೆ ಉದ್ಘಾಟನೆ ಮತ್ತು ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಪ್ರತಿಯೊಬ್ಬರು ಕೆಲಸ ಮಾಡಿದಾಗ ಮಾತ್ರ  ಕನ್ನಡ ತಾಯಿಗೆ ಗೌರವ ನೀಡಿದಂತಾಗುತ್ತದೆ ಎಂದರು. ಶಿವಗಂಗೆ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಗ್ರಾಮದ ಪ್ರತಿಭಾವಂತರನ್ನು ಸನ್ಮಾನಿಸಿ ಮಾತನಾಡಿದರು.
ಶಿಕ್ಷಣ ಹಕ್ಕು ಅಧಿನಿಯಮ ರೀತ್ಯ ಅರ್ಜಿ ಆಹ್ವಾನ
ರಾಮನಗರ: ಶಿಕ್ಷಣ ಹಕ್ಕು ಅಧಿನಿಯಮ (ಆರ್‌ಟಿಇ) ಪ್ರಕಾರ ಖಾಸಗಿ ಶಾಲೆಗಳಲ್ಲಿ ಶೇಕಡ 25ರಷ್ಟು ಸೀಟುಗಳ ಮೀಸಲಾತಿ ಕೋಟಾದಡಿ ಪೂರ್ವ ಪ್ರಾಥಮಿಕ ಮತ್ತು 1ನೇ ತರಗತಿಗೆ ಮಕ್ಕಳನ್ನು ದಾಖಲಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.   ಅರ್ಜಿಗಳನ್ನು ಶಿಕ್ಷಣ ಹಕ್ಕು ಅಧಿನಿಯಮ ವ್ಯಾಪ್ತಿಗೆ ಒಳಪಟ್ಟ ಶಾಲೆಗಳು, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಾರ್ವಜನಿಕ ಉಪ ನಿರ್ದೇಶಕರ ಕಚೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಡಿಡಿಪಿಐ (ಆಡಳಿತ) ಪ್ರಹ್ಲಾದಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೀಟುಗಳ ವಿವರ: ರಾಮನಗರ ತಾಲೂಕಿನ 2 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ 26 ಮತ್ತು 48 ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ 467 ಸೀಟುಗಳು, ಚನ್ನಪಟ್ಟಣ ತಾಲೂಕಿನ 30 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗೆ 343 ಮತ್ತು 5 ಶಾಲೆಗಳಲ್ಲಿ 1ನೇ ತರಗತಿಗೆ 26 ಸೀಟುಗಳು ಲಭ್ಯವಿವೆ.  
ಮಾಗಡಿ ತಾಲೂಕಿನ 15 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ 189 ಮತ್ತು 3 ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ 27 ಸೀಟುಗಳು, ಕನಕಪುರ ತಾಲೂಕಿನ 8 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗೆ 104 ಮತ್ತು 39 ಶಾಲೆಗಳಲ್ಲಿ 1ನೇ ತರಗತಿಗೆ 343 ಸೀಟುಗಳು ದೊರೆಯಲಿವೆ.   
ತಾಲೂಕು ಮಟ್ಟದ ಕಲಿಕೋತ್ಸವ ಕಾರ್ಯಕ್ರಮ
ರಾಮನಗರ : ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜ.9ರ ಬೆಳಗ್ಗೆ 10ಕ್ಕೆ ನಗರದ ಗುರುಭವನದಲ್ಲಿ 2013-14ನೇ ಸಾಲಿನ ತಾಲೂಕು ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಶಾಸಕ ಎಚ್.ಸಿ. ಬಾಲಕೃಷ್ಣ ಉದ್ಘಾಟಿಸುವರು. ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮಚಂದ್ರಗೌಡ, ಇ.ಕೃಷ್ಣಪ್ಪ, ಸೈಯದ್ ಮದೀರ್ ಆಗಾ, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ತಾ.ಪಂ. ಅಧ್ಯಕ್ಷ ಲಕ್ಷ್ಮೀಮಂಜುನಾಥ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ರಘುಕುಮಾರ್, ವಿಜಯಕುಮಾರ್ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.