ಕೃಷಿ ತಂತ್ರಜ್ಞಾನ-ಪ್ರಾತ್ಯಕ್ಷಿಕೆ, ಜನಜಾಗೃತಿ
ರಾಮನಗರ: ಕೆಂಗಲ್ ಬಳಿಯ ವಂದಾರಗುಪ್ಪೆ ತೋಟಗಾರಿಕಾ ಸಸ್ಯ ಕ್ಷೇತ್ರದಲ್ಲಿ ಜ.26 ರಿಂದ 29ರವರೆಗೆ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ರೈತರಿಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ, ವಿಭಿನ್ನವಾಗಿ ಏರ್ಪಡಿಸಲು ಜಿ.ಪಂ. ಸಿಇಒ ಡಾ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಅಭಿವೃದ್ಧಿ ಚಿತ್ರಣ, ಜೀವಾಮೃತ, ಭೂ ಚೇತನ ಯೋಜನೆಗಳು ತೋಟಗಾರಿಕೆ ಇಲಾಖೆಯಿಂದ ಇಲಾಖೆಯ ಎಲ್ಲಾ ಯೋಜನೆಗಳ ಮಾಹಿತಿ, ರೇಷ್ಮೆ ಇಲಾಖೆಯಿಂದ ನರೇಗ ಯೋಜನೆಯಡಿ ಕೈಗೊಳ್ಳುತ್ತಿರುವ ಕಾರ್ಯಕ್ರಮ, ಜಲಸಂಪನ್ಮೂಲ ಇಲಾಖೆಯಿಂದ ಭೂಮಿ ಮಟ್ಟ, ಕೃಷಿ ಹೊಂಡ, ಪುನರುಜ್ಜೀವನಗೊಳಿಸುವ ಹೊಂಡ ನಿರ್ಮಾಣ, ಪಶುಸಂಗೋಪನೆ ಇಲಾಖೆಯಿಂದ ಕುರಿ ಶೆಡ್, ಕೋಳಿ ಶೆಡ್, ದನದ ಕೊಟ್ಟಿಗೆ, ಜೇನು ಸಾಕಾಣಿಕೆ ಸೇರಿದಂತೆ ಇನ್ನಿತರೆ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ತೀರ್ಮಾನ ಕೈಗೊಳ್ಳಲಾಯಿತು.
ಜಿಪಂ ಅಧ್ಯಕ್ಷ ಸಲಹೆ: ಎಲ್ಲಾ ಇಲಾಖೆಗಳಿಂದ ರೈತರಿಗೆ ದೊರಕುವ ಸೌಲಭ್ಯಗಳ ಮಾಹಿತಿಯನ್ನು ಕರಪತ್ರಗಳಲ್ಲಿ ಮುದ್ರಿಸಿ ಹಂಚಬೇಕು. ಅಣಬೆ ಬೇಸಾಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಎಲ್ಲಾ ಗ್ರಾಪಂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು ಎಂದು ಜಿಪಂ ಅಧ್ಯಕ್ಷ ಎಚ್.ಸಿ.ರಾಜು ಸಲಹೆ ನೀಡಿದರು.
ತಳ ಮಟ್ಟದಲ್ಲಿ ಕಾರ್ಯ ನಡೆಯಲಿ: ಕಾರ್ಯಕ್ರಮ ನಡೆಯುವ ದಿನದಂದು ಕೆಂಗಲ್ನಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ರೈತರನ್ನು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಗ್ರಾಪಂ ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘಗಳ ಮೂಲಕ ಆಹ್ವಾನಿಸಬೇಕು. ಪ್ರಗತಿ ಪರ ರೈತರನ್ನು ಸನ್ಮಾನಿಸಿ, ಅವರ ಸಾಧನೆಯನ್ನು ಇತರ ರೈತರಿಗೆ ತಿಳಿಸಲು ವೇದಿಕೆ ಕಲ್ಪಿಸಬೇಕೆಂದು ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘದ ಸದಸ್ಯ ಹುಲುವಾಡಿ ಶಿವಕುಮಾರ್ ಮನವಿ ಮಾಡಿದರು.
ಕೆಂಗಲ್ನ ಸಸ್ಯ ಕ್ಷೇತ್ರದಲ್ಲಿ 6 ಸಾವಿರ ತೋಟಗಾರಿಕಾ ಸಸ್ಯ ತಳಿಗಳಿವೆ. ರೈತರಿಗೆ ವಿಭಿನ್ನ ಕೃಷಿಯನ್ನು ಪರಿಚಯಿಸಲು ಕಿಚನ್ ಗಾರ್ಡನ್, ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯಗಳು, ಬಯೋಗ್ಯಾಸ್ ಘಟಕ, ತೋಟಗಾರಿಕಾ ಯೋಜನೆಗಳ ಸಮಗ್ರ ಮಾಹಿತಿ ಒದಗಿಸಲು ಕಾರ್ಯಕ್ರಮಗಳನ್ನು ರೂಪಿಸಿರುವುದಾಗಿ ಸಿಇಒ ವೆಂಕಟೇಶ್ ಹೇಳಿದರು.
ಪ್ರದರ್ಶನದ ಮೊದಲ ಹಾಗೂ ಎರಡನೇ ದಿನ ಪ್ರಗತಿ ಪರ ರೈತರು ಹಾಗೂ ಕೃಷಿ, ತೋಟಗಾರಿಕೆ ತಜ್ಞರಿಂದ ಸಂವಾದಗಳು ನಡೆಯುವವು. ಇದರಲ್ಲಿ ಎಲ್ಲಾ ಇಲಾಖೆಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಿದರು. ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿದರು.
ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಎಚ್.ಎನ್.ಹೇಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಣ್ಣಯ್ಯ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಎಸ್.ಎಂ.ಚಂದ್ರ, ಜಿಲ್ಲಾ ತೋಟಗಾರಿಕಾ ಸಂಘದ ಸದಸ್ಯರಾದ ಕಾಂತರಾಜ್ ಪಟೇಲ್, ಪುಟ್ಟಸ್ವಾಮಿ, ನಾರಾಯಣಪ್ಪ, ಪ್ರಾಣೇಶ್, ಚಿಕ್ಕವೀರೇಗೌಡ, ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

