ಕೆಲಸ ಮಾಡಲಿಲ್ಲ; ಪಾಲು ಕೇಳದೆ ಬಿಡಲಿಲ್ಲ!
ರಾಮನಗರ: ಒಂದೆಡೆ ಮೈಚಳಿ ಬಿಟ್ಟು ನೀರಿಗೆ ಇಳಿದು ಅಕ್ರಮ ಮರಳು ದಂಧೆಗೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡವರು ಒಂದು ತಂಡ. ಮತ್ತೊಂದೆಡೆ ಕೈಕಟ್ಟಿಕೊಂಡು ದಡದಲ್ಲಿ ಅತ್ತಿತ್ತ ಕದಲದೆ ನಿಂತ ಇನ್ನೊಂದು ಅಧಿಕಾರಿಗಳ ತಂಡವು ವಶಪಡಿಸಿಕೊಂಡ ಸಾಮಗ್ರಿಗಳಲ್ಲಿ ಪಾಲು ಕೇಳಿ ಪೇಚಿಗೆ ಸಿಲುಕಿತು.
ಹೀಗೊಂದು ಹೈಡ್ರಾಮಾ ಶಿಂಷಾ ನದಿ ಪಾತ್ರದಲ್ಲಿ ಗುರುವಾರ ಅಕ್ರಮ ಮರಳುಗಾರಿಕೆ ವಿರುದ್ಧ ಮದ್ದೂರು ಮತ್ತು ಚನ್ನಪಟ್ಟಣ ತಾಲೂಕು ಆಡಳಿತದಿಂದ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ನಡೆಯಿತು. ಇದರೊಂದಿಗೆ ದಂಧೆಕೋರರ ಜತೆ ಕೈ ಜೋಡಿಸಿರುವ ಚನ್ನಪಟ್ಟಣದ ಅಧಿಕಾರಿಗಳ ಮುಖವಾಡವೂ ಕಳಚಿಬಿತ್ತು. ಎತ್ತು ಏರಿಗೆ, ಕೋಣ ನೀರಿಗೆ ಎನ್ನುವ ನಾಣ್ನುಡಿಗೆ ಅಕ್ಷರಶಃ ಹೋಲಿಕೆಯಾದಂತಿದ್ದ ಇಡೀ ಕಾರ್ಯಾಚರಣೆಯಲ್ಲಿ ಶ್ರಮವೆಲ್ಲವೂ ಮದ್ದೂರು ತಾಲೂಕಿನ ಅಧಿಕಾರಿಗಳ ತಂಡದ್ದೇ. ಅವರು ವಶಪಡಿಸಿಕೊಂಡ 15 ಕೊಪ್ಪರಿಕೆ ಸಹಿತ ಇತರೆ ಸಾಮಗ್ರಿಗಳಲ್ಲಿ ಮೂರನೇ ಒಂದರಷ್ಟು ಪಾಲು ಪಡೆದು ಮಹಾನ್ ಸಾಧನೆ ಮಾಡಿದವರಂತೆ ಚನ್ನಪಟ್ಟಣದ ತಂಡ ಬೀಗಿದೆ.
ಜಂಟಿ ಕಾರ್ಯಾಚರಣೆ: ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ಗಡಿಯಲ್ಲಿ ಹರಿಯುವ ಶಿಂಷಾ ನದಿಯಲ್ಲಿ ಸೆಕ್ಷನ್ 144ರನ್ವಯ ಮರಳುಗಾರಿಕೆಗೆ ಸರ್ಕಾರ ನಿಷೇಧ ಹೇರಿದೆ. ಇಷ್ಟಾಗಿಯೂ ನದಿ ಪಾತ್ರದುದ್ದಕ್ಕೂ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದೆ. ಈ ಬಗ್ಗೆ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ಮೇರೆಗೆ ಉಭಯ ಜಿಲ್ಲಾಡಳಿತ ಜಂಟಿ ಕಾರ್ಯಾಚರಣೆಗೆ ಇಳಿಸಿತ್ತು.
ನದಿ ಪಾತ್ರವು ಒಂದೆಡೆ ಚನ್ನಪಟ್ಟಣ ತಾಲೂಕಿನ ಸರಹದ್ದಿಗೆ ಸೇರಿದ್ದರೆ, ಇನ್ನೊಂದೆಡೆ ಮದ್ದೂರು ತಾಲೂಕಿನ ವ್ಯಾಪ್ತಿಗೊಳಪಟ್ಟಿದೆ. ಹೀಗಾಗಿ ಎರಡೂ ತಾಲೂಕು ತಂಡಗಳನ್ನೇ ಕಾರ್ಯಾಚರಣೆಗೆ ಇಳಿಸಲಾಗಿತ್ತು. ಉಭಯ ತಂಡಗಳ ನಡುವೆ ಸಾಮರಸ್ಯದ ಕೊರತೆ ಎದ್ದು ಕಂಡಿದ್ದು, ಚನ್ನಪಟ್ಟಣ ತಾಲೂಕಿನ ಅಧಿಕಾರಿಗಳ ವರ್ತನೆ ಜನತೆಯಲ್ಲಿ ಸಂಶಯ ಮೂಡುವಂತೆ ಮಾಡಿತ್ತು.
ಟ್ರ್ಯಾಕ್ಟರ್ ಅಡ್ಡಗಟ್ಟಿದರು: ಜಂಟಿ ಕಾರ್ಯಾಚರಣೆ ಪ್ರಾರಂಭವಾದಾಗ ಮದ್ದೂರು ಅಧಿಕಾರಿಗಳ ತಂಡದ ಸಾರಥ್ಯವನ್ನು ಅಲ್ಲಿನ ತಹಸೀಲ್ದಾರ್ ಜಗದೀಶ್ ವಹಿಸಿದ್ದರು. ಕಡೆವರೆಗೂ ಅವರು ಜಾಗಬಿಟ್ಟು ಕದಲಿಲ್ಲ. ಆದರೆ, ಚನ್ನಪಟ್ಟಣ ತಂಡದಲ್ಲಿ ಬೆರಳೆಣಿಕೆ ಸಿಬ್ಬಂದಿ ಇದ್ದರು. ಈ ತಂಡವನ್ನು ತಹಸೀಲ್ದಾರ್ ಶಿವರುದ್ರಯ್ಯ ಕೂಡಿಕೊಳ್ಳುವಷ್ಟರಲ್ಲಿ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ ತಲುಪಿತ್ತು.
ಮದ್ದೂರು ತಾಲೂಕು ಆಡಳಿತವು 15 ಕೊಪ್ಪರಿಕೆ ಸಹಿತ ಸಾಮಗ್ರಿಗಳನ್ನು ಟ್ರ್ಯಾಕ್ಟರ್ಗೆ ತುಂಬಿಕೊಂಡು, ಮದ್ದೂರಿನತ್ತ ಹೊರಡುತ್ತಿದ್ದಾಗ ಚನ್ನಪಟ್ಟಣದ ಅಧಿಕಾರಿಗಳು ಅಡ್ಡಗಟ್ಟಿದರು. ಶಿಂಷಾ ನದಿ ನಮ್ಮ ಸರಹದ್ದಿಗೂ ಸೇರಿದ್ದು, ಎಲ್ಲ ಸಾಮಗ್ರಿಗಳನ್ನು ನಮ್ಮ ವಶಕ್ಕೇ ನೀಡಬೇಕು. ಇದು ನಮ್ಮ ತಹಸೀಲ್ದಾರ್ ಆರ್ಡರ್ ಎಂದು ಅವರು ಬೊಬ್ಬೆಯಿಟ್ಟರು.
ಬೆವರಿಳಿಸಿದ ತಹಸೀಲ್ದಾರ್: ಇಡೀ ಕಾರ್ಯಾಚರಣೆ ವೇಳೆ ಕೈಕಟ್ಟಿಕೊಂಡು ದಡದಲ್ಲೇ ನಿಂತ ಚನ್ನಪಟ್ಟಣದ ಅಧಿಕಾರಿಗಳು ಸಾಮಗ್ರಿಗಳನ್ನು ತುಂಬಿಕೊಂಡು ಹೊರಟ ಟ್ರ್ಯಾಕ್ಟರ್ಗೆ ಅಡ್ಡ ನಿಲ್ಲುತ್ತಿದ್ದಂತೆಯೇ ಮದ್ದೂರು ತಹಸೀಲ್ದಾರ್ ಜಗದೀಶ್ ಕೆಂಡಾಮಂಡಲರಾದರು. ತಮ್ಮ ಮಾತಿನ ಚಾಟಿಯಿಂದ ಚನ್ನಪಟ್ಟಣದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬೆವರಿಳಿಸಿದರು.
ತರಾಟೆಗೆ ಒಳಗಾದ ನಂತರ ಚನ್ನಪಟ್ಟಣದ ಅಧಿಕಾರಿಗಳ ಮಾತಿನ ವರಸೆ ಬದಲಾಯಿತು. ವಶಪಡಿಸಿಕೊಂಡ ಕೊಪ್ಪರಿಕೆಗಳಲ್ಲಿ ಕೆಲವನ್ನಾದರೂ ನಮ್ಮ ಸುಪರ್ದಿಗೆ ನೀಡಿ ಎಂದು ಗೋಗರೆದರು. ಕಡೆಗೆ, 5 ಕೊಪ್ಪರಿಕೆಗಳನ್ನು ಚನ್ನಪಟ್ಟಣ ತಾಲೂಕು ಅಧಿಕಾರಿಗಳ ತಂಡಕ್ಕೆ ಒಪ್ಪಿಸಲು ಜಗದೀಶ್ ಸಮ್ಮತಿಸಿದರು. ಅದಾಗ ಸ್ಥಳಕ್ಕೆ ಚನ್ನಪಟ್ಟಣ ತಹಸೀಲ್ದಾರ್ ಆಗಮನವಾಯಿತು.
ಕಂಡೂ ಕಾಣದಂತಾದರು: ತಮ್ಮ ವಶಕ್ಕೆ 5 ಕೊಪ್ಪರಿಕೆಗಳು ಸಿಗುತ್ತಿದ್ದಂತೆಯೇ ಚನ್ನಪಟ್ಟಣದ ಅಧಿಕಾರಿಗಳು ಜಾಗ ಖಾಲಿ ಮಾಡಿದರು. ಅವರು ನಿರ್ಗಮಿಸುವ ವೇಳೆ ಚನ್ನಪಟ್ಟಣ ಸರಹದ್ದಿನಲ್ಲೇ ನೀರಿನಲ್ಲಿ ಇನ್ನೂ 5 ಕೊಪ್ಪರಿಕೆಗಳು ಮುಳುಗಿರುವುದನ್ನು ನೆರೆದಿದ್ದವರು ತೋರಿಸಿದರು. ಅವನ್ನು ಮೇಲೆತ್ತಿ ವಶಪಡಿಸಿಕೊಳ್ಳುವ ಗೋಜಿಗೆ ಈ ಅಧಿಕಾರಿಗಳು ಮುಂದಾಗಲೇ ಇಲ್ಲ.
ಚನ್ನಪಟ್ಟಣ ಅಧಿಕಾರಿಗಳ ತಂಡದ ನಿರ್ಗಮನದ ಬಳಿಕ ಮದ್ದೂರು ತಾಲೂಕು ಆಡಳಿತ ತಂಡವೇ ಚನ್ನಪಟ್ಟಣ ಸರಹದ್ದಿಗೆ ಇಳಿದು ಅಲ್ಲಿದ್ದ ಐದೂ ಕೊಪ್ಪರಿಕೆಗಳನ್ನು ಮೇಲೆತ್ತಿ, ವಶಪಡಿಸಿಕೊಂಡರು. ಇಡೀ ಕಾರ್ಯಾಚರಣೆಯು ನೀರಿನಲ್ಲಿ ಮುಳುಗಿದ್ದ ಕೊಪ್ಪರಿಕೆ ತೆಗೆದವರು ಯಾರೋ ಅವನ್ನು ವಶಪಡಿಸಿಕೊಂಡು ಉಪ್ಪರಿಕೆ ಮೇಲೆ ಕೂರಲು ಯತ್ನಿಸಿದವರೇ ಇನ್ಯಾರೋ ಎನ್ನುವಂತಾಯಿತು.
ಊರೊಳಗೆ ದಾಸ್ತಾನು: ಇಗ್ಗಲೂರು ಸೇರಿದಂತೆ ಶಿಂಷಾ ನದಿ ಪಾತ್ರದಲ್ಲಿರುವ ಚನ್ನಪಟ್ಟಣ ತಾಲೂಕಿನ ಗ್ರಾಮಗಳಲ್ಲಿ ನೂರಾರು ಲಾರಿ ಲೋಡ್ನಷ್ಟು ಮರಳನ್ನು ದಂಧೆಕೋರರು ಅಕ್ರಮವಾಗಿ ದಾಸ್ತಾನಿಟ್ಟಿದ್ದಾರೆ. ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇದ್ದಾಗ್ಯೂ ವಶಪಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳ ಶಾಮೀಲಾತಿಗೆ ಇದಕ್ಕಿಂತ ಬೇರೆ ನಿದರ್ಶನ ಬೇಕೇ ಎನ್ನುತ್ತಾರೆ ಸ್ಥಳೀಯರು.
ನಮ್ಮದೂ ಪಾಲಿದೆ
ಶಿಂಷಾ ನದಿ ಪಾತ್ರದಲ್ಲಿ ನಡೆದಿರುವುದು ಒಂದು ತಂಡದ ಕಾರ್ಯಾಚರಣೆ ಅಲ್ಲ. ಅದು ಚನ್ನಪಟ್ಟಣ ಮತ್ತು ಮದ್ದೂರು ತಾಲೂಕು ಆಡಳಿತದ ಜಂಟಿ ಕಾರ್ಯಾಚರಣೆ. ಅದರಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರವಹಿಸಿದ್ದಾರೆ. ಉಭಯ ತಾಲೂಕುಗಳಆಡಳಿತದ ನಡುವೆ ವಿವಾದವಿಲ್ಲ.
- ಶಿವರುದ್ರಯ್ಯ,
ತಹಸೀಲ್ದಾರ್, ಚನ್ನಪಟ್ಟಣ
ಮರಳುಗಾರಿಕೆಯಲ್ಲಿ ಕೊಪ್ಪರಿಕೆ ಕಾಣಿಕೆ!
ಕೊಪ್ಪರಿಕೆಗಳನ್ನು ಆಲೆಮನೆಗಳಲ್ಲಿ ಕಬ್ಬಿನ ರಸ ಕುದಿಸಿ, ಬೆಲ್ಲ ಉತ್ಪಾದನೆ ಮಾಡುವ ಪ್ರಕ್ರಿಯೆಗೆ ಬಳಸಲಾಗುತ್ತದೆ. ಅವನ್ನೀಗ ನದಿ ಪಾತ್ರದ ಮರಳುಗಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಕೆಲವೆಡೆ ಕೊಪ್ಪರಿಕೆಗಳಿಗೆ ಮೋಟಾರ್ ಅಳವಡಿಸಿ, ದೋಣಿಯಂತೆ ನೀರಿನ ಮೇಲೆ ಚಾಲನೆ ಮಾಡುತ್ತಿರುವುದೂ ಉಂಟು. ನದಿಯಲ್ಲಿ ಮರಳನ್ನು ತೆಗೆದು, ಕೊಪ್ಪರಿಕೆಗೆ ತುಂಬಿಸಿಕೊಂಡು ಅದನ್ನು ದಡ ಮುಟ್ಟಿಸಲಾಗುತ್ತದೆ. ಅಲ್ಲಿಂದ ಟ್ರ್ಯಾಕ್ಟರ್, ಲಾರಿಗಳಿಗೆ ತುಂಬಿ ಸಾಗಿಸಲಾಗುತ್ತದೆ. ತಮ್ಮ ಕೆಲಸವಾದ ನಂತರ ಕೊಪ್ಪರಿಕೆಗಳನ್ನು ನದಿ ನೀರಿನಲ್ಲೇ ಮುಳುಗಿಸಿ ಅದಿರುವ ಜಾಗವನ್ನು ಗುರ್ತು ಮಾಡಿಕೊಳ್ಳುತ್ತಾರೆ. ಮತ್ತೆ ಕೆಲಸಕ್ಕೆ ಬೇಕೆಂದಾಗ ಮೇಲೆತ್ತಿ ಬಳಸುತ್ತಾರೆ.
-ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

