ಟ್ರಸ್ಟ್ ಮೂಲಕ ಸರ್ಕಾರಿ ಕೆಲಸ ಸಲ್ಲ
ರಾಮನಗರ: ಚಾರಿಟಬಲ್ ಟ್ರಸ್ಟ್ ರಚಿಸಿಕೊಂಡು ಜನ ಸೇವೆ ಮಾಡುವುದಕ್ಕೆ ತಮ್ಮ ಅಭ್ಯಂತರವಿಲ್ಲ. ಆದರೆ, ಸರ್ಕಾರದ ಅನುದಾನ ಮತ್ತು ಯೋಜನೆಗಳನ್ನು ಆ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸುವುದು ಎಷ್ಟರಮಟ್ಟಿಗೆ ಸರಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಜವನಮ್ಮನದೊಡ್ಡಿ, ಸುಣ್ಣಘಟ್ಟ, ಸುಂಟರದೊಡ್ಡಿ, ಬೆಟ್ಟೇಗೌಡನದೊಡ್ಡಿ, ಅರಳೀಕೆರೆದೊಡ್ಡಿ, ಮಾವತ್ತೂರು, ತೋಕಸಂದ್ರ ಮತ್ತಿತರ ಗ್ರಾಮಗಳಲ್ಲಿ ಗುರುವಾರ ಗ್ರಾಮ ಸಂಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಆಡಳಿತ ಯಂತ್ರವಿದೆ. ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಿ, ಆ ಕೆಲಸಗಳನ್ನೆಲ್ಲಾ ಸ್ವಂತ ಟ್ರಸ್ಟ್ ಮೂಲಕ ಕಾನೂನು ಬಾಹಿರವಾಗಿ ಜಾರಿಗೊಳಿಸುತ್ತಿರುವುದರ ಔಚಿತ್ಯ ಏನಿದೆ ಎನ್ನುವುದನ್ನು ವಿಧಾನಸಭೆ ಅಧಿವೇಶನದಲ್ಲೇ ಪ್ರಶ್ನಿಸುವುದಾಗಿ ಅವರು ಹೇಳಿದರು.
ಹೆಚ್ಚಿದ ದೌರ್ಜನ್ಯ: ರಾಮನಗರ ಜಿಲ್ಲಾದ್ಯಂತ ಅಮಾಯಕರ ಮೇಲೆ ಪೊಲೀಸರ ದೌರ್ಜನ್ಯ ಹೆಚ್ಚಾಗಿದೆ. ಪೊಲೀಸರ ಅಂಧಾ ದರ್ಬಾರರ್ವಿಷಯವನ್ನು ಈಚೆಗೆ ನಡೆದ ಕೆಡಿಪಿ ಸಭೆಯಲ್ಲೇ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಕೆ.ಜೆ. ಜಾರ್ಜ್ ಎದುರು ಪ್ರಸ್ತಾಪಿಸಲಾಗಿದೆ. ಇಷ್ಟಾಗಿಯೂ ಪೊಲೀಸರ ಧೋರಣೆ ಬದಲಾಗದಿರುವ ಬಗ್ಗೆ ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.
ಪ್ರತಿಭಟನೆಯ ಎಚ್ಚರ: ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ, ಚಳವಳಿ ಹತ್ತಿಕ್ಕುವ ಹುನ್ನಾರವೂ ನಡೆದಿದೆ. ಈ ವಿರುದ್ಧ ಸ್ವತಃ ತಾವೇ ಬೀದಿಗಿಳಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕ್ಷೇತ್ರದೊಂದಿಗೆ ಒಡನಾಟ: ರಾಜ್ಯ ಪ್ರವಾಸ, ಬೆಳಗಾವಿ ಅಧಿವೇಶನ ಸಹಿತ ನಾನಾ ಕಾರಣಗಳಿಂದ ಕೆಲ ದಿನಗಳ ಮಟ್ಟಿಗೆ ಕ್ಷೇತ್ರ ಪ್ರವಾಸ ಸ್ಥಗಿತಗೊಂಡಿತ್ತು. ಇದೀಗ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳಲ್ಲಿ 3 ದಿನದ ಗ್ರಾಮ ಸಂಚಾರ ಕಾರ್ಯಕ್ರಮದೊಂದಿಗೆ ಜನರ ದೂರು, ದುಮ್ಮಾನಗಳಿಗೆ ಸ್ಪಂದಿಸುತ್ತಿರುವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕ್ಷೇತ್ರದೊಟ್ಟಿಗೆ ಒಡನಾಟವನ್ನು ನಿರಂತರವಾಗಿ ಮುಂದುವರೆಸಲಾಗುವುದು. ಕ್ಷೇತ್ರಕ್ಕೆ ಪ್ರತಿ ಸೋಮವಾರದ ಭೇಟಿ ಯಾವುದೇ ಕಾರಣಕ್ಕೂ ತಪ್ಪುವುದಿಲ್ಲ. ಗ್ರಾಮ ಸಂಚಾರವನ್ನು ಶೀಘ್ರವೇ ರಾಮನಗರ ತಾಲೂಕಿನ ವ್ಯಾಪ್ತಿಯಲ್ಲೂ ನಡೆಸಲಾಗುವುದು ಎಂದು ಅವರು ಹೇಳಿದರು.
ತಹಸೀಲ್ದಾರ್ ಸ್ವಾಗತ
ಈಚೆಗೆ ರಾಮನಗರದಲ್ಲಿ ನಡೆದಿದ್ದ ಕೆಡಿಪಿ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ತರಾಟೆಗೆ ಒಳಗಾಗಿದ್ದ ಕನಕಪುರ ತಹಸೀಲ್ದಾರ್ ಡಾ.ದಾಕ್ಷಾಯಿಣಿ ಅವರು ಗ್ರಾಮ ಸಂದರ್ಶನಕ್ಕೆ ತಮ್ಮ ತಾಲೂಕಿಗೆ ಆಗಮಿಸಿದ್ದ ಕುಮಾರಸ್ವಾಮಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ತಮ್ಮ ಮಾತು ಕೇಳುತ್ತಿಲ್ಲವೆಂದು ಪದೇ ಪದೇ ಹರಿಹಾಯುತ್ತಿದ್ದ ಕುಮಾರಸ್ವಾಮಿ ಅವರು ತಹಸೀಲ್ದಾರ್ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿ, ಅವರೊಂದಿಗೆ ಹೆಚ್ಚು ಮಾತು ಲಂಬಿಸುವ ಗೋಜಿಗೆ ಹೋಗಲಿಲ್ಲ. ಸಾರ್ವಜನಿಕರಿಂದ ತಾಲೂಕು ಆಡಳಿತದ ವಿಷಯವಾಗಿ ದೂರುಗಳು ಬಂದಾಗ ಶೀಘ್ರ ಪರಿಹರಿಸಲು ತಹಸೀಲ್ದಾರ್ ಅವರಿಗೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

