ಲೋಹಿಯಾ ಸಿದ್ಧಾಂತ ಪರಿಣಾಮಕಾರಿ ಕೆಲಸ ಮಾಡಿದೆ
ಕ.ಪ್ರ.ವಾರ್ತೆ , ಕುಣಿಗಲ್ , ಜ.10
ಚನ್ನಪಟ್ಟಣ: ಈ ನಾಡಿನಲ್ಲಿ 80ರ ದಶಕದಲ್ಲಿ ಮಾನವನ ಹಕ್ಕುಗಳಿಗಾಗಿ ಸಂಘಟಿತಗೊಂಡ ಚಳವಳಿಗಳ ಮೇಲೆ ಲೋಹಿಯಾ ಸಿದ್ಧಾಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ರೈತಪರ ಚಳವಳಿಗಾರ ಕಡಿದಾಳು ಶಾಮಣ್ಣ ಅಭಿಪ್ರಾಯಪಟ್ಟರು.
ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಹಾಗೂ ಸಮಾಜವಾದಿ ಜನಪರಿಷದ್ ತಾಲೂಕಿನ ಅರಳಾಳುಸಂದ್ರದಲ್ಲಿ ಹಮ್ಮಿಕೊಂಡಿದ್ದ ಯುವಜನರಿಗಾಗಿ ಸಮಾಜವಾದ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ಲೋಹಿಯಾ ಸ್ವಂತತ್ರ ಭಾರತದ ಪ್ರಜೆಗಳ ನಿಜವಾದ ಹಕ್ಕುಗಳ ಬಗ್ಗೆ, ದೇಶದ ಭವಿಷ್ಯದ ಬಗ್ಗೆ ಚಿಂತಿಸಿದ ಮಹಾನ್ ಮುತ್ಸದ್ದಿಯಾಗಿದ್ದು ಇಂದು ಆಡಳಿತಾ ರೂಢ ಸರ್ಕಾರಗಳು ಜನಪರ ಚಿಂತನೆ ಮಾಡುತ್ತಿವೆ ಎಂದಾದಲ್ಲಿ ಅದು ಲೋಹಿಯ ಶ್ರೀಸಾಮಾನ್ಯರಲ್ಲಿ ಬಿತ್ತಿದ ಅರಿವಿನ ಬೀಜದ ಪ್ರತಿಫಲ ಎಂದರು.
ಸ್ವಾತಂತ್ರ್ಯದ ನಿಜವಾದ ಅರ್ಥ ಸಮಾನತೆಯಲ್ಲಿದೆ ಎಂಬುದನ್ನು ಎಲ್ಲರಿಗೂ ಮನದಟ್ಟು ಮಾಡಿಕೊಟ್ಟ ಲೋಹಿಯಾ ವಿಚಾರದಿಂದ ಪ್ರೇರೇಪಿತರಾದ ಮಂದಿ ತಮ್ಮ ನೆಲದಲ್ಲಿ ನಡೆದ ಶೋಷಣೆ, ಲೂಟಿಗಳ ವಿರುದ್ಧ ಬಂಡೆದ್ದು ತಮಗೆ ಸಂವಿಧಾನ ಬದ್ಧವಾಗಿ ದೊರಕ ಬೇಕಾದ ಹಕ್ಕುಗಳನ್ನು ದಕ್ಕಿಸಿಕೊಂಡರು. ಇಂತಹ ಹೋರಾಟಗಳಲ್ಲಿ ರೈತಸಂಘದ ಹೋರಾಟ ಪ್ರಮುಖವಾದುದ್ದು ಎಂದರು.
ಶಾಲೆಗಳ ಕಾರ್ಯಚಟುವಟಿಕೆ, ಪಠ್ಯ ಸೇರಿದಂತೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ತಮ್ಮದೇ ಆದ ಚಿಂತನೆಗಳನ್ನು ಅನುಷ್ಟಾನಗೊಳಿಸುವ ಉದ್ದೇಶದಿಂದ ಲೋಹಿಯಾ ಸಮತಾ ವಿದ್ಯಾಲಯ ಎಂಬ ಶಾಲೆಗಳನ್ನು ಜಾರಿಗೆತಂದರು, ಈ ಪ್ರಯೋಗದಲ್ಲಿ ಅವರು ಯಶಸ್ವಿ ಗೊಂಡರಾದರೂ ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಆಲೋಚಿಸುವ ಮನಸ್ಸುಗಳು ಕಡಿಮೆಯಾಗುತ್ತಿವೆ ಎಂದು ವಿಷಾದಿಸಿದರು.
ಲೋಹಿಯಾ ಸಿದ್ಧಾಂತಗಳು ಕೆಲವರಿಗೆ ವ್ಯಂಗ್ಯವಾಗಿ ಕಾಣುತ್ತವೆಯಾದರೂ ಅವರ ವಿಚಾರದಲ್ಲಿ ಅಡಕವಾಗಿರುವ ಸತ್ವವನ್ನು ಅರಿತಾಗ ಮಾತ್ರ ಈ ದೇಶದ ಪ್ರಗತಿಗೆ ಲೋಹಿಯಾ ವಿಚಾರಧಾರೆ ಅತ್ಯಗತ್ಯ ವೆನಿಸುತ್ತದೆ, ರೈತ ಚಳುವಳಿಯ ಮಹತ್ವದ ಘಟ್ಟಗಳಾದ ಆಸ್ತಿ ಜಪ್ತಿ ವಿರೋಧಿ ಹೋರಾಟ, ಗೇಣಿ ಹೋರಾಟಗಳು ಇವರ ಚಿಂತನೆಯನ್ನು ಕಾರ್ಯರೂಪಕ್ಕೆ ತಂದ ಚಳುವಳಿಗಳಾಗಿದ್ದು ಇತ್ತೀಚಿನ ದಿನಗಳಲ್ಲಿ ಪಾಲ್ಗೊಳ್ಳುವಿಕೆಯ ಕೊರತೆಯಿಂದಾಗಿ ಲೋಹಿಯಾ ಸಿದ್ದಾಂತದ ಸಮರ್ಪಕ ಅನುಷ್ಟಾನಕ್ಕೆ ಕುಂದುಂಟಾಗಿದೆ ಎಂದರು.
ಬೃಹದಾಕಾರ: ಸಮತಾ ವಿದ್ಯಾಲಯ ಸ್ಥಾಪಕ ಧರ್ಮದರ್ಶಿ ಅನುಸೂಯಮ್ಮ ಮಾತನಾಡಿ , ವೈಚಾರಿಕತೆಗೆ ಹೆಸರಾದ ಅರಳಾಳುಸಂದ್ರ ಗ್ರಾಮದಲ್ಲಿ ಸರಳವಿವಾಹ, ಅಂತರಜಾತಿ ವಿವಾಹ, ರೈತಪರ ಚಳವಳಿಗಳು ಜನ್ಮತಳೆದು ಬೃಹದಾಕಾರಕ್ಕೆ ಬೆಳೆದವು. ಹಲವಾರು ಜನಪರ ಚಿಂತನೆಯ ಮೂಲ ಸೆಲೆಯಾದ ಅರಳಾಳು ಸಂದ್ರ ಗ್ರಾಮದಲ್ಲಿ ಸಮತಾ ವಿದ್ಯಾಲಯ ಸ್ಥಾಪಿಸುವ ಮೂಲಕ ಈಎಲ್ಲಾ ಬೆವಣಿಗೆಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಪ್ರಯತ್ನ ಮಾಡಲಾಯಿತು ಎಂದರು.
ಸಮತಾ ವಿದ್ಯಾಲಯದೀಂದ ಗ್ರಾಮೀಣ ಮಹಿಳೆಯರ ಸಬಲೀಕರಣ ಹಾಗೂ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಮನೋಭಾವ ಬೆಳೆಸಲಾಯಿತು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯದಡಿ ಗಾಂಧಿ ಹಾಗೂ ಲೋಹಿಯಾ ಅವರ ವಿಚಾರಧಾರೆಗಳ ಬಗ್ಗೆ ತಿಳಿಸಿ ಅವರಲ್ಲಿನ ಆತ್ಮಾಭಿಮಾನವನ್ನು ಪ್ರಚುರ ಪಡಿಸಿದ್ದಾಗಿ ತಿಳಿಸಿದರು.
ಪ್ರೊ.ನಂಜುಂಡಸ್ವಾಮಿ, ಕಿಶನ್ ಪಾಟ್ನಾಯಕ್, ನಿಸಾರ್ ಅಹಮದ್, ಕಡಿದಾಳು ಶಾಮಣ್ಣ, ಮುಂತಾದ ಸಮಾಜವಾದಿಗಳು ಅಡಿಗಲ್ಲು ಹಾಕಿದ ಈ ವಿದ್ಯಾಲಯ ಹಲವರಿಗೆ ಹೋರಾಟದ ಕಿಚ್ಚನ್ನು ಹಚ್ಚಿಸುವ ಜತೆಗೆ ಸ್ವಾವಲಂಭಿಗಳನ್ನಾಗಿಸಲು ಅಡಿಪಾಯ ಹಾಕಿಕೊಟ್ಟಿದೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಅರ್ಕೇಶ್ ಮಾತನಾಡಿ, ಲೋಹಿಯಾ ವಿಶ್ವಮಾನ್ಯ ಚಿಂತಕ, ಮಾರ್ಕ್ಸ್, ಗಾಂಧಿ, ಬಸವಣ್ಣರಂತಹ ಮಹನೀಯರ ಸಾಲಿನಲ್ಲಿ ನಿಲ್ಲುವ ಲೋಹಿಯಾ ವಿಚಾರಗಳು ಚಿರನೂತನವಾಗಿದ್ದು ಇದನ್ನು ಕರಾರುವಕ್ಕಾಗಿ ಅನುಷ್ಟಾನ ಗೊಳಿಸುವ, ಯುವ ಸಮುದಾಯಕ್ಕೆ ಪ್ರಚುರ ಪಡಿಸುವ ಕೆಲಸ ನಡೆಯ ಬೇಕಿದೆ ಎಂದು ತಿಳಿಸಿದರು.
ಸಮಾಜವಾದಿ ಜನಪರಿಷತ್ನ ಸ್ವಾತಿ (ಮಧ್ಯಪ್ರದೇಶ) ನಿಶಾ ಶಿರೋಡ್ಕರ್, ಶಿವಾಜಿ (ಮಹಾರಾಷ್ಟ್ರ) ಲಿಂಗರಾಜ್ ಆಜಾದಿ (ಒರಿಸ್ಸಾ), ವಿನೋದ್ ಪಾಡ್ಯನ್ (ಕೇರಳ) ಹಿ.ಶಿ.ರಾಮಚಂದ್ರೇಗೌಡ, ಸರ್ಕಾರಿ ಕಾಲೇಜು ಪ್ರಾಂಶುಪಾಲ ತಿಮ್ಮೇಗೌಡ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

