ಬೆಂಗಳೂರು ಗ್ರಾಮಾಂತರ

ಎಲ್ಲಾ ಸಂಗೀತ ಪ್ರಕಾರಗಳಿಗೂ ಜನಪದವೇ ಮೂಲ

Published On :

ಕ.ಪ್ರ. ವಾರ್ತೆ ,  ರಾಮನಗರ ,  ಜ.14
ಎಲ್ಲಾ ಸಂಗೀತ ಪ್ರಕಾರಗಳಿಗೂ ಜನಪದವೇ ಮೂಲವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಜನಪದಕ್ಕೆ ಅಳಿವೆಂಬುದೇ ಇಲ್ಲ ಎಂದು ಜಾನಪದ ವಿದ್ವಾಂಸ ಡಾ.ಎಂ.ಬೈರೇಗೌಡ ಅಭಿಪ್ರಾಯಪಟ್ಟರು.
ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯಿಂದ ಆಯೋಜಿಸಿದ್ದ ರಸಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಗೆ ಅಳಿವುಂಟೇ ಹೊರತು ಜನಪದ ಸಂಸ್ಕೃತಿಗೆ ಅಳಿವಿಲ್ಲ ಎಂದರು.
ಜನಪದ ಸಾಹಿತ್ಯವು ಸಮೃದ್ಧವಾಗಿದ್ದು ಲಾವಣಿ, ಲಾಲಿಹಾಡು, ದೂರಿಪದ, ತತ್ವಪದ, ಸೋಬಾನೆ ಹಾಡು, ದೇವರ ಹಾಡುಗಳು, ಹುಟ್ಟು-ಸಾವಿಗೆ ಸಂಬಂಧಿಸಿದ ಹಾಡುಗಳನ್ನು ಜಗತ್ತಿನ ಬೇರಾವ ಭಾಷೆ ಹಾಗೂ ಸಂಸ್ಕೃತಿಯಲ್ಲಿ ನಾವು ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ನಮ್ಮ ಯುವಜನತೆ ಸಮೃದ್ಧವಾದ ಜನಪದವನ್ನು ಕಡೆಗಣಿಸಲಾಗುತ್ತಿದೆ. ಜನಪದ ಅಳಿದರೆ ನಮ್ಮ ಸಂಸ್ಕೃತಿಯೇ ಅಳಿದಂತಾಗುತ್ತದೆ. ಜನಪದವನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.  ಮಕ್ಕಳಿಗೆ ಪ್ರಾಥಮಿಕ ಶಾಲೆಗಳ ಪಠ್ಯಕ್ರಮದಲ್ಲಿ ಜನಪದವನ್ನು ಒಂದು ವಿಷಯವಾಗಿ ಸೇರಿಸಬೇಕು. ಅದರಿಂದ ಅವರನ್ನು ಜನಪದದ ಕಡೆಗೆ ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ಬೈರೇಗೌಡ ಅಭಿಪ್ರಾಯಪಟ್ಟರು.   ಕನ್ನಡ ಭಾಷೆಗೆ ಸಾವಿರಾರು ವರ್ಷದ ಸುದೀರ್ಘ ಇತಿಹಾಸವಿದೆ. ಎಷ್ಟೇ ಪರಭಾಷೆಗಳು ಕನ್ನಡದ ಮೇಲೆ ಆಕ್ರಮಣ ನಡೆಸಿದರೂ ಅದನ್ನು ತಡೆದುಕೊಳ್ಳುವ ಶಕ್ತಿ ಈ  ಭಾಷೆಗಿದೆ. ಕನ್ನಡ ನಾಡಿಗೆ ಉದ್ಯೋಗ ಅರಸಿ ಬರುವ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ ಕೆಲಸವಾಗಬೇಕು ಎಂದು  ಉಪನ್ಯಾಸಕ ಡಾ.ಅಂಕನಹಳ್ಳಿ ಪಾರ್ಥ ಕರೆ ನೀಡಿದರು.  ಮಕ್ಕಳಲ್ಲಿ ಜ್ಞಾನದಾಹವಿರಬೇಕು. ಅದನ್ನು ಅರಗಿಸಿಕೊಳ್ಳಲು ಉಪನ್ಯಾಸ, ವಿಚಾರ ಸಂಕಿರಣಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಲೀನಾ ಗಣಪತಿ ಶೆಟ್ಟಿ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಾಂತಮ್ಮ, ಸಿದ್ದರಾಜು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.