ನಿತ್ಯಾನಂದ ವಿರುದ್ಧ ವೇದಿಕೆ ಪ್ರತಿಭಟನೆ
ರಾಮನಗರ: ಕನ್ನಡಿಗರಿಗೆ ಅಪಮಾನ ಮತ್ತು ಭಾವನೆಗಳಿಗೆ ಧಕ್ಕೆ ತರುವ ಕುಚೋದ್ಯವನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿರುವ ಕಪಟಿ ಸನ್ಯಾಸಿ ನಿತ್ಯಾನಂದನನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ನಿತ್ಯಾನಂದ ಪ್ರತಿಕೃತಿ ಮತ್ತು ಭಾವಚಿತ್ರವನ್ನು ದಹಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಿತ್ಯಾನಂದ ಮತ್ತು ಆತನ ಸಹಚರರನ್ನು ರಾಜ್ಯದಿಂದ ಹೊರ ಹಾಕಬೇಕು. ಧ್ಯಾನಪೀಠವನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಉತ್ತರ ಭಾರತದ ಹರಿದ್ವಾರದಲ್ಲಿ ಕನ್ನಡಿಗ ಯಾತ್ರಾರ್ಥಿಗಳನ್ನು ಹೊಟೇಲ್ನಿಂದ ಹೊರಹಾಕಿ ಅಪಮಾನಿಸುವ ಮೂಲಕ ನಿತ್ಯಾನಂದ ಇಡೀ ಕನ್ನಡ ನಾಡಿಗೇ ಅಪಮಾನವೆಸಗಿದ್ದಾನೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾನೆ. ಆತನ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಿತ್ಯಾನಂದ ಸೇವಿಸುತ್ತಿರುವ ನೀರು, ಆಹಾರ, ಗಾಳಿ ಎಲ್ಲವೂ ಕನ್ನಡ ನಾಡಿನದ್ದಾಗಿದೆ. ಒಂದೆಡೆ ಧಾರ್ಮಿಕವಾಗಿ ಆಕ್ರಮಣ ನಡೆಸುತ್ತಿರುವ ನಿತ್ಯಾನಂದ ಕೃಷಿ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆ ನಡೆಸುತ್ತಿದ್ದಾನೆ. ಆತನ ಆಶ್ರಮವೆಲ್ಲವೂ ತಮಿಳು, ಇಂಗ್ಲೀಷ್ ಮಯವಾಗಿದ್ದು ಕನ್ನಡಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇಂತಹ ವ್ಯಕ್ತಿ ನಮ್ಮ ನೆಲದಲ್ಲಿ ಇರಲು ನಾಲಾಯಕ್ಕು ಎಂದರು.
ನಿತ್ಯಾನಂದ ವಿರುದ್ಧ ಭೂ ಅಕ್ರಮ, ಅನ್ಯಕ್ರಾಂತವಿಲ್ಲದೆ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಬಳಸುತ್ತಿರುವುದು, ಶಾಂತಿಭಂಗಕ್ಕೆ ಆಸ್ಪದ, ಲೈಂಗಿಕ ಕಿರುಕುಳ ಸಹಿತ ನಾನಾ ಆರೋಪಗಳಿದ್ದಾಗ್ಯೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸದ ಬಗ್ಗೆ ಪ್ರತಿಭಟನಾಕಾರರು ಟೀಕಾ ಪ್ರಹಾರ ನಡೆಸಿದರು. ನಿತ್ಯಾನಂದ ವಿರುದ್ಧ ತಕ್ಷಣ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

