ಮನೆಗೆ ನುಗ್ಗಿ ಹಲ್ಲೆ: ಆಭರಣ ದೋಚಿ ಪರಾರಿ
ಆನೇಕಲ್ಲು: ಒಂಟಿ ಮನೆಗೆ ನುಗ್ಗಿದ 15 ಮಂದಿಯ ಗುಂಪು ಮನೆ ಯಜಮಾನ ಹಾಗೂ ಯಜಮಾನತಿಯ ಮೇಲೆ ತೀವ್ರ ಹಲ್ಲೆ ಮಾಡಿ ನಗ ಹಾಗೂ ನಗದನ್ನು ದೋಚಿ ಅಪಹರಿಸಿದ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ನಾಗನಾಯಕನಹಳ್ಳಿಯಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ರೈತ ಸುಬ್ರಮಣಿ. ಪತಿಯನ್ನು ರಕ್ಷಿಸಲು ಬಂದು ಗಾಯಗೊಂಡವರು ಹೆಂಡತಿ ನಾರಾಯಣಮ್ಮ ಹಾಗೂ ಮಗ ಶಾಂತಕುಮಾರ್. ಮನೆಯಲ್ಲಿದ್ದ ಇನ್ನಿಬ್ಬರು ಮಕ್ಕಳು ಅಪಾಯವಿಲ್ಲದೇ ಪಾರಾಗಿದ್ದಾರೆ.
ಮನೆ ಬಳಿ ಬಂದ ತಂಡ ಕುಡಿಯಲು ನೀರು ಕೇಳಿ ಬಲವಂತದಿಂದ ಮನೆಯೊಳಗೆ ಪ್ರವೇಶಿಸಿದ್ದಾರೆ. ನಂತರ ಚಾಕುವಿನಿಂದ ಸುಬ್ರಮಣಿಯನ್ನು ತಿವಿದು ಗಾಯಗೊಳಿಸಿದ್ದಾರೆ. ನಾರಾಯಣಮ್ಮ ಅವರ ತಲೆಗೆ ದೊಣ್ಣೆಯಿಂದ ಬೀಸಿ ಹೊಡೆದಿದ್ದಾರೆ. ಕೂಗಾಟ ಚೀರಾಟದ ನಡುವೆಯೇ ರು. 30 ಸಾವಿರ ನಗದು, ಚಿನ್ನಾಭರಣ ಹಾಗೂ ಮೊಬೈಲ್ ಎತ್ತಿಕೊಂಡು ಹೋಗಿದ್ದಾರೆ.
ಗುಂಡಿನ ಸದ್ದಿಗೆ ಹೆದರಿ ಕಾಲ್ಕಿತ್ತರು: ಸುಬ್ರಮಣಿಯವರ ಮನೆಯಿಂದ ಬಂದ ಸದ್ದಿಗೆ ಎಚ್ಚರವಾದ ನೆರೆ ಮನೆಯ ಮುನಿಯಪ್ಪ ಎಂಬುವವರು ತಮ್ಮಲ್ಲಿದ್ದ ರಿವಾಲ್ವಾರ್ನಿಂದ 3 ಸುತ್ತು ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದಿಗೆ ಎಚ್ಚೆತ್ತುಕೊಂಡ ದಾಳಿಕೋರರು ತಾವು ಬಂದ ಕಾರಿನಲ್ಲೇ ಪರಾರಿಯಾಗಿದ್ದಾರೆ. ಇಲ್ಲದಿದ್ದಲ್ಲಿ ಇನ್ನೂ ಹೆಚ್ಚಿನ ಅನಾಹುತ ನಡೆಯುವ ಸಂಭವ ಇತ್ತು.
ಎರಡನೇ ಬಾರಿ ದಾಳಿ: ಕಳೆದ ತಿಂಗಳು ಇದೇ ಕುಟುಂಬದ ಸದಸ್ಯರ ಮೇಲೆ ದಾಳಿ ಮಾಡಲಾಗಿತ್ತು. ಆ ಬಗ್ಗೆ ಆನೇಕಲ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಜಮೀನು ಸಂಬಂಧ ಈ ಘಟನೆ ನಡೆದಿರಬಹುದು ಎಂದು ಆನೇಕಲ್ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ಸ್ಥಳಕ್ಕೆ ಗ್ರಾಮಾಂತರ ಎಸ್ಪಿ ರಮೇಶ್, ಡಿವೈಎಸ್ಪಿ ಬಲರಾಮೇಗೌಡ, ವೃತ್ತ ನಿರೀಕ್ಷಕ ಕಿಶೋರ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು ಕ್ರಮ ವಹಿಸುವುದಾಗಿ ಪಿಎಸ್ಐ ಚೇತನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

