ಬೆಂಗಳೂರು ಗ್ರಾಮಾಂತರ

ಆರ್‌ಟಿಇ: ಉಚಿತ ಸೀಟುಗಳು ಘೋಷಣೆ

Published On :

ಕ.ಪ್ರ.ವಾರ್ತೆ , ರಾಮನಗರ , ಜ.15
2014-15ನೇ ಶೈಕ್ಷಣಿಕ ಸಾಲಿನ ಆರ್‌ಟಿಇ ಯೋಜನೆಯಡಿಯಲ್ಲಿ ಜಿಲ್ಲೆಯ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಉಚಿತ ಸೀಟುಗಳು ಘೋಷಣೆಯಾಗಿದ್ದು, ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಅರ್ಹ ಕುಟುಂಬಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಹ್ಲಾದಗೌಡ ತಿಳಿಸಿದರು.
ತಾಲೂಕಿನ ಬಿಡದಿಯ ಸಿಮ್ರನ್ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಆರ್‌ಟಿಇ ಕಾಯ್ದೆಯಡಿ ಜಿಲ್ಲೆಯಲ್ಲಿರುವ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಉತ್ತಮವಾಗಿ ಪ್ರತಿಕ್ರಿಯಿಸುತ್ತಿವೆ ಎಂದರು.  ಗುಣಮಟ್ಟದ ಶಿಕ್ಷಣ ಪಡೆದು, ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಉತ್ತಮ ನಾಗರಿಕರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು ಈ ನಿಟ್ಟಿನಲ್ಲಿ ಸಿಮ್ರನ್ ಶಾಲೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಮತ್ತು ಪೋಷಕರು ಒಂದಾಗಿ ಶ್ರಮಿಸಿದರೆ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ಪೋಷಕರ ಪ್ರೀತಿಗೆ ಪಾತ್ರವಾಗಿರುವ ಸಿಮ್ರನ್ ಸಂಸ್ಥೆ ಮುಂದಿನ ದಿನಗಳಲ್ಲಿ ತನ್ನ ಶೈಕ್ಷಣಿಕ ಕ್ಷೇತ್ರವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲಿ ಎಂದು ರಾಮನಗರ ತಾ.ಪಂ.ಅಧ್ಯಕ್ಷೆ ಲಕ್ಷ್ಮಿಮಂಜುನಾಥ್ ಹಾರೈಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ಬ್ರೈನೆ ಸೆಂಟರ್‌ನ ನಿರ್ದೇಶಕ ಡಿ.ಶಶಿಕುಮಾರ್ ಮಾತನಾಡಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಶಾಲೆಗಳಿಗೆ ಮೊಬೈಲ್ ತರುವುದಕ್ಕೆ ಪೋಷಕರೇ ನಿರ್ಬಂಧ ಹೇರಬೇಕು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದಾಗುತ್ತಿರುವ ಅನಾಹುತಗಳ ಬಗ್ಗೆ ಪೋಷಕರು ತಿಳಿಹೇಳಬೇಕು ಎಂದರು.
ಸಹಕಾರ: ಆರ್.ಟಿ.ಇ ಕಾಯ್ದೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳು ಉಚಿತ ಶಿಕ್ಷಣ ನೀಡಲು ಸರ್ಕಾರದೊಂದಿಗೆ ಸಹಕರಿಸುತ್ತಿದೆ. ಈ ಕಾಯ್ದೆಯು ಆರ್ಥಿಕವಾಗಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ ಎಂದು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತಗಳ ಒಕ್ಕೂಟದ (ಉಸ್ಮಾರ್ಡ್) ಅಧ್ಯಕ್ಷ ಸುಬ್ಬಯ್ಯ ಚೆಟ್ಟಿ ತಿಳಿಸಿದರು.
ಆರ್ಥಿಕವಾಗಿ ಅನುಕೂಲವಿರುವ ಕೆಲವು ಪೋಷಕರು ಸಹ ಸುಳ್ಳು ಆದಾಯ ಪ್ರಮಾಣ ಪತ್ರಗಳನ್ನು ನೀಡಿ, ಕಾಯ್ದೆಯನ್ನು ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಹೀಗೆ ಮಾಡುವುದರಿಂದ ಆರ್ಥಿಕವಾಗಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ನ್ಯಾಯದೊರಕುವುದಿಲ್ಲ. ಪೋಷಕರು ಈ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ಬೇಡ ಎಂದು ಅವರು ಕರೆ ನೀಡಿದರು.
 ಜಿ.ಪಂ. ಸದಸ್ಯೆ ಶಾಂತಮ್ಮ ವೆಂಕಟೇಶ್, ಬಿಡದಿ ರೋಟರಿ ಅಧ್ಯಕ್ಷ ಗಾಣಕಲ್ ನಟರಾಜ್, ಕಾರ್ಯದರ್ಶಿ ಬಿ.ಎನ್.ರಮೇಶ್, ಉದ್ಯಮಿ ಚಿಕ್ಕಣ್ಣಯ್ಯ, ಶಾಲೆಯ ಕಾರ್ಯದರ್ಶಿ ಅಜಗರ್ ಉಲ್ಲಾ ಬೇಗ್, ಮುಖ್ಯ ಶಿಕ್ಷಕಿ ನಫೀಜಾ ಬೇಗಂ, ಟ್ರಸ್ಟಿ ಅತಾ ಉಲ್ಲಾ ಬೇಗ್ ಭಾಗವಹಿಸಿದ್ದರು. ಸಹ ಶಿಕ್ಷಕ ಸಂದೀಪ್ ಸ್ವಾಗತಿಸಿದರು. ಬೀರೇಂದ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.