ತೆಂಗಿನ ತೋಟಗಳ ಪುನಶ್ಚೇತನಕ್ಕೆ ಸಹಾಯಧನ
ರಾಮನಗರ: ಬರಪೀಡಿತ ಮತ್ತು ರೋಗ ಬಾಧಿತ ತೆಂಗಿನ ತೋಟಗಳ ಪುನಶ್ಚೇತನಕ್ಕೆ ಸಹಾಯಧನ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ರಾಜ್ಯ ಸರ್ಕಾರವು ತೋಟಗಾರಿಕೆ ಇಲಾಖೆ ಮೂಲಕ ಅನುಷ್ಠಾನಕ್ಕೆ ಮುಂದಾಗಿದೆ.
ಕೇಂದ್ರದ ತೋಟಗಾರಿಕೆ ಇಲಾಖೆ ಆಯುಕ್ತ ಡಾ.ಗೋರಕ್ ಸಿಂಗ್ ಸಮಿತಿ, ಜಿಕೆವಿಕೆ ತಾಂತ್ರಿಕ ಸಮಿತಿ ವರದಿ ಆಧರಿಸಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದ್ದು, ಫಲಾನುಭವಿಗಳಿಗೆ ಶೇ. 25ರಷ್ಟು ಪ್ರೋತ್ಸಾಹ ಧನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬರಪೀಡಿತ ತೆಂಗು ಉತ್ಪಾದನಾ ಪ್ರದೇಶದಲ್ಲಿ ಸಂಪೂರ್ಣ, ಭಾಗಶಃ ಹಾನಿಗೊಳಗಾಗಿರುವ ಮತ್ತು ರೋಗಪೀಡಿತವಾದ ಅನುತ್ಪಾದಕ ತೆಂಗಿನ ತೋಟಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮವನ್ನು 2 ಘಟಕಗಳಾಗಿ ವಿಂಗಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
ಘಟಕವಾರು ಕಾರ್ಯಕ್ರಮ: ಈ ಯೋಜನೆಯನ್ನು ಎರಡು ಘಟಕಗಳಾಗಿ ವಿಂಗಡಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ. ತೆಂಗಿನ ತೋಟಗಳಲ್ಲಿ ಸಂಪೂರ್ಣ ಒಣಗಿರುವ ತೆಂಗಿನ ಮರಗಳನ್ನು ಬುಡ ಸಮೇತ ತೆಗದು ಹಾಕುವುದು ಮತ್ತು ಪರ್ಯಾಯ ಬೆಳೆಗೆ ಉತ್ತೇಜನ ಒಂದು ಘಟಕವಾದರೆ, ಭಾಗಶಃ ಹಾನಿಗೊಳಗಾದ ತೆಂಗಿನ ತೋಟಗಳ ವೈಜ್ಞಾನಿಕ ಪುನಶ್ಚೇತನವು ಮತ್ತೊಂದು ಘಟಕವಾಗಿದೆ.
ಅನುತ್ಪಾದಕ ತೆಂಗಿನ ಮರಳಗಳನ್ನು ತೆಗೆದು ಅದರ ಬದಲಾಗಿ ಮಾವು, ಹುಣಸೆ, ಸೀತಾಫಲ, ದಾಳಿಂಬೆ ಪೈಕಿ ಒಂದನ್ನು ಏಕ ಬೆಳೆಯಾಗಿ, ಸೀಬೆ ಮತ್ತು ಸಪೋಟವನ್ನು ಮಿಶ್ರ ಬೆಳೆಯಾಗಿ ಬೆಳೆಯಲು ಕೃಷಿ ಕ್ಷೇತ್ರವಾರು, ಮಣ್ಣು, ಹವಾಮಾನ, ಮಳೆ ಮತ್ತು ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ಶಿಫಾರಸು ಮಾಡಲಾಗಿದೆ.
ನಿರ್ವಹಣೆಗೂ ನೆರವು: 2013-14ನೇ ಸಾಲಿನಲ್ಲಿ ನಾಟಿ ಮಾಡಲಾದ ತೋಟಗಾರಿಕೆ ಬೆಳೆಗಳಿಗೆ ಅದರ ಮುಂದಿನ ವರ್ಷವೂ ನಿರ್ವಹಣೆಗಾಗಿ ಪ್ರೋತ್ಸಾಹ ಧನ ಸೌಲಭ್ಯ ಮುಂದುವರೆಸಲಾಗುವುದು. ಕಡಿಮೆ ನೀರು ಬಳಸಿ ಬೆಳೆಯಬಹುದಾದ ಗಡುತರವಾದ ಗೋಡಂಬಿ, ಹಲಸು ಇತ್ಯಾದಿ ಬೆಳೆಗಳಿಗೂ ಈ ಯೋಜನೆ ಅನ್ವಯವಾಗಲಿದೆ.ತೋಟದ ಸುತ್ತಲೂ ನಿತ್ಯ ಹಸಿರು ಇರುವ ಹಲಸು, ಸಿಲ್ವರ್, ಹೊಂಗೆ, ಬೇವು, ಸರ್ವೆ ಇತ್ಯಾದಿ ಹೀಗೆ ಮಾಡುವುದರಿಂದ ಗಾಳಿಯನ್ನು ತಡೆಯುವುದಲ್ಲದೆ ತೋಟದಲ್ಲಿ ಉಷ್ಣತೆ ಏರುವಿಕೆ ತಪ್ಪಿಸಲು ಮತ್ತು ನೀರು ಪೋಲು ಕಡಿಮೆ ಮಾಡಿ ಸೂಕ್ಷ್ಮ ವಾತಾವರಣ ಮೂಡಿಸಬಹುದಾಗಿದೆ ಎನ್ನುವುದು ಶಿಫಾರಸುಗಳಲ್ಲಿ ಒಂದಾಗಿದೆ.
ಪ್ರೋತ್ಸಾಹ ಧನ ವಿವರ: ಸಂಪೂರ್ಣ ಒಣಗಿರುವ ಗಿಡಗಳನ್ನು ಬುಡ ಸಮೇತ ತೆಗೆದು ಹಾಕಲು ಗರಿಷ್ಠ 40 ಗಿಡಗಳಿಗೆ ತಲಾ ರು.375ರಂತೆ ರು.15 ಸಾವಿರ ವೆಚ್ಚವಾಗಲಿದೆ. ಇದಕ್ಕೆ ರು.3750 ಪ್ರೋತ್ಸಾಹ ಧನ ಲಭಿಸಲಿದೆ. ಪರ್ಯಾಯ ಬೆಳೆ ನಾಟಿ ಮತ್ತು ನಿರ್ವಹಣೆಗೆ ರು.21 ಸಾವಿರ ವೆಚ್ಚವಾಗಲಿದ್ದು, ರು.5250 ಪ್ರೋತ್ಸಾಹ ಧನ ನೀಡಲಾಗುವುದು. ಬದುಗಳಲ್ಲಿ ಅಪ್ರಧಾನ ಹಣ್ಣಿನ ಗಿಡಗಳನ್ನು ಬೆಳೆಸಲು ರು.500, ತೆಂಗಿನ ಬುಡಗಳಲ್ಲಿ ತೇವಾಂಶ ಸಂರಕ್ಷಣೆಗೆ ಹೊಟ್ಟು ಇತರೆ ತ್ಯಾಜ್ಯಗಳನ್ನು ಹೊದಿಸುವುದು, ತೋಟದ ಬದುಗಳ ನಿರ್ಮಾಣಕ್ಕೆ ರು.2500 ಸೇರಿದಂತೆ ಒಟ್ಟಾರೆ ಘಟಕ ಕಾರ್ಯಕ್ರಮಕ್ಕೆ ರು.12 ಸಾವಿರ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ.
ಪುನಶ್ಚೇತನಕ್ಕೂ ಹಣ: ಘಟಕ-2ರಡಿ ಪೂರ್ಣ ಪ್ರಮಾಣದಲ್ಲಿ ಒಣಗಿದ ಗಿಡಗಳನ್ನು ತೆಗೆದು ಹಾಕುವುದಕ್ಕೆ ರು.3750, ಹಾನಿಗೊಳಗಾಗಿರುವ ತೆಂಗಿನ ಗಿಡಗಳನ್ನು ಸಮಗ್ರ ಬೇಸಾಯ ಪದ್ಧತಿ ಮುಖಾಂತರ ಪುನಶ್ಚೇತನಗೊಳಿಸುವುದಕ್ಕೆ ರು.2500, ಮಳೆ ನೀರು ಕೊಯ್ಲು ಮತ್ತು ಇರುವ ಕೊಳವೆ ಬಾವಿಗಳ ಅಂತರ್ಜಲ ಮರುಪೂರಣಕ್ಕೆ ರು.2 ಸಾವಿರ, ಮಿಶ್ರ, ಮಧ್ಯಂತರ ಬೆಳೆ, ಹೈಬ್ರಿಡ್ ಗಿಡಗಳ ಮರು ನಾಟಿಗೆ ರು.4 ಸಾವಿರ ಸಹಿತ ಒಟ್ಟಾರೆ ರು.12 ಸಾವಿರ ಪ್ರೋತ್ಸಾಹ ಧನ ಲಭ್ಯವಿದೆ.
ಆಯ್ಕೆಗೆ ಮಾನದಂಡ: ಫಲಾನುಭವಿಯು ಬರಪೀಡಿತ ಪ್ರದೇಶದ ತೆಂಗು ಬೆಳೆಗಾರರಾಗಿದ್ದು, ಸ್ವತ: ಜಮೀನು ಮಾಲೀಕರಾಗಿರಬೇಕು. ತಂದೆ-ತಾಯಿ ಹೆಸರಿನಲ್ಲಿ ಜಮೀನಿದ್ದು, ಅವರು ಮರಣ ಹೊಂದಿದಲ್ಲಿ ಗ್ರಾಮ ಲೆಕ್ಕಿಗರಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರ ಒಪ್ಪಿಗೆ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ. ಫಲಾನುಭವಿಯು ಸೂಚಿತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಿದ್ಧರಿರಬೇಕೆನ್ನುವ ಷರತ್ತು ವಿಧಿಸಲಾಗಿದೆ. ಮಣ್ಣಿನ ತೇವಾಂಶ ಮತ್ತು ಅಂತರ್ಜಲ ಮರುಪೂರಣ, ಪುನಶ್ಚೇತನಗೊಳಿಸುವ ತೋಟಗಳಲ್ಲಿ ಸಮಗ್ರ ಬೇಸಾಯ ಪದ್ಧತಿ ಅಳವಡಿಕೆಗೆ ರೈತರು ಸಿದ್ಧರಿರಬೇಕು. ತೋಟದಲ್ಲಿ ಜೀವ ರಕ್ಷಕ ನೀರಾವರಿ ವ್ಯವಸ್ಥೆ ಹೊಂದಿರಬೇಕು. ಪಹಣಿ, ತೋಟದ ಚಿತ್ರ ಒದಗಿಸುವುದು ಸಹಿತ ಅಗತ್ಯ ಪ್ರಕ್ರಿಯೆಗಳಿಗೆ ಸಮ್ಮಿತಿಸಬೇಕು.
2 ಹೆಕ್ಟೇರ್ ಗರಿಷ್ಠ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೆಂಗು ಪುನಶ್ಚೇತನ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಪ್ರತಿಯೊಬ್ಬ ಫಲಾನುಭವಿಗೆ ಗರಿಷ್ಠ 2 ಹೆಕ್ಟೇರ್ ತೆಂಗಿನ ತೋಟದಲ್ಲಿ ತೆಂಗು ಪುನಶ್ಚೇತನಕ್ಕೆ ಪ್ರೋತ್ಸಾಹ ಧನ ಒದಗಿಸಲಾಗುವುದು.
ಟಿ ಹೇಮಾ, ಉಪ ನಿರ್ದೇಶಕಿ, ತೋಟಗಾರಿಕೆ ಇಲಾಖೆ.
ಯೋಜನೆ ಉದ್ದೇಶವಿದು
ಬರದಿಂದ ಸಂಪೂರ್ಣ ಒಣಗದಿರುವ ತೆಂಗಿನ ತೋಟಗಳಲ್ಲಿ ಮಳೆಯಾಧಾರಿತ ಪರ್ಯಾಯ ತೋಟಗಾರಿಕೆ ಬೆಳೆ ಬೆಳೆಯುವುದು, ಹಾನಿಗೊಳಗಾದ ಮತ್ತು ಹಾನಿಗೊಳಗಾಗುತ್ತಿರುವ ತೆಂಗಿನ ತೋಟಗಳಲ್ಲಿ ಮಳೆ ನೀರು, ಕೃಷಿ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣಗೊಳಿಸುವುದಕ್ಕೆ ಒತ್ತು ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಬರಪೀಡಿತ ಮತ್ತು ರೋಗಬಾಧಿತ ತೆಂಗಿನ ತೋಟಗಳಲ್ಲಿ ಅಂತರ ತೋಟಗಾರಿಕೆ ಬೆಳೆಗಳನ್ನು ಬೆಳೆಸುವುದು, ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು, ಬರಪೀಡಿತ ಪ್ರದೇಶದಲ್ಲಿನ ರೈತರ ಆರ್ಥಿಕ ಸ್ಥಿತಿ ಸುಧಾರಣೆಯನ್ನು ಯೋಜನೆ ಒಳಗೊಂಡಿರುತ್ತದೆ.
ಒದಗಿಸಬೇಕಾದ ದಾಖಲೆ
ರೈತರು ನಿಗದಿತ ಅರ್ಜಿ ನಮೂನೆಯನ್ನು ತೋಟಗಾರಿಕೆ ಇಲಾಖೆಯಿಂದ ಪಡೆದುಕೊಂಡು, ಭರ್ತಿ ಮಾಡಿದ ನಂತರ ಆ ಅರ್ಜಿಯೊಂದಿಗೆ ಪಹಣಿ ಇಲ್ಲವೇ ದೃಢೀಕರಣ ಪತ್ರ, ಮುಂಗಡ ಹಣ ಸಂದಾಯ ರಶೀದಿ, ಅಗತ್ಯವಿರುವ ರಸೀದಿ, ಸ್ವಯಂ ಘೋಷಣೆ ಪತ್ರ, ತಾಕಿನ ಫೋಟೋ, ಬ್ಯಾಂಕ್ ಖಾತೆಯ ಜೆರಾಕ್ಸ್ ಪ್ರತಿ, ಪರಿಶೀಲನಾಧಿಕಾರಿಗಳ ದೃಢೀಕರಣ ಪತ್ರದೊಂದಿಗೆ ಇಲಾಖೆಗೆ ಸಲ್ಲಿಸಬೇಕಿದೆ.
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

