'ದಲಿತರ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಅಂತ್ಯ ಹಾಡಿ'
ಕ.ಪ್ರ.ವಾರ್ತೆ ರಾಮನಗರ ಜ.16
ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ದೌರ್ಜನ್ಯ ನಡೆಸುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಮತಾ ಸೈನಿಕ ದಳದ ಜಿಲ್ಲಾ ಘಟಕವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿತು.
ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ, ಸಾಮಾಜಿಕ ಬಹಿಷ್ಕಾರ ಸೇರಿದಂತೆ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳೂ ನಡೆಯುತ್ತಿವೆ. ದೌರ್ಜನ್ಯ ನಡೆಸಿದವರ ವಿರುದ್ಧ ಪೊಲೀಸರು ಮೃದು ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ದುಷ್ಕರ್ಮಿಗಳ ಅಟ್ಟಹಾಸ ಮಿತಿಮೀರಿದೆ ಎಂದು ಆರೋಪಿಸಿದೆ.
ಕನಕಪುರದ ಜಕ್ಕಸಂದ್ರ, ಎಚ್.ಕೊತ್ತನೂರು, ವರ್ತಿಪುರ, ಚನ್ನಪಟ್ಟಣದ ಕೋಟಮಾರನಹಳ್ಳಿ, ರಾಮನಗರದ ಚಿಕ್ಕಗಂಗವಾಡಿಯಲ್ಲಿ ನಡೆದ ಘಟನೆಗಳು ಇತ್ತೀಚಿನ ತಾಜಾ ಉದಾಹರಣೆಗಳಾಗಿವೆ. ಈ ಎಲ್ಲಾ ಪ್ರಕರಣಗಳಲ್ಲೂ ಪೊಲೀಸರು ಇದುವರೆಗೂ ನಿಜವಾದ ಆರೋಪಿಗಳನ್ನು ಬಂಧಿಸಿಲ್ಲ ಎಂದು ಹೇಳಿದ್ದಾರೆ.
ದುಷ್ಕರ್ಮಿಗಳು ದಲಿತರ ಮೇಲೆ ಸಿನಿಮೀಯ ರೀತಿ ಹಲ್ಲೆ ಮಾಡಿ, ಕೇವಲ 10 ರಿಂದ 20 ಸಾವಿರ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪೊಲೀಸ್ ಠಾಣೆಗಳೇ ರಾಜಿ ಸಂಧಾನದ ಕೇಂದ್ರಗಳಾಗಿವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧೀನ ಅಧಿಕಾರಿಗಳಿಗೆ ಎಸ್ಪಿ ಅವರು ಆದೇಶಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.
ನಿಯೋಗದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದಯ್ಯ, ಪದಾಧಿಕಾರಿಗಳಾದ ರಾಂಪುರ ನಾಗೇಶ್, ಕೋಟೆ ಕುಮಾರ್, ರುದ್ರೇಶ್, ಶಿವಲಿಂಗಯ್ಯ, ಗುರುಮೂರ್ತಿ, ಚಂದ್ರು, ಉಮೇಶ್, ಚೌಳೂರಪ್ಪ, ವೆಂಕಟೇಶ್, ಪ್ರಸಾದ್, ರಮೇಶ್, ನಾಗಮ್ಮ, ಪ್ರಸನ್ನ, ಭಾಗ್ಯಮ್ಮ, ವೆಂಕಟಮ್ಮ, ಕೃಷ್ಣಪ್ಪ, ನಾಗರಾಜು, ಗುರುಮೂರ್ತಿ, ಚಂದ್ರ, ಗೋವಿಂದ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

