ಮತ್ತೆ ಮರಳು ಅಕ್ರಮ; ಏನು ಅಧಿಕಾರಿಗಳ ಕ್ರಮ?
ಕ.ಪ್ರ.ವಾರ್ತೆ , ರಾಮನಗರ , ಜ.17
ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಸೇರಿದಂತೆ ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಮತ್ತೆ ತಲೆ ಎತ್ತಿದೆ. ದಂಧೆಕೋರರ ಜತೆ ಶಾಮೀಲಾಗಿರುವ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಈಚೆಗೆ ಶಿಂಷಾ ನದಿ ಪಾತ್ರದಲ್ಲಿನ ಅಕ್ರಮ ಮರಳುಗಾರಿಕೆ ವಿರುದ್ಧ ಚನ್ನಪಟ್ಟಣ ಹಾಗೂ ಮದ್ದೂರು ತಾಲೂಕು ಆಡಳಿತದಿಂದ ಜಂಟಿ ಕಾರ್ಯಾಚರಣೆ ನಡೆದಿತ್ತು. ಅದಾಗಿ ಮೂರು ದಿನಕ್ಕೆ ದಂಧೆಕೋರರು ಕೊಪ್ಪರಿಕೆಗಳೊಂದಿಗೆ ನದಿಯಲ್ಲಿ ಮರಳು ದೋಚಲಾರಂಭಿಸಿದ್ದಾರೆ.
ಜಂಟಿ ಕಾರ್ಯಾಚರಣೆ ವೇಳೆ ಮದ್ದೂರು ತಾಲೂಕಿನ ಅಧಿಕಾರಿಗಳು ನದಿಗೆ ಇಳಿದು 15 ಕೊಪ್ಪರಿಕೆಗಳನ್ನು ವಶಪಡಿಸಿಕೊಂಡರೆ, ಕೈಕಟ್ಟಿ ನಿಂತಿದ್ದ ಚನ್ನಪಟ್ಟಣದ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಕೊಪ್ಪರಿಕೆಗಳಲ್ಲಿ ಪಾಲು ಪಡೆದು ಪಲಾಯನ ಮಾಡಿದ್ದರು.
ಕಾರ್ಯಾಚರಣೆ ಮುಂದುವರೆಸಿದ್ದ ಮದ್ದೂರಿನ ಅಧಿಕಾರಿಗಳನ್ನು ಚನ್ನಪಟ್ಟಣ ತಾಲೂಕಿನ ಸರಹದ್ದಿಗೆ ಕಾಲಿಡದಂತೆ ದಂಧೆಕೋರರನ್ನು ಎತ್ತಿ ಕಟ್ಟಿದ್ದರು. ಸರಹದ್ದಿನ ವಿಷಯದಲ್ಲಿ ತಗಾದೆ ಎದುರಾದಾಗ ಮದ್ದೂರು ಅಧಿಕಾರಿಗಳ ಕರೆಯನ್ನು ಚನ್ನಪಟ್ಟಣ ಅಧಿಕಾರಿಗಳು ಸ್ವೀಕರಿಸಿರಲಿಲ್ಲ.
ಮತ್ತೆ ಮರಳು ಲೂಟಿ: ಚನ್ನಪಟ್ಟಣ ವ್ಯಾಪ್ತಿಯ ಇಗ್ಗಲೂರು ಇತರೆಡೆ ಮತ್ತೆ ಹತ್ತಾರು ಕೊಪ್ಪರಿಕೆಗಳನ್ನು ನೀರಿಗೆ ಇಳಿಸಿ ಮರಳು ಲೂಟಿ ಪುನಾರಂಭಿಸಲಾಗಿದೆ. ಕಾಟಾಚಾರಕ್ಕೆ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು ಮತ್ತೆ ಆ ಕಡೆ ಸುಳಿಯದಿರುವುದು ದಂಧೆಕೋರರಿಗೆ ವರದಾನವಾಗಿದೆ.
ಮದ್ದೂರು ತಾಲೂಕಿನ ಹಾಗಲಹಳ್ಳಿ ಕಡೆಯಿಂದ ಕೊಪ್ಪರಿಕೆಗಳನ್ನು ನದಿಗೆ ಇಳಿಸಿ ಮರಳು ತುಂಬಿಕೊಂಡು ಇಗ್ಗಲೂರಿನಲ್ಲಿ ಶೇಖರಿಸಿಕೊಳ್ಳಲಾಗುತ್ತಿದೆ. ಸ್ಥಳೀಯರು ದೂರವಾಣಿ ಕರೆ ಮಾಡಿ ದೂರಿದರೂ ಅಧಿಕಾರಿಗಳು ಕಡೇಪಕ್ಷ ಸ್ಥಳಕ್ಕೆ ಭೇಟಿ ನೀಡುವ ಗೋಜಿಗೆ ಹೋಗಿಲ್ಲ.
ಅಲ್ಲೂ ಪ್ರತಿರೋಧ: ಚನ್ನಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿಯೇ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿ ಕೇಳುತ್ತಿಲ್ಲ. ಆದರೆ, ನೀವೇಕೆ ಅಡ್ಡಿಪಡಿಸುತ್ತೀರಿ ಎಂದು ಮದ್ದೂರು ಸರಹದ್ದಿನ ಮರಳು ದಂಧೆಕೋರರು ಅಲ್ಲಿನ ಅಧಿಕಾರಿಗಳಿಗೆ ತಿರುಗಿ ಬಿದ್ದಿದ್ದಾರೆ.
ಚನ್ನಪಟ್ಟಣ ವ್ಯಾಪ್ತಿಯಲ್ಲಿ ಮರಳುಗಾರಿಕೆ ತಡೆಯೊಡ್ಡದಿದ್ದರೆ ನಾವೂ ಮುಂದುವರೆಸುತ್ತೇವೆ ಎಂದು ಮದ್ದೂರು ತಾಲಕಿನ ಹಾಗಲಹಳ್ಳಿ, ಕೂಳಗೆರೆ, ಬನ್ನಹಳ್ಳಿ, ಮುಡೀನಹಳ್ಳಿ ಮತ್ತಿತರೆಡೆಯ ದಂಧೆಕೋರರು ಅಲ್ಲಿನ ಅಧಿಕಾರಿಗಳಿಗೆ ಸವಾಲು ಹಾಕಿರುವ ನಿದರ್ಶನವೂ ಉಂಟು.
ಸಂಘರ್ಷಕ್ಕೆ ನಾಂದಿ: ಚನ್ನಪಟ್ಟಣ ತಾಲೂಕು ಆಡಳಿತ ಲಂಗು-ಲಗಾಮಿಲ್ಲದೆ ವರ್ತಿಸುತ್ತಿದೆ. ಮರಳು ದಂಧೆಯನ್ನು ಮಟ್ಟ ಹಾಕಿಯೇ ತೀರುವುದಾಗಿ ಅಧಿಕಾರ ವಹಿಸಿಕೊಂಡ ಹೊಸತರಲ್ಲಿ ಶಪಥ ಮಾಡಿದ್ದ ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ತಮ್ಮ ಅಧೀನ ಅಧಿಕಾರಿಗಳ ಆಟಾಟೋಪ ಗಮನಕ್ಕೆ ಬಂದರೂ ಮೌನ ವಹಿಸಿದ್ದಾರೆ.
ಮರಳು ದಂಧೆಕೋರರ ಪರವಾಗಿ ಶಾಸಕರು, ಸಂಸದರು ಒತ್ತಡ ಹೇರುತ್ತಿದ್ದಾರೆ ಎಂದು ಚನ್ನಪಟ್ಟಣದ ಅಧಿಕಾರಿಗಳು ಅಪಪ್ರಚಾರ ನಡೆಸುತ್ತಾ ಸ್ವಹಿತ ಸಾಧಿಸಿಕೊಳ್ಳುತ್ತಿದ್ದಾರೆ. ಈ ಪರಿಣಾಮ ಮದ್ದೂರು ತಾಲೂಕು ಆಡಳಿತ ಹಾಗೂ ಅಲ್ಲಿನ ಮರಳು ದಂಧೆಕೋರರ ನಡುವೆ ಸಂಘರ್ಷದ ವಾತಾವರಣ ಮೂಡಿದೆ.
ವಸೂಲಿ ಬಾಜಿ ಜೋರು: ಮರಳು ಮಾಫಿಯಾದ ಹಿಂದೆ ದೊಡ್ಡ ಜಾಲವೇ ಇದೆ. ನದಿ ಪಾತ್ರವಲ್ಲದೆ ಕಂದಾಯ ಜಮೀನುಗಳನ್ನೂ ಬಗೆದು, ಹಾಳು ಮಾಡುವ ಕೆಲಸವಾಗುತ್ತಿದೆ. ಇಲ್ಲಿ ದಂಧೆಕೋರರಿಗೆ ಸರ್ಕಾರಿ ಅಧಿಕಾರಿಗಳು, ಮರಳು ಸಂಪತ್ತು ಲಭ್ಯವಿರುವ ಜಮೀನು ಮಾಲೀಕರು, ವಾಹನಗಳು ಸಾಗಲು ದಾರಿ ಬಿಟ್ಟುಕೊಟ್ಟ ಭೂ ಮಾಲೀಕರ ಶಾಮೀಲಾತಿ ಇದೆ.
ಒಂದು ಲಾರಿ ಲೋಡ್ ಮರಳು ಶಿಂಷಾ ನದಿ ಪಾತ್ರ ಇಲ್ಲವೇ ಕಂದಾಯ ಜಮೀನಿನಿಂದ ಬೆಂಗಳೂರು ಮುಟ್ಟುವುದಕ್ಕೆ ಕನಿಷ್ಟ 7-8 ಸಾವಿರ ವೆಚ್ಚವಾಗುತ್ತಿದೆ. ಮರಳು ಸಂಪತ್ತು ಇರುವ ಭೂಮಿ ಬೆಲೆ ಪ್ರತಿ ಗುಂಟೆಗೆ 1 ಲಕ್ಷ ದಾಟಿದೆ. ಲಾರಿ ಹಾದು ಹೋಗಬೇಕಾದರೆ ಮಾರ್ಗ ಮಧ್ಯದ ಜಮೀನಿನವರಿಗೆ ತಲಾ 100-200 ಶುಲ್ಕ ಪಾವತಿಸಬೇಕಿದೆ.
ಗ್ರಾಮ ಲೆಕ್ಕಿಗರ ಅಧೀನದಲ್ಲಿ ಕೆಲಸ ಮಾಡುವ ಗ್ರಾಮ ಸಹಾಯಕನಿಂದ ಹಿಡಿದು ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಸಹಿತ ವಿವಿಧ ಇಲಾಖೆ ಉನ್ನತ ಅಧಿಕಾರಿಗಳಿಗೆ ದರ್ಜೆ ಆಧರಿಸಿ ಮಾಮೂಲು ಸಂಗ್ರಹಿಸಿಕೊಡುವ ಮಧ್ಯವರ್ತಿಗಳ ತಂಡ ಕಾರ್ಯನಿರತವಾಗಿದೆ. ಹೀಗಿರುವಾಗ ದಂಧೆಗೆ ಕಡಿವಾಣ ಹೇಗೆತಾನೆ ಸಾಧ್ಯ ಎನ್ನುವ ಪ್ರಶ್ನೆ ಕಾಡುತ್ತಿದೆ.
ಕಣ್ಣೊರೆಸುವ ತಂತ್ರವಷ್ಟೆ!
ಚನ್ನಪಟ್ಟಣ ತಾಲೂಕು ಮಾತ್ರವಲ್ಲದೆ ಇಡೀ ರಾಮನಗರ ಜಿಲ್ಲೆಯಲ್ಲಿ ಅಧಿಕಾರಿಗಳು ಕೇವಲ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ. ಪ್ರಾಕೃತಿಕ ಸಂಪತ್ತಿನ ಲೂಟಿ ತಡೆಗೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ. ಮರಳು ದಂಧೆ ಮಿತಿ ಮೀರಲು ಅಧಿಕಾರಿಗಳ ಕುಮ್ಮಕ್ಕೇ ನೇರ ಕಾರಣ.
-ಸಿ. ಪುಟ್ಟಸ್ವಾಮಿ
ಮುಖಂಡರುರಾಜ್ಯ ರೈತ ಸಂಘ
-ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

