ಬೆಂಗಳೂರು ಗ್ರಾಮಾಂತರ

ಅದಾಲತ್ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ: ಡಿಸಿ

Published On :

ರಾಮನಗರ: ಜಿಲ್ಲಾಡಳಿತದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಪಹಣಿ ತಿದ್ದುಪಡಿ, ಪೌತಿ ಖಾತೆ ಬದಲಾವಣೆ, ಪಿಂಚಣಿ ಅದಾಲತ್ ಜಂಟಿ ಕಾರ್ಯಕ್ರಮಕ್ಕೆ ರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಡಾ. ಡಿ.ಎಸ್.ವಿಶ್ವನಾಥ್ ಶುಕ್ರವಾರ ಚಾಲನೆ ನೀಡಿದರು.  
ಜಿಲ್ಲೆಯ ತಾಲೂಕು ಕಚೇರಿ ಹಾಗೂ ನಾಡಕಚೇರಿಗಳಲ್ಲಿ ಬಾಕಿ ಉಳಿದು ರೈತರನ್ನು ಬಹುವಾಗಿ ಕಾಡುತ್ತಿರುವ ಪಹಣಿ ತಿದ್ದುಪಡಿ, ಪೌತಿ ಖಾತೆಗಳ ಬದಲಾವಣೆ ಮತ್ತು ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿಗಳ ಅದಾಲತ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕಾಲಮಿತಿಯೊಳಗೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.  
ಮೊದಲ ಹಂತದಲ್ಲಿ ಪ್ರತಿ ತಾಲೂಕಿನ ಒಂದೊಂದು ಹೋಬಳಿ ಕೇಂದ್ರದಲ್ಲಿ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಇತರೆಡೆಯೂ ಕಾರ್ಯಕ್ರಮ ವಿಸ್ತರಿಸಲಾಗುವುದು. ಸಾಧ್ಯವಾದಷ್ಟು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಂಡು ಹಿಡಿಯಲಿದ್ದು, ಉಳಿದ ಅರ್ಜಿಗಳನ್ನು ನಿಯಮಾನುಸಾರ 30 ದಿನದಲ್ಲಿ ಪರಿಹರಿಸಲಾಗುವುದು ಎಂದರು.
29 ಸಾವಿರ ಪ್ರಕರಣ ಬಾಕಿ: ಜಿಲ್ಲೆಯಲ್ಲಿ 4.05 ಲಕ್ಷ ಪಹಣಿಗಳಿದ್ದು, ಇದರಲ್ಲಿ 29,508 ಪಹಣಿಗಳು ತಿದ್ದುಪಡಿಗೆ ಬಾಕಿ ಉಳಿದಿವೆ. ರಾಮನಗರ ತಾಲೂಕಿನಲ್ಲಿ 2900, ಚನ್ನಪಟ್ಟಣದಲ್ಲಿ 8700, ಕನಕಪುರದಲ್ಲಿ 9327, ಮಾಗಡಿ ತಾಲೂಕಿನಲ್ಲಿ 8571 ಅರ್ಜಿಗಳು ಬಾಕಿ ಇವೆ. ಇದರೊಟ್ಟಿಗೆ ಪೌತಿ ಖಾತೆ ಬದಲಾವಣೆಯನ್ನೂ ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು.
ಆಂದೋಲನದಲ್ಲಿ ಪಹಣಿ ಮತ್ತು ಖಾತೆ ಪ್ರಕರಣಗಳು ಮಾತ್ರವಲ್ಲದೆ ಸಾಮಾಜಿಕ ಭದ್ರತೆ ಯೋಜನೆಗಳಡಿ ಮಾಸಾಶನ ವಿತರಣೆ ಸಂಬಂಧಿಸಿದ ಅರ್ಜಿ ಸ್ವೀಕರಿಸಿ, ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗಿದೆ ಎಂದರು.
ರೈತರಿಗೆ ವರದಾನ: ಕಂದಾಯ ಇಲಾಖೆಯ ಸಣ್ಣಪುಟ್ಟ ಸಮಸ್ಯೆಗಳಿಗೂ ರೈತರು ತಮ್ಮ ಕೆಲಸ ಬಿಟ್ಟು ಅಮೂಲ್ಯವಾದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇಂಥ ಆಂದೋಲನದ ಮೂಲಕ ಅವರ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವುದು ರೈತರಿಗೆ ವರದಾನ ಎಂದು ಬಣ್ಣಿಸಿದರು.  
ಕಳೆದ ವರ್ಷ ರೈತರೊಬ್ಬರು ತಮ್ಮ ಜಮೀನಿನ ಪಹಣಿ ತಿದ್ದುಪಡಿಗಾಗಿ ಅಲೆದು ಬೇಸತ್ತು ಕಡೆಗೆ ಮಿನಿ ವಿಧಾನಸೌಧದ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ಮಾಧ್ಯಮಗಳಲ್ಲಿ ಗಮನಿಸಿ ಬೇಸರವಾಯಿತು. ಈ ಹಿನ್ನೆಲೆಯಲ್ಲಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.  
ಫೆಬ್ರವರಿಯೊಳಗೆ ಇತ್ಯರ್ಥ: ಆಂದೋಲನದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಫೆಬ್ರವರಿಯೊಳಗೆ ಇತ್ಯರ್ಥಪಡಿಸಲಾಗುವುದು. ಇತರೆಡೆಯೂ ತ್ವರಿತವಾಗಿ ಕಾರ್ಯಕ್ರಮ ಹಮ್ಮಿಕೊಂಡು, ಆದಷ್ಟು ಜರೂರಾಗಿ ಪಹಣಿ ತಿದ್ದುಪಡಿ, ಪೌತಿ ಖಾತೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದರು.  
ಈ ಕಾರ್ಯಕ್ರಮದಲ್ಲಿ ರೈತರು ನೇರವಾಗಿ ಅರ್ಜಿ ಸಲ್ಲಿಸಿ, ತಮ್ಮ ಕೆಲಸ ಮಾಡಿಕೊಳ್ಳಬಹುದು. ಆಂದೋಲನದಲ್ಲಿ ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಪ್ರವೇಶಕ್ಕೆ ಆಸ್ಪದ ನೀಡುವುದಿಲ್ಲ. ಅಂತಹ ಪ್ರಕರಣ ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.  
ಸವಲತ್ತು ವಿತರಣೆ: ಆಂದೋಲನದ ಉದ್ಘಾಟನೆ ಸಮಾರಂಭದಲ್ಲೇ ಜಿಲ್ಲಾಧಿಕಾರಿ ವಿಶ್ವನಾಥ್ ಅವರು ಸಂಧ್ಯಾ ಸುರಕ್ಷಾ ಯೋಜನೆಯ 58, ವಿಧವಾ ವೇತನದ 53, ಮನಸ್ವಿನಿ ವೇತನದ 13 ಫಲಾನುಭವಿಗಳಿಗೆ ಮಾಸಾಶನ ಸವಲತ್ತಿನ ದೃಢೀಕರಣ ಪತ್ರ ವಿತರಿಸಿದರು.
ಪ್ರಭಾರ ಉಪ ವಿಭಾಗಾಧಿಕಾರಿ ಜಯಮಾಧವ್, ಅಪರ ಜಿಲ್ಲಾಧಿಕಾರಿ ಬಸವರಾಜು, ತಹಸೀಲ್ದಾರ್ ಹನುಮಂತರಾಯಪ್ಪ, ಜಿಲ್ಲಾ ಭೂಮಿ ಸಮಾಲೋಚಕ ರಾಜೇಶ್ ಮತ್ತಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.