ಬೆಂಗಳೂರು ಗ್ರಾಮಾಂತರ

ಇಂದು ರೈತಸಂಘದ ಅಬ್ಬೂರು ಗ್ರಾಮಶಾಖೆ ಉದ್ಘಾಟನೆ

Published On :

ಚನ್ನಪಟ್ಟಣ: ರಾಜ್ಯ ರೈತಸಂಘದ ಅಬ್ಬೂರು ಗ್ರಾಮಶಾಖೆಯ ಉದ್ಘಾಟನಾ ಕಾರ್ಯಕ್ರಮದ ಸೋಮವಾರ ಗ್ರಾಮದ  ಶಾಲಾ ಆವರಣದಲ್ಲಿ ನೆರವೇರಲಿದೆ. ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಭಾಗೀಯ ಉಪಾಧ್ಯಕ್ಷ ಎಂ.ರಾಮು, ಜಿ.ಟಿ.ರಾಮಸ್ವಾಮಿ, ರಾಜ್ಯ ಉಪಾಧ್ಯಕ್ಷ ವೀರಸಂಘಯ್ಯ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ತಹಸೀಲ್ದಾರ್ ಕಚೇರಿ ಎದುರು ಧರಣಿ
ಚನ್ನಪಟ್ಟಣ: ಸರ್ಕಾರದ ನಿಷೇದವನ್ನು ಲೆಕ್ಕಿಸದೆ ತಾಲೂಕಿನ ಇಗ್ಗಲೂರು ಸಮೀಪದ ಶಿಂಷಾನದಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಸೋಮುವಾರ ತಾ.ಪಂ. ಮಾಜಿ ಅಧ್ಯಕ್ಷ ಸಿದ್ದರಾಮ ಹೆಗಡೆ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಶಿಂಷಾ ನದಿಯಲ್ಲಿ ಅಪಾರ ಮೌಲ್ಯದ ಮರಳು ಲೂಟಿಯಾಗಿದ್ದು, ಮರಳು ಲೂಟಿಯನ್ನು ತಡೆಯುವಲ್ಲಿ ಜಿಲ್ಲಾಮತ್ತು ತಾಲೂಕು ಆಡಳಿತ ವಿಫಲ ಗೊಂಡಿದೆ. ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಅಕ್ರಮ ಗಣಿಗಾರಿಕೆ ಸಂಪೂರ್ಣವಾಗಿ ನಿಷೇಧ ಗೊಳಿಸುವ ವರೆಗೆ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಬದುಕಿನ ಸಂವೇದನೆ ಇಲ್ಲದ ಶಿಕ್ಷಣ ವ್ಯರ್ಥ: ಟಿ. ಗೋಪಾಲಕೃಷ್ಣ
ದೊಡ್ಡಬಳ್ಳಾಪುರ: ಬದುಕನ್ನು ಪ್ರೀತಿಸುವ ಮನೋಭಾವ ಸೃಷ್ಟಿಸದ ಶಿಕ್ಷಣ ಅರ್ಥಹೀನ. ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೇವಲ ವಿದ್ಯಾವಂತರನ್ನು ಸೃಷ್ಟಿಸುವ ಪ್ರಕ್ರಿಯೆ ನಡೆಯುತ್ತಿದೆಯೇ ವಿನಃ ಬದುಕನ್ನು ಪ್ರೀತಿಸುವ ಮೌಲ್ಯಗಳನ್ನು ಕಲಿಸುತ್ತಿಲ್ಲ ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಟಿ. ಗೋಪಾಲಕೃಷ್ಣ ಅಭಿಪ್ರಾಯಪಟ್ಟರು. ಭಾನುವಾರ ಇಲ್ಲಿನ ಆರ್.ಎಲ್.ಜಾಲಪ್ಪ ಕಲಾ ಮಂದಿರದಲ್ಲಿ ನಡೆದ ಸೌರಭ-2014 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಜೆ.ರಾಜೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಮತ್ತು ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಪಿಎಚ್‌ಡಿ ಪದವಿ ಪಡೆದ ಉಪನ್ಯಾಸಕಿ ಲಕ್ಷ್ಮೀ ಸತೀಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಯುಪಿಯುಸಿ ಪ್ರಾಂಶುಪಾಲ ಎಸ್.ಶ್ರೀನಿವಾಸ, ಎಸ್‌ಡಿಯು ಪ್ರೌಢಶಾಲೆ ಮುಖ್ಯಶಿಕ್ಷಕ ವಿಜಯಕುಮಾರ್ ಇತರರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
101ನೇ ಹೋಮಿಯೋಪತಿ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಹಾಗೂ ಲಯನ್ಸ್ ಸೇವಾ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ 101ನೆಯ ಉಚಿತ ಹೋಮಿಯೋಪತಿ ಶಿಬಿರ ಇಲ್ಲಿನ ಲಯನ್ಸ್ ಸೇವಾ ಭವನದಲ್ಲಿ ಭಾನುವಾರ ಆಯೋಜಿಸಲಾಗಿತ್ತು.   ಶಿಬಿರದ ಉದ್ಘಾಟನೆಯನ್ನು ಕದಿರಿ ಸತ್ಯ ಸಾಯಿ ಹೋಮಿಯೋಪತಿ ಕೇಂದ್ರದ ಡಾ. ಕೃಷ್ಣಂ ಸುಬ್ಬರಾಮಯ್ಯ ನೆರವೇರಿಸಿದರು. ಮುಖ್ಯ ಅತಿಥಿಗಳಾಗ ಲಯನ್ಸ್ ಜಿಲ್ಲಾ ಉಪ ರಾಜ್ಯಪಾಲ ಕೆ.ರಮೇಶ್ ರಾವ್ ಆಗಮಿಸಿದ್ದರು.  ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಆರ್.ನಾಗರಾಜಯ್ಯ ವಹಿಸಿದ್ದರು, ಲಯನ್ಸ್ ಸೇವಾ ಪ್ರತಿಷ್ಠಾನ ಅಧ್ಯಕ್ಷ ಕೆ.ಸಿ.ಲೋಕೇಶ್, ಲಯನೆಸ್ ಸಂಸ್ಥೆ ಅದ್ಯಕ್ಷೆ ಪದ್ಮಾವತಮ್ಮ ಉಪಸ್ಥಿತರಿದ್ದರು.
ದೇವನಹಳ್ಳಿ ಜಿಲ್ಲಾ ಕೇಂದ್ರ ಆಗುವರೆಗೂ ಧರಣಿ
ದೇವನಹಳ್ಳಿ: ರಾಜ್ಯ ಸರ್ಕಾರ ದೇವನಹಳ್ಳಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಅಧಿಕೃತವಾಗಿ  ಘೋಷಣೆ ಮಾಡುವವರೆಗೂ ಇಲ್ಲಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಸೋಮವಾರದಿಂದ ನಿರ್ಧರಿಸಲಾಗಿದೆ ಎಂದು ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರಾದ ಬಿ.ಕೆ.ಶಿವಪ್ಪ, ಆರ್.ರವಿಕುಮಾರ್, ಎ.ಶಿವರಾಮಯ್ಯ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿರುವ ಜಿಲ್ಲಾಧಿಕಾರಿಗಳ ಉಪವಿಭಾಗಾಧಿಕಾರಿಗಳ ಹಾಗೂ ಎಲ್ಲ ಇಲಾಖೆಗಳ ಜಿಲ್ಲಾ ಕಚೇರಿಗಳು ಸ್ಥಳಾಂತರವಾಗುವವರೆಗೂ  ನಿರಂತರ ಧರಣಿ ಸತ್ಯಾಗ್ರಹ ನಡೆಯಲಿದ್ದು ಹೊಸಕೋಟೆ ತಾಲೂಕಿನ ಹಿರಿಯ ರಾಜಕಾರಣಿಗಳಾದ ಸೂ.ರಂ.ರಾಮಯ್ಯ ಉದ್ಘಾಟಿಸಲಿದ್ದು ತಾಲೂಕಿನ ಎಲ್ಲ ಸಂಘ ಸಂಸ್ಥೆಗಳು ಹಂತ ಹಂತವಾಗಿ ಧರಣಿಯಲ್ಲಿ ಭಾಗವಹಿಸಲಿವೆ ಎಂದು ಸಂಘಟಿಕರು ತಿಳಿಸಿದರು. ಎಲ್ಲರ ಸಹಕಾರ ಅಗತ್ಯ ಎಂದರು.
ಬನ್ನೇರುಘಟ್ಟ ಕರಡಿ ಸಾವು
ಆನೇಕಲ್ಲು: ಬನ್ನೇರುಘಟ್ಟ ಜೈವಿಕ ಉದ್ಯನವನ ಕರಡಿ ಸಫಾರಿಯಲ್ಲಿನ ಜೂಲಿಯೆಟ್ (18) ಎಂಬ ಕರಡಿ ಸಾವನ್ನಪ್ಪಿದೆ ಎಂದು ಸಿಸಿಎಫ್ ರಂಗಸ್ವಾಮಿ ತಿಳಿಸಿದ್ದಾರೆ. ಕರಡಿಯನ್ನು ಹಂಪನಕಟ್ಟಿಯಲ್ಲಿ 2007ರಲ್ಲಿ ಕಲಂದರ್‌ಗಳಿಂದ ರಕ್ಷಿಸಿ ತರಲಾಗಿತ್ತು. ಸಾಧಾರಣವಾಗಿ ಕರಡಿಗಳು 14 ರಿಂದ 15 ವರ್ಷ  ಬದುಕುತ್ತವೆ. ಇಲ್ಲಿನ ಉತ್ತಮ ವಾತಾವರಣದಲ್ಲಿ ಹೆಚ್ಚು ಕಾಲ ಬದುಕಿದೆ. ಜೂಲಿಯೆಟ್ ಕರಡಿ ಟಿಬಿ ಕಾಯಿಲೆಯಿಂದ ಬಳಲುತ್ತಿತ್ತು ಎಂದಿದ್ದಾರೆ.
ಮನೆ ಬಾಗಿಲಿಗೆ
ಪಡಿತರ ಚೀಟಿ
ಆನೇಕಲ್ಲು: ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಜವಾಬ್ದಾರಿ ಚುನಾಯಿತ ಪ್ರತಿನಿಧಿಗಳ ಮೇಲಿದೆ. ಪೂರಕವಾಗಿ ಆನೇಕಲ್ ಪಟ್ಟಣದ 23 ವಾರ್ಡುಗಳಿಗೆ ತೆರಳಿ ಪಡಿತರ ಚೀಟಿಗಳನ್ನು ಹಂಚುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಬಿ. ಶಿವಣ್ಣ ತಿಳಿಸಿದ್ದಾರೆ. ಅವರು ಪಟ್ಟಣದ ವಿವಿಧ ವಾರ್ಡುಗಳ ಫಲಾನುಭವಿಗಳಿಗೆ ಚೀಟಿ ವಿತರಿಸಿ ಮಾತನಾಡಿ ಇಚ್ಛಾಶಕ್ತಿ ಇದ್ದಲ್ಲಿ ಹಂತ ಹಂತವಾಗಿ ಎಲ್ಲವನ್ನು ಸಾಧಿಸಬಹುದು. ಪಕ್ಷ ಬೇಧ ಮರೆತು ಎಲ್ಲ ವಾರ್ಡ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಡ್ ಹಂಚಿಕೆ ಮಾಡಲಾಗುತ್ತಿದೆ. ಇದರ ಜೊತೆಗೆ ವಾರ್ಡಿನ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ ಎಂದ ಅವರು ಸ್ವಚ್ಛತೆ ಬೀದಿ ದೀಪ ಮತ್ತು ಕುಡಿಯುವ ನೀರಿನ ವಿತರಣೆಗೆ ಆದ್ಯತೆ ನೀಡಲಾಗುವುದು ಎಂದರು.
ಒಳ ಚರಂಡಿ ವ್ಯವಸ್ಥೆ
ಆನೇಕಲ್ಲು: ಪಟ್ಟಣದ ಕೆಲ ವಾರ್ಡುಗಳಲ್ಲಿ ಒಳ ಚರಂಡಿ ಕಾಮಾಗಾರಿ ಪೂರ್ಣವಾಗಿದ್ದು ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ. ಹಾಲಿ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ರಸ್ತೆ ವಿಭಜಕ ಮತ್ತು ಇಕ್ಕೆಲಗಳಲ್ಲಿ ಬೆಳಕು ಚೆಲ್ಲುವ ವಿದ್ಯುತ್ ಕಂಭ ಮತ್ತು ದೀಪ ಅಳವಡಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.