ನಂದಗುಡಿ ಸುತ್ತ ಅಕ್ರಮ ಕ್ವಾರಿಗಳ ಆರ್ಭಟ
ಸೂಲಿಬೆಲೆ: ಕಳ್ಳಭಟ್ಟಿ, ಫಿಲ್ಟರ್ ಮರಳುಗಾರಿಕೆಯಿಂದ ಕುಖ್ಯಾತಿಯನ್ನು ಹೊಂದಿರುವ ನಂದಗುಡಿ ಹೋಬಳಿ ಸುತ್ತ ರಾಜಾರೋಷವಾಗಿ ಅಕ್ರಮ ಕಲ್ಲು ಗಣಿಗಾರಿಕೆಯ ಕ್ವಾರಿಗಳ ಆರ್ಭಟ ಹೆಚ್ಚಾಗಿದ್ದು, ಇವುಗಳಿಂದ ಉಂಟಾಗುತ್ತಿರುವ ತೊಂದರೆಯಿಂದ ಸುತ್ತಮುತ್ತಲ್ಲಿನ ಗ್ರಾಮಸ್ಥರಿಗೆ ನೆಮ್ಮದಿಯಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕ್ವಾರಿಗಳ ಆರ್ಭಟ ಹೆಚ್ಚಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕಣ್ಣು ಮುಚ್ಚಿಕುಳಿತಿದೆ ಎಂಬ ಆರೋಪ ನಂದಗುಡಿ ಭಾಗದ ಹಳ್ಳಿಗಳಿಂದ ಕೇಳಿ ಬರುತ್ತಿದ್ದು, ಜನ ಸಾಮಾನ್ಯರಿಗಂತೂ ಪ್ರತಿನಿತ್ಯ ಕ್ವಾರಿಗಳ ಶಬ್ಬಕ್ಕೆ ನಡಗುವಂತಾಗಿದೆ.
ನಂದಗುಡಿ ಹೋಳಿಯ ಚೊಕ್ಕಸಂದ್ರ, ಮುತ್ತಗದಹಳ್ಳಿಕೊಂಡರಹಳ್ಳಿ, ದಿನ್ನಹಳ್ಳಿ ಮೊದಲಾದ ಗ್ರಾಮಗಳ ಸುತ್ತ ಇರುವ ಸರ್ಕಾರಿ ಜಮೀನನಲ್ಲಿ ಕಲ್ಲುಗಣಿಗಾರಿಗೆ ಕಳೆದ ಕೆಲ ತಿಂಗಳಿಂದ ರಾಜಾರೋಷವಾಗಿ ನಡೆಯುತ್ತಿದೆ. ಬಂಡೆಗಳನ್ನು ಸಿಡಿಸುವ ತೀವ್ರತೆಗೆ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಸಣ್ಣ ಗಾತ್ರದ ಕಲ್ಲುಗಳು ದೂರದ ಪ್ರದೇಶಕ್ಕೆ ಹಾರಿ ಕೃಷಿ, ವ್ಯವಸಾಯ ಭೂಮಿಗಳಲ್ಲಿ ಬೀಳುತ್ತಿರುವ ಕಾರಣ ಕೃಷಿ ಚಟುವಟಿಕೆಗಳಿಗೂ ಸಮಸ್ಯೆಯಾಗಿ ಪರಿಣಿಮಿಸಿದೆ. ಹೊತ್ತಿಲ್ಲದ ಹೊತ್ತಿನಲ್ಲಿ ಬಂಡೆಗಳನ್ನು ಸ್ಫೋಟಿಸುತ್ತಿದ್ದು ಶಬ್ದ ಮಾಲಿನ್ಯಕ್ಕೆ ಜನ ನೆಮ್ಮದಿಯನ್ನು ಕಳೆದುಕೊಳ್ಳುವಂತಾಗಿದೆ. ಸಂಜೆ 6ಕ್ಕೆ ಶುರುವಾಗುವ ಬಂಡೆ ಸಿಡಿಸುವ ಕಾರ್ಯ ರಾತ್ರಿ ಪೂರ್ತಿ ನಡೆಯುತ್ತಿರುತ್ತದೆ. ಕ್ವಾರಿಯಿಂದ ಜಲ್ಲಿಯನ್ನು ತೆಗೆಯಲು ಸಣ್ಣ ಪ್ರಮಾಣದಿಂದ ಹಿಡಿದ ದೊಡ್ಡ ಪ್ರಮಾಣದವರಿಗೂ ಭಾರಿ ಪ್ರಮಾಣದ ಸ್ಫೋಟಕಗಳನ್ನು ಸಿಡಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ಪಾತಾಳಕ್ಕಿಳಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಣ್ಣು ಮುಚ್ಚಿ ಕುಳಿತ ಆಡಳಿತ: ನಂದಗುಡಿ ಸುತ್ತಮುತ್ತಲಿನ ಹತ್ತಾರು ಎಕರೆ ಸರ್ಕಾರಿ ಜಮೀನಿನಲ್ಲಿ ರಾಜಾರೋಷವಾಗಿ ಬಂಡೆಗಳನ್ನು ಸಿಡಿಸುವ ಕಾರ್ಯ ನಡೆಯುತ್ತಿದ್ದರೂ ಯಾವುದೇ ಇಲಾಖೆ ಅಧಿಕಾರಿಗಳು ಇತ್ತ ತಲೆ ಹಾಕಿ ಇದರ ನಿಯಂತ್ರಣಕ್ಕೆ ಹಾಗೂ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ಕೇಳಿ ಪರಿಹರಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಎರಡು ವರ್ಷದ ಹಿಂದೆ ಕಲ್ಲು ಬಡೆದು ಕನಕಮ್ಮ ಎಂಬಾಕೆ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದಳು. ಕ್ವಾರಿಗಳ ಹಗಲು ದರೋಡೆಗೆ ಅಧಿಕಾರಿಗಳೇ ಸಾಥ್ ನೀಡಿರುವ ಸಂಶಯವಿದೆ. ಇಲ್ಲದಿದ್ದರೇ ಇದರ ನಿಯಂತ್ರಣಕ್ಕೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಸರ್ಕಾರಿ ಜಮೀನಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಕಾನೂನು ಕ್ರಮ ಕೈಗೊಂಡು ನಿಯಂತ್ರಣಕ್ಕೆ ಪ್ರಯತ್ನ ನಡೆಸಲಾಗುವುದು. ಅಕ್ರಮದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
- ಕುಮಾರಸ್ವಾಮಿ, ತಹಸೀಲ್ದಾರ್, ಹೊಸಕೋಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

