ಬೆಂಗಳೂರು ಗ್ರಾಮಾಂತರ

ಪೋಲಿಯೊ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವಿಲ್ಲ

Published On :

ಕ.ಪ್ರ. ವಾರ್ತೆ ,  ರಾಮನಗರ  ,  ಜ. 19
ಭಾರತದಲ್ಲಿ ಕಳೆದ ಮೂರು ವರ್ಷದಿಂದ ಯಾವುದೇ ಹೊಸ ಪೋಲಿಯೊ ಪ್ರಕರಣ ವರದಿಯಾಗಿಲ್ಲದ ಕಾರಣ ವಿಶ್ವ ಆರೋಗ್ಯ ಸಂಸ್ಥೆಯು ಪೋಲಿಯೊ ಪೀಡಿತ ರಾಷ್ಟ್ರಗಳ ಪಟ್ಟಿಯಿಂದ ಭಾರತವನ್ನು ತೆಗೆದು ಹಾಕಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ.ರಾಜು ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ನಮ್ಮ ರಾಷ್ಟ್ರ ಹಾಗೂ ರಾಜ್ಯದಲ್ಲಿ ಒಂದು ಮಗುವೂ ಪೋಲಿಯೊಗೆ ತುತ್ತಾಗಬಾರದೆಂದು ಭಾರತ ಸರ್ಕಾರವು ಪೋಲಿಯೊ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಲ್ಲಾ ಮಕ್ಕಳಿಗೆ ಒಂದೇ ದಿನ ಪೋಲಿಯೊ ಲಸಿಕೆ ಹಾಕುವುದೇ ಇಂದಿನ ಪೋಲಿಯೊ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಪ್ರತಿವರ್ಷದಂತೆ ಈ ವರ್ಷವೂ ರಾಜ್ಯದಲ್ಲಿ ಜ.19ರಂದು ಮೊದಲ ಹಾಗೂ ಫೆ.23ರಂದು 2ನೇ ಸುತ್ತಿನಲ್ಲಿ ರಾಜ್ಯಾದ್ಯಂತ 5 ವರ್ಷದೊಳಗಿನ 75 ಲಕ್ಷ ಮಕ್ಕಳಿಗೆ  ಲಸಿಕೆ ಹಾಕಲು ವ್ಯಾಪಕ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಘುನಾಥ್ ತಿಳಿಸಿದರು.
ಗುರಿ: ಪ್ರಥಮ ಹಂತದ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯ 461 ಅಲೆಮಾರಿ ಕುಟುಂಬಗಳ ಮಕ್ಕಳು ಹಾಗೂ 120310 ಒಂದೆಡೆ ವಾಸಿಸುವ ಮಕ್ಕಳು ಸೇರಿದಂತೆ ಐದು ವರ್ಷದೊಳಗಿನ ಒಟ್ಟು 120771 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟಾರೆ 541 ಪೋಲಿಯೊ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ರಾಮನಗರದಲ್ಲಿ 134, ಕನಕಪುರದಲ್ಲಿ 176, ಮಾಗಡಿಯಲ್ಲಿ 91, ಹಾಗೂ ಚನ್ನಪಟ್ಟಣ 140 ಬೂತ್‌ಗಳಿವೆ. ಜತೆಗೆ 23 ತಾತ್ಕಾಲಿಕ ಕೇಂದ್ರಗಳನ್ನು ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ತೆರೆಯಲಾಗಿದ್ದು, 8 ಸಂಚಾರಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಾರ್ಯಕ್ಕಾಗಿ 2112 ಕಾರ್ಯಕರ್ತರು ಹಾಗೂ 108 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ವಿವರಿಸಿದರು.
5 ವರ್ಷದೊಳಗಿನ ಮಗುವಿಗೆ ಈ ಹಿಂದೆ ಎಷ್ಟೇ ಬಾರಿ ಪೋಲಿಯೊ ಲಸಿಕೆ ಹಾಕಿಸಿದ್ದರೂ ಸಹ ಮತ್ತೆ ಈ ವರ್ಷದಲ್ಲಿ 2 ದಿನ ನಡೆಯುವ  ಕಾರ್ಯಕ್ರಮದಲ್ಲಿ ನಿಗದಿಪಡಿಸಿದ ಬೂತ್‌ಗಳಿಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಕರೆ ನೀಡಿದರು.
ಸತ್ವಯುತ ಲಸಿಕೆ: ಗ್ರಾಮೀಣ ಪ್ರದೇಶದಲ್ಲಿ ಎರಡು ಹಾಗೂ ನಗರ ಪ್ರದೇಶದಲ್ಲಿ ಮೂರು ದಿನಗಳಲ್ಲಿ ಮನೆಮನೆಗೆ ತೆರಳಿ ಲಸಿಕೆ ಹಾಕದಿರುವ ಮಕ್ಕಳನ್ನು ಗುರುತಿಸಿ ಲಸಿಕೆ ಹಾಗಕಾಲುಗುವುದು. ಸತ್ವಯುತವಾದ ಲಸಿಕೆ ನೀಡಲು ಎಲ್ಲಾ ಹಂತದಲ್ಲಿಯೂ ಶೀತಲ ಸರಪಣಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂದು ರಘುನಾಥ್  ಹೇಳಿದರು.
ಕಾರ್ಯಕ್ರಮದಲ್ಲಿ ರಾಮನಗರ ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಜಿ.ಚಂದ್ರಶೇಖರ್, ರೋಟರಿಯನ್‌ಗಳಾದ ಕುಮಾರಸ್ವಾಮಿ, ಎಚ್.ಪಿ. ಮಹಾಲಿಂಗಯ್ಯ, ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.