ಎತ್ತಿನಹೊಳೆ ವಿರುದ್ಧ ಹೋರಾಟದ ಕಹಳೆ...
ದೊಡ್ಡಬಳ್ಳಾಪುರ: ಯಾರು ಏನೇ ಟೀಕೆ-ಟಿಪ್ಪಣಿ ಮಾಡಿದರೂ ಎತ್ತಿನಹೊಳೆ ಯೋಜನೆ ಕೈಬಿಡಲ್ಲ ಎಂದಿರುವ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಬಯಲು ಸೀಮೆಯ ಶಾಶ್ವತ ನೀರಾವರಿ ಹೋರಾಟ ಸಮಿತಿ ಹೋರಾಟದ ಕಹಳೆ ಮೊಳಗಿಸಿದೆ.
ಜ.31ರಂದು ಎತ್ತಿನಹೊಳೆಗೆ ಶಿಲಾನ್ಯಾಸ ನಡೆಸುವ ಸಿದ್ಧತೆಯಲ್ಲಿರುವ ಹಿನ್ನೆಲೆಯಲ್ಲಿ ಜ.28ರಂದು ಬಯಲುಸೀಮೆಯ ಎಲ್ಲ 11 ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಅವೈಜ್ಞಾನಿಕ ಯೋಜನೆ ಕೈಬಿಟ್ಟು, ಶಾಶ್ವತ ನೀರಾವರಿಗೆ ಪರಮಶಿವಯ್ಯ ವರದಿ ಜಾರಿಗೊಳಿಸುವಂತೆ ಒತ್ತಾಯಿಸಲಾಗುವುದು ಎಂದು ಮಾಜಿ ಶಾಸಕ, ನೀರಾವರಿ ಹೋರಾಟಗಾರ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಮಂಗಳವಾರ ನಡೆದ ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸುವ ನಿಟ್ಟಿನಲ್ಲಿ ರಾಜಕಾರಣಿಗಳು ಹೊಣೆಯಾಧಾರಿತ ಕರ್ತವ್ಯ ನಿರ್ವಹಿಸಬೇಕು. ಭಿನ್ನ ಆಲೋಚನೆಗಳ ಮೂಲಕ ಹೋರಾಟಗಳ ದಿಕ್ಕು ತಪ್ಪಿಸುವ ಪ್ರಯತ್ನ ಕೈಬಿಟ್ಟು ಜನರ ಒತ್ತಾಯಕ್ಕೆ ಬೆಲೆ ಕೊಡಬೇಕು. ಶಾಶ್ವತ ನೀರಾವರಿ ದನಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕುತಂತ್ರಗಳು ನಡೆಯುತ್ತಿವೆ.
ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಎತ್ತಿನಹೊಳೆ ಎಂಬ ಅವೈಜ್ಞಾನಿಕ ಯೋಜನೆ ಮುಂದಿಟ್ಟುಕೊಂಡು ಜನರ ದಿಕ್ಕುತಪ್ಪಿಸುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಎತ್ತಿನಹೊಳೆ ಬಾಯಿ ಮಾತಿನಲ್ಲಿ ಮಾತ್ರ ಅನುಷ್ಠಾನಗೊಂಡಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳು, ಸಮಸ್ಯೆಗಳನ್ನು ಬಂಡವಾಳ ಮಾಡಿಕೊಳ್ಳುವುದು ತಪ್ಪು. ಬರಪೀಡಿತ 6 ಜಿಲ್ಲೆಗಳ 2 ಕೋಟಿ ಜನರಿಗೆ ಕುಡಿಯುವ ನೀರು, ಕೃಷಿಗೆ ನೀರು ಕೊಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಪರಿಣಾಮಕಾರಿಯಾಗಬಲ್ಲ ಯೋಜನೆ ಜಾರಿಗೆ ತರಲು ಉಭಯ ಸದನಗಳಲ್ಲಿ ಚರ್ಚೆಯಾದರೂ ಪ್ರಯೋಜನವಾಗಿಲ್ಲ. ಕೂಡಲೇ ಪರಮಶಿವಯ್ಯ ವರದಿ ಜಾರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಪಂಚವಾರ್ಷಿಕ ಯೋಜನೆ (2013-18)ರಲ್ಲಿ ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಒತ್ತಾಯಿಸಬೇಕು. ನೀರಾವರಿ ಯೋಜನೆಯ ಪ್ರಸ್ತಾವನೆಯನ್ನು ಕೂಡಲೇ ಕೇಂದ್ರಕ್ಕೆ ರವಾನಿಸಬೇಕು ಎಂದು ಆಗ್ರಹಿಸಿದರು.
ಪರಮಶಿವಯ್ಯ ವರದಿ ಜಾರಿಗೆ ಬರಲಿ: ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಶಾಶ್ವತ ನೀರಾವರಿ ಯೋಜನೆಗೆ ನಮ್ಮ ಬೆಂಬಲ ಇದೆ. ಎತ್ತಿನಹೊಳೆಯಿಂದ ತ್ವರಿತಗತಿಯಲ್ಲಿ ನೀರು ಸಿಗುವ ಅವಕಾಶವಿದೆ. ಇದಕ್ಕೆ ವಿರೋಧ ಬೇಡ. ಆದರೆ ಪರಮಶಿವಯ್ಯವರದಿ ಜಾರಿಗೆ ಒತ್ತಾಯಿಸೋಣ ಎಂದರು.
ಸಭೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರಾದ ಆರ್. ಚಂದ್ರತೇಜಸ್ವಿ, ಡಾ.ಸಿ.ಎಸ್.ಶ್ರೀನಿವಾಸ್, ತ.ನ.ಪ್ರಭುದೇವ್, ಹೊನ್ನಾಘಟ್ಟ ಮಹೇಶ್, ನಾಗಸಂದ್ರಪ್ರಸನ್ನ, ಡಾ.ಸುಲೋಚನಮ್ಮ ವೆಂಕಟರೆಡ್ಡಿ, ಸಂಜೀವನಾಯಕ್, ಟಿ.ಜಿ.ಮಂಜುನಾಥ್, ಬಿ.ಜಿ.ಹೇಮಂತರಾಜು, ಹ.ರಾಮಕೃಷ್ಣ, ಆಂಜನೇಯ, ಡಿ.ವಿ.ಅಶ್ವತ್ಥಪ್ಪ, ಶಿವಕುಮಾರ್, ಡಾ.ವಿಜಯಕುಮಾರ್, ಡಾ.ನಾರಾಯಣ್, ರಾಜುಸಣ್ಣಕ್ಕಿ ಸೇರಿದಂತೆ ಸಮಿತಿಯ ಹೋಬಳಿ ಘಟಕಗಳ ಮುಖಂಡರು, ತಾಲೂಕು ಮತ್ತು ನಗರ ಘಟಕದ ಕಾರ್ಯಕರ್ತರು, ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಮುಖಂಡರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

