ಮಹಿಳೆಯರಿಗೆ ಶೇ.50ರಷ್ಟು ರಾಜಕೀಯ ಮೀಸಲು
ಕ.ಪ್ರ.ವಾರ್ತೆ ರಾಮನಗರ ಜ.21
ನಮ್ಮ ಸಂವಿಧಾನದ ಅಶಯದಂತೆ ಮಹಿಳೆಯರಿಗೆ ಶೇಕಡ 50ರಷ್ಟು ರಾಜಕೀಯ ಮೀಸಲಾತಿ ಲಭಿಸಬೇಕಿದೆ. ಈ ನಿಟ್ಟಿನಲ್ಲಿ ಸಂಘಟಿತ ಹೋರಾಟ ಅಗತ್ಯ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
ಸ್ಪಂದನ ಸಂಘಟನೆ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ನಡೆದ ರಾಜಕಾರಣದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲು ಮಸೂದೆ ಅಂಗೀಕಾರಕ್ಕೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.
ಜಾಗೃತಿ ಮೂಡಿಸಿ: ರಾಜ್ಯ ಮತ್ತು ಕೇಂದ್ರ ಸರ್ಕಾರವು ಮಹಿಳಾಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳ ಬಗ್ಗೆ ಜಾಗೃತಿ ಮೂಡಿಸಿ, ಅರ್ಹ ಮಹಿಳೆಯರಿಗೆ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲೂ ಪ್ರಯತ್ನ ಆಗಬೇಕಿದೆ ಎಂದು ಅವರು ಸಲಹೆ ನೀಡಿದರು.
ನಮ್ಮ ನೆಲದಲ್ಲಿ ಮಹಿಳಾ ಪ್ರಧಾನ ಕುಟುಂಬ ವ್ಯವಸ್ಥೆಯೇ ಇತ್ತೆನ್ನುವುದನ್ನು ಇತಿಹಾಸ ಹೇಳುತ್ತದೆ. ಕಾಲಕ್ರಮೇಣ ಪುರುಷ ಪ್ರಧಾನ ವ್ಯವಸ್ಥೆ ಜಾರಿಗೆ ಬಂದಿದೆ. ಇಂದಿಗೂ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಲೇ ಇದ್ದಾರೆ ಎಂದು ಅವರು ವಿಷಾದಿಸಿದರು.
ಬಾಪುಲೆ, ಅಂಬೇಡ್ಕರ್, ರಾಜಾರಾಮ್ ಮೋಹನರಾಯ್ ಅವರಂತಹ ಸಮಾಜ ಸುಧಾರಕರ ಹೋರಾಟದ ಫಲವಾಗಿ ಸತಿಸಹಗಮನ ಪದ್ಧತಿ ನಿರ್ಮೂಲನೆ ಆಗಿದೆ. ಹೆಣ್ಣಿಗೂ ಶಿಕ್ಷಣ ಕಲಿಕೆಯ ಅವಕಾಶ ದೊರೆತು, ಪುರುಷರಿಗೆ ಪೈಪೋಟಿ ಒಡ್ಡುವಂತಹ ಕಾಲ ಬಂದಿದೆ ಎಂದು ಅವರು ಬಣ್ಣಿಸಿದರು.
ಮಹಿಳೆಯರಿಂದ ಸುಧಾರಣೆ: ದೇಶದಲ್ಲಿ ದಿನನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಶಿಕ್ಷಣದಲ್ಲಿ ಖಾಸಗೀಕರಣ ಹೆಚ್ಚುತ್ತಿದ್ದು, ಬಡಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದೆಲ್ಲಕ್ಕೂ ಮಹಿಳೆಯರ ಕೈಗೆ ಆಡಳಿತ ನೀಡುವುದೊಂದೇ ಪರಿಹಾರ ಎಂದು ಸಿಐಟಿಯು ಮುಖಂಡ ಮಹ್ಮದ್ ಮುಖ್ದಂ ತಿಳಿಸಿದರು.
ದೇಶವನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳಿಗೆ ನಮ್ಮನ್ನು ಆಳುವ ಪಕ್ಷಗಳೇ ಕಾರಣವಾಗಿವೆ. ರಾಜಕೀಯ ಪಕ್ಷಗಳು ಮಹಿಳಾ ವಿರೋಧಿ ಧೋರಣೆ ತಳೆದಿವೆ. ಹೀಗಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಮಹಿಳೆಯರು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂದು ಅವರು ಹೇಳಿದರು. ಸುಜಾತ, ಮೇರಿ, ಲತಾ, ನಿರ್ಮಲ ಮತ್ತಿತರರು ಭಾಗವಹಿಸಿದ್ದರು.
ಕಡೇ ಪಕ್ಷ ಶೇ. 33ರಷ್ಟು ನೀಡಲು ಒತ್ತಾಯ
ದೇಶದ ಜನ ಸಂಖ್ಯೆಯಲ್ಲಿ ಮಹಿಳೆಯರು ಅರ್ಧದಷ್ಟಿದ್ದಾರೆ. ಅವರಿಗೆ ಶೇಕಡ 50ರಷ್ಟು ಅಲ್ಲದಿದ್ದರೂ ಶೇಕಡ 33ರಷ್ಟು ರಾಜಕೀಯ ಮೀಸಲಾತಿಯನ್ನಾದರೂ ಕಲ್ಪಿಸಲೇಬೇಕು.
ಈ ವಿಷಯದಲ್ಲಿ ಕೆಲ ಪಕ್ಷಗಳ ಅಪಸ್ವರ ನಾಚಿಗೇಡಿನ ಸಂಗತಿ ಮತ್ತು ಸಂವಿಧಾನ ವಿರೋಧಿ ನಿಲುವು ಎಂದು ಅವರು ಟೀಕಿಸಿದರು. ಸರ್ಕಾರಿ, ಖಾಸಗಿ ಔದ್ಯೋಗಿಕ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯನ್ನು ತಡೆಗಟ್ಟಲು ಕಾನೂನಿನಿಂದಷ್ಟೇ ಸಾಧ್ಯವಿಲ್ಲ. ಮಹಿಳೆಯರು ಜಾಗೃತರಾಗಿ ಸಂಘಟಿತ ಹೋರಾಟ ನಡೆಸುವುದೂ ಅಗತ್ಯ ಎಂದು ಶ್ರೀನಿವಾಸ್ಪ್ ಪ್ರತಿಪಾದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

