ಹೇಮಾವತಿ ಯೋಜನೆ; ಶೀಘ್ರ ಸಿಹಿ ಸುದ್ದಿ
ಜಾಬ್ಕಾರ್ಡ್ ಹೊಂದಿದ ಎಲ್ಲರಿಗೂ ಸವಲತ್ತು ನೀಡಿ: ಸಂಸದ ಡಿ.ಕೆ.ಸುರೇಶ್
ಕನ್ನಡಪ್ರಭ ವಾರ್ತೆ ಮಾಗಡಿ ಜ.22
ಹತ್ತಾರು ವರ್ಷಗಳ ರೈತರ ಮಹತ್ವಾಕಾಂಕ್ಷೆಯ ಹೇಮಾವತಿ ನೀರಾವರಿ ಯೋಜನೆ ಕುರಿತಂತೆ ಅತಿ ಶೀಘ್ರದಲ್ಲಿಯೇ ಸಿಹಿ ಸುದ್ದಿ ಪ್ರಕಟಿಸುವುದಾಗಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಅವರು ತಿಪ್ಪಸಂದ್ರ ಹೋಬಳಿ ಗ್ರಾಮ ಸಂದರ್ಶನ ವೇಳೆ ರೈತರನ್ನುದ್ದೇಶಿಸಿ ಮಾತನಾಡಿ, ಹೇಮಾವತಿ ನೀರಾವರಿ ಯೋಜನೆಯ ಸರ್ವೆ ಕಾರ್ಯ ಮುಗಿದು, ಡಿಪಿಆರ್ ಸಹ ಸಲ್ಲಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರವು ಯೋಜನೆಯ ಕುರಿತು ಇನ್ನು 20 ದಿನಗಳ ಒಳಗಾಗಿ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ರೈತರು ಹೆಚ್ಚಿನ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದು, ರಾಮನಗರ ಜಿಲ್ಲೆಯವರೆ ಆದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದ್ದೇನೆ. ತಿಪ್ಪಸಂದ್ರ ಹೋಬಳಿಗೆ 2 ವಿದ್ಯುತ್ ಸಬ್ ಸ್ಟೇಷನ್ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಣ ಕಟ್ಟದೆ ಅಕ್ರಮ ಪಂಪ್ಸೆಟ್ ಹೊಂದಿರುವವರಿಗೆ ಮೂರು ತಿಂಗಳೊಳಗಾಗಿ ಹಣ ಕಟ್ಟಿಸಿ ಸಕ್ರಮ ಮಾಡಿಕೊಡುವುದಾಗಿ ಭರವಸೆ ನೀಡಿದ ಸಂಸದರು, 80 ವರ್ಷ ಮೇಲ್ಪಟ್ಟ ವಯೋವದ್ಧರಿಗೆ ಸರ್ಕಾರ 700 ಮಾಸಾಶನ ಮಂಜೂರಾತಿ ನೀಡಿದೆ.
ಅದೇ ರೀತಿ 60 ವರ್ಷ ತುಂಬಿದವರಿಗೂ 400 ಮಾಸಾಶನ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ಗೆ ಸೂಚಿಸಿದ್ದೇನೆ. ಸರ್ಕಾರಿ ಗೋಮಾಳವನ್ನು ಉಳಿಸುವಂತೆ ಆದೇಶಿಸಿದರು.
ಜಾಬ್ಕಾರ್ಡ್ ಹೊಂದಿದ ಎಲ್ಲರಿಗೂ ಸರ್ಕಾರದ ಸವಲತ್ತು ನೀಡಿ. ಯಾರು ಬಂದು ಏನು ಕೇಳಿದರೂ ಸರ್ಕಾರದ ಸವಲತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಭೂಮಿ ತಂತ್ರಜ್ಞಾನದಿಂದ ಆಗಿರುವ ತಪ್ಪಿಗೆ ರೈತರು ತಮ್ಮ ಭೂಮಿಯ ಪಹಣಿ ತಿದ್ದುಪಡಿ ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆ ಕುರಿತಂತೆ ಕಂದಾಯ ಸಚಿವರಲ್ಲಿ ಚರ್ಚಿಸಿದ್ದು, ಖಾತಾ ಆಂದೋಲನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಸವಲತ್ತುಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಜನತೆಗೆ ತಲುಪಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿರುವುದಾಗಿ ತಿಳಿಸಿದರು.
ಅಧಿಕಾರಿಗಳೇ ರೈತರ ಹೊಟ್ಟೆ ಉರಿಸಬೇಡಿ. ಕಳೆದ ಮೂರು ವರ್ಷಗಳಿಂದಲೂ ಉತ್ತಮ ಮಳೆ ಬೀಳದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಸಮರ್ಪಕವಾಗಿ ನೀರು ಪೂರೈಕೆ ಮಾಡದಿದ್ದರೆ ಹೆಂಗಸರೇ ಅಧಿಕಾರಿಗಳನ್ನು ಹಿಡಿದು ಕಟ್ಟಿ ಹಾಕುವ ಕಾಲ ದೂರವಿಲ್ಲ. ಎಂಜಿನಿಯರ್ಗಳು ಕಚೇರಿಯಿಂದ ಗ್ರಾಮಗಳಿಗೆ ತೆರಳಿ ನೀರಿನ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಇದೇ ವೇಳೆ ಹೊನ್ನಾಪುರ, ವಿರುಪಾಪುರ, ಚಿಕ್ಕಹಳ್ಳಿ, ಬಸವನಪಾಳ್ಯ, ಗಂಗೋನಹಳ್ಳಿ, ಸಣ್ಣೇನಹಳ್ಳಿ, ತಾವರೆಕೆರೆ, ಮಾಯಸಂದ್ರ, ಹುಳ್ಳೇನಹಳ್ಳಿ, ಹೆಬ್ಬಳಲು, ಅಡಲಿಂಗನಹಳ್ಳಿ, ಸಂಕೀಘಟ್ಟ, ಹಳೇಲಾಯ, ನೇರಳೇಕೆರೆ, ಪಾಳ್ಯದಹಳ್ಳಿ, ತಿಪ್ಪಸಂದ್ರ, ಬಗಿನಗೆರೆ ಗ್ರಾಮಗಳಿಗೆ ತೆರಳಿ ಗ್ರಾಮ ಸಂದರ್ಶನ ನಡೆಸಿದರು.
ನೂರಾರು ರೈತರು, ಮಹಿಳೆಯರು ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸಿದರು. ಸಂಸದ ಸುರೇಶ್ ಅವರು ಅರ್ಜಿ ಸ್ವಿಕರಿಸಿ ದೂರವಾಣಿ ಸಂಖ್ಯೆ ಪಡೆದು ಪರಿಹಾರ ಒದಗಿಸುವ ಭರವಸೆ ನೀಡಿದರು.
ಕೆಪಿಸಿಸಿ ಸದಸ್ಯ ಎ.ಮಂಜು, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಕಾರ್ಯದರ್ಶಿ ಬಿ.ಎಸ್.ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ರೇವಣ್ಣ, ಕೆ.ಎಚ್.ಕೃಷ್ಣಮೂರ್ತಿ, ಕಮಲಮ್ಮ, ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್, ಹುಳ್ಳೇನಹಳ್ಳಿ ಗಿರಿಯಣ್ಣ, ಬಲರಾಮು, ದಕ್ಷಿಣಮೂರ್ತಿ, ಬಾಹುಬಲಿ, ಆಂಜನಪ್ಪ, ಸಾಕಮ್ಮ, ರಿಯಾಜ್ ರಹಮತ್, ಸಬೀನಾಬಾನು, ತಹಸೀಲ್ದಾರ್ ಶಿವಕುಮಾರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

