ಬೆಂಗಳೂರು ಗ್ರಾಮಾಂತರ

ಮೊಯ್ಲಿ ಮುದ್ದೇನಹಳ್ಳಿ ಪ್ರವೇಶಿಸಲು ಬಿಡಲ್ಲ

Published On :

ದೊಡ್ಡಬಳ್ಳಾಪುರ: ಕೇಂದ್ರ ಸಚಿವ ವೀರಪ್ಪಮೊಯ್ಲಿ ಯಾವುದೇ ಕಾರಣಕ್ಕೂ ಮುದ್ದೇನಹಳ್ಳಿ ಪ್ರವೇಶಿಸಲು ಬಿಡಲ್ಲ. ಅಲ್ಲಿ ಅವರು ಜ.31ರಂದು ಎತ್ತಿನಹೊಳೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಅವಕಾಶ ಕೊಡಲ್ಲ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಆಂಜನೇಯರೆಡ್ಡಿ, ಮೊಯ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಕಾರ್ಯಕ್ರಮ ರೂಪಿಸಿದರೂ ಅದನ್ನು ಭೇದಿಸುವುದು ಹೋರಾಟಗಾರರು ಮತ್ತು ಜನರಿಗೆ ಗೊತ್ತು ಎಂದಿದ್ದಾರೆ.
ಬದ್ಧತೆ ತೋರಿ: ಕೆಲ ಸ್ಥಳೀಯ ರಾಜಕಾರಣಿಗಳು ಎತ್ತಿನಹೊಳೆ ಯೋಜನೆಗೆ ಬೆಂಬಲಿಸಿ, ನಾವೂ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲಿಸುತ್ತೇವೆ. ಎರಡೂ ಯೋಜನೆಗಳು ಕಾರ್ಯಗತಗೊಳ್ಳಲಿ ಎಂಬ ಜಾಣತನದ ಮಾತನ್ನಾಡುತ್ತಿದ್ದಾರೆ. ಆದರ ಈ ರಾಜಕಾರಣಿಗಳು ಬದ್ಧತೆ ಪ್ರದರ್ಶಿಸಬೇಕು. ಯಾವುದು ಮುಖ್ಯ, ಯಾವುದು ಅಮುಖ್ಯ ಎಂಬ ಪ್ರಜ್ಞೆ ಇರಲಿ. ಕಳೆದ ಚುನಾವಣೆಯಲ್ಲಿ ಶಾಶ್ವತ ನೀರಾವರಿ ವಿಚಾರ ಮುಂದಿಟ್ಟು ಮತಪಡೆದ ಮೊಯ್ಲಿ, ಈಗ ಚುನಾವಣೆ ಬರುತ್ತಿದ್ದಂತೆ ಕಾವೇರಿ ನೀರು ಕೊಡುವ ಪೊಳ್ಳು ಭರವಸೆ ಕೊಡುವ ಹುನ್ನಾರ ಮಾಡಿದ್ದಾರೆ. ಇದಕ್ಕೆ ನಮ್ಮ ಒಕ್ಕೊರಲ ಖಂಡನೆ ಇದೆ ಎಂದರು.
31ಕ್ಕೆ ಬಂದ್: ಎತ್ತಿನಹೊಳೆ ಶಿಲಾನ್ಯಾಸಕ್ಕೆ ಗೊತ್ತುಪಡಿಸಿರುವ ಜ.31ರಂದು ಇಡೀ ಚಿಕ್ಕಬಳ್ಳಾಪುರ ಜಿಲ್ಲೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಅಂದು ಸರ್ಕಾರದ ವಿರುದ್ಧ ಗಂಭೀರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
28ರ ಪ್ರತಿಭಟನೆಗೂ ಬೆಂಬಲ: ಜ.28ರಂದು ಬಯಲುಸೀಮೆ ವ್ಯಾಪ್ತಿಯ 9 ಜಿಲ್ಲೆಗಳಲ್ಲೂ ನಡೆಸಲು ಉದ್ದೇಶಿಸಿರುವ ಬಂದ್ ಬೆಂಬಲಿಸಲಾಗುವುದು. ನಮ್ಮ ಉದ್ದೇಶ ಶಾಶ್ವತ ನೀರಾವರಿ ಯೋಜನೆ ಜಾರಿಯಾಗಬೇಕು ಎಂಬುದೇ ಹೊರತು, ಯಾವುದೇ ಪ್ರತಿಷ್ಠೆಗಳಲ್ಲ. ಹೀಗಾಗಿ ಯಾರು ಯಾವುದೇ ರೀತಿಯ ಹೋರಾಟಗಳನ್ನು ರೂಪಿಸಿದರೂ ಅದನ್ನು ಬೆಂಬಲಿಸಬೇಕಿದೆ ಎಂದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರಾದ ಕೆ.ಸಿ.ರಾಜ್ಕಾಂತ್, ಕಾಮ್ರೆಡ್ ಲಕ್ಷ್ಮಯ್ಯ, ಬೈರೇಗೌಡ, ಪಿ.ನಾರಾಯಣಸ್ವಾಮಿ, ಸುಲೋಚನಮ್ಮ ವೆಂಕಟರೆಡ್ಡಿ, ಸಂಜೀವನಾಯಕ್, ಡಿ.ಪಿ.ಆಂಜನೇಯ, ಹ.ರಾಮಕೃಷ್ಣ, ನಾಗಸಂದ್ರ ಪ್ರಸನ್ನ, ಟಿ.ಜಿ.ಮಂಜುನಾಥ್, ನಗರಸಭಾ ಸದಸ್ಯ ಪ್ರಕಾಶ್, ಕೆಂಪರಾಜ್
ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.