ಡಬ್ಬಿಂಗ್ ವಿರೋಧಿ ಹೋರಾಟಕ್ಕೆ ಬೆಂಬಲ
ದೊಡ್ಡಬಳ್ಳಾಪುರ: ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋಧಿಸಿ ಅಖಿಲ ಕರ್ನಾಟಕ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಮತ್ತು ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಜ.27ರ ಸೋಮವಾರ ನಡೆಯುತ್ತಿರುವ ಹೋರಾಟಕ್ಕೆ ದೊಡ್ಡಬಳ್ಳಾಪುರ ತಾಲೂಕು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಕನ್ನಡದ ಹೆಸರಿನಲ್ಲಿ ಹಣ ಮಾಡಲು ಡಬ್ಬಿಂಗ್ ಪರವಾಗಿ ದನಿಯೆತ್ತಿರುವ ಪಟ್ಟಭದ್ರಹಿತಾಸಕ್ತಿಗಳ ಕುತಂತ್ರ ಖಂಡಿಸಿ ನಟ ಶಿವರಾಜ್ಕುಮಾರ್ ಮತ್ತು ಇತರ ಕಲಾವಿದರ ಸಹಭಾಗಿತ್ವದಲ್ಲಿ ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ತಾಲೂಕು ಮತ್ತು ಜಿಲ್ಲಾ ಶಿವರಾಜ್ಕುಮಾರ್ ಕನ್ನಡ ಸೇನಾ ಸಮಿತಿ, ರಾಶಿರಾಪು ಕನ್ನಡ ಸಂಘ, ಡಾ.ರಾಜ್ ರೈತ ಕಾರ್ಮಿಕ ಸಂಘ, ಶ್ರೀಭುವನೇಶ್ವರಿ ಕನ್ನಡ ಸಂಘ, ಕರ್ನಾಟಕ ರತ್ನ ಡಾ.ರಾಜ್ ಅಭಿಮಾನಿಗಳ ಸಂಘ, ನವಜಾಗೃತಿ ಡಾ.ರಾಜ್ ಅಭಿಮಾನಿಗಳ ಸಂಘ ಮತ್ತಿತರ ಸಂಘಟನೆಗಳು ಬೆಂಬಲಿಸಿವೆ ಎಂದು ಹ.ರಾಮಕೃಷ್ಣ, ತ.ನ.ಪ್ರಭುದೇವ್, ಪ್ರಕಾಸ್, ಸು.ನರಸಿಂಹಮೂರ್ತಿ, ಸುರೇಶ್ರಾವ್, ಕೇಬಲ್ರಾಜು, ಮೋಹನ್ಕುಮಾರ್, ಡಿ.ಸಿ.ಚೌಡರಾಜು, ಕೆ.ಕೆ.ವೆಂಕಟೇಶ್, ಪರಮೇಶ್ ಮತ್ತಿತರರು ತಿಳಿಸಿದ್ದಾರೆ.
ಲಯನ್ಸ್ ಜಿಲ್ಲಾ ರಾಜ್ಯಪಾಲರ ಭೇಟಿ
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಕ್ಲಬ್, ದೊಡ್ಡಬಳ್ಳಾಪುರ ಲಯನ್ಸ್ ಚಾರಿಟೀಸ್ ಟ್ರಸ್ಟ್ಗೆ ಜಿಲ್ಲಾ ಲಯನ್ಸ್ ರಾಜ್ಯಪಾಲ ಆರ್.ಕುಮಾರ್ ಅಧಿಕೃತ ಭೇಟಿ ಮತ್ತು ಸೇವಾ ಕಾರ್ಯಗಳ ಉದ್ಘಾಟನಾ ಕಾರ್ಯಕ್ರಮ ಜ.27ರ ಸೋಮವಾರ ನಡೆಯಲಿದೆ. ಬೆಳಗ್ಗಿನಿಂದ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಿವಿಧ ಸೇವಾ ಕಾರ್ಯಗಳ ಉದ್ಘಾಟನೆ ನಡೆಯಲಿದೆ. ಸಂಜೆ ಲಯನ್ಸ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷ ಆರ್.ವಿ.ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಯಾಣಿಕರಿಗೆ ತಟ್ಟಿದ ಟೋಲ್ ಶುಲ್ಕದ ಬಿಸಿ
ಹೊಸಕೋಟೆ: ಪಟ್ಟಣದ ಬಳಿ ರಾ.ಹೆ.ಯಲ್ಲಿ ಲ್ಯಾನ್ಕೋ ಸಂಸ್ಥೆ ಟೋಲ್ ಸಂಗ್ರಹಣೆ ಕೇಂದ್ರ ಸ್ಥಾಪಿಸಿದ್ದು, ಡಿ.20ರಿಂದ ವಾಹನಗಳಿಂದ ಶುಲ್ಕ ವಸೂಲಿ ಪ್ರಾರಂಭಿಸಿದೆ. ಜ.1ರಿಂದ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಕೋಲಾರ, ಚಿಂತಾಮಣಿ, ಮಾಲೂರು, ಹೊಸಕೋಟೆಯಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ 2 ರು. ದರ ಹೆಚ್ಚಿಸಲಾಗಿತ್ತು. ಜ. 21 ರಿಂದ ಬಿಎಂಟಿಸಿ ಬಸ್ಗಳಲ್ಲೂ 2 ರು. ಹೆಚ್ಚಿಗೆ ವಸೂಲು ಮಾಡಲಾಗುತ್ತಿದೆ. ಈ ಶುಲ್ಕ ಹೊಸಕೋಟೆಯಿಂದ ಬೆಂಗಳೂರು ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ಮಾತ್ರ ಸೀಮಿತಗೊಂಡಿದೆ. ಹುಸ್ಕೂರು ಕೋಡಿಯಿಂದ ಹಿಂದಿನ ದರಗಳನ್ನೇ ಮುಂದುವರಿಸಲಾಗಿದೆ. ಹೊಸಕೋಟೆಯಿಂದ ಕೆ.ಆರ್.ಪುರವರೆಗೆ ಸುಮಾರು 12 ಕಿ.ಮೀ.ಗಳಷ್ಟೆ ಚತುಷ್ಪಥ ರಸ್ತೆ ನಿರ್ಮಿಸಿದ್ದು, ಕೇವಲ ಸರ್ವೀಸ್ ರಸ್ತೆಯಲ್ಲಿಯೇ ಹೆಚ್ಚಾಗಿ ಸಂಚರಿಸುವ ಬಿಎಂಟಿಸಿ ಬಸ್ಗಳಿಗೆ ಟೋಲ್ ವಿಧಿಸುತ್ತಿರುವುದು, ಈಗಲೇ ಸ್ಟೇಜ್ ನಿಗದಿಪಡಿಸುವಲ್ಲಿ ಆಗಿರುವ ನ್ಯೂನತೆಯಿಂದಾಗಿ ಹೆಚ್ಚು ಪ್ರಯಾಣ ದರ ನೀಡುತ್ತಿರುವವರಿಗೆ ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಸ್ಥಳೀಯರು ವಾಸಸ್ಥಳದ ಬಗ್ಗೆ ಗುರುತುನ ಚೀಟಿ ಹಾಜರುಪಡಿಸಿದಲ್ಲಿ ಮಾತ್ರ ವಿನಾಯಿತಿ ನೀಡಬೇಕು. ವಿಧಿಸುತ್ತಿರುವ ಹೆಚ್ಚುವರಿ 2 ರು. ದರವನ್ನು ಕೂಡಲೇ ನಿಲ್ಲಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ವಿಫಲವಾದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಶಕ್ತಿ ದೇವತೆಯ ಮೆರವಣಿಗೆ
ದೇವನಹಳ್ಳಿ: ಇಲ್ಲಿನ ಸರೋವರ ಬೀಜಿ ಅಣ್ಣಮ್ಮ ದೇವಿ ಸೇವಾ ಸಮಿತಿಯವರು ಅಣ್ಣಮ್ಮ ದೇವಿ, ಮಾರಮ್ಮ ದೇವಿ, ದೊಡ್ಡಮ್ಮ ದೇವಿ, ಪೂಜಮ್ಮದೇವಿ ಹಾಗೂ ಮುನೇಶ್ವರಸ್ವಾಮಿ ದೇವತೆಗಳ ಜಾತ್ರಾ ಮಹೋತ್ಸವ ಕಳೆದ ಐದು ದಿನಗಳಿಂದ ಆಯೋಜಿಸಿದ್ದು ಪ್ರತಿ ದಿನಿ ವಿವಿಧ ಪೂಜಾಕಾರ್ಯಗಳೊಂದಿಗೆ ಅನೇಕ ಧಾರ್ಮಿಕ ಸಮಾರಂಭಗಳನ್ನು ಆಯೋಜಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

